ಎತ್ತರದ ಕಟ್ಟಡಗಳಿಗೆ ಸೆಸ್, ಬಾಲ್ಯ ವಿವಾಹಕ್ಕೆ ಮತ್ತಷ್ಟು ಕಠಿಣ ಕಾನೂನು; ಸಂಪುಟ ಸಭೆಯಲ್ಲಿ ನಿರ್ಧಾರ
ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ, ರಾಜ್ಯ ಸಚಿವ ಸಂಪುಟವು 'ಬಾಲ್ಯ ವಿವಾಹ ನಿಷೇಧ ಕಾಯ್ದೆ'ಗೆ ಮಹತ್ವದ ತಿದ್ದುಪಡಿಗಳನ್ನು ತರಲು ಒಪ್ಪಿಗೆ ಸೂಚಿಸಿದೆ.;
ರಾಜ್ಯದ ಎಲ್ಲಾ ಬಹುಮಹಡಿ ಮತ್ತು ಎತ್ತರದ ಕಟ್ಟಡಗಳ ಮೇಲೆ 1% ಸೆಸ್ ವಿಧಿಸಲು ಮತ್ತು ಬಾಲ್ಯ ವಿವಾಹವನ್ನು ತಡೆಯಲು ಅಸ್ತಿತ್ವದಲ್ಲಿರುವ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. .
ಅಗ್ನಿಶಾಮಕ ದಳದ ಕಾಯ್ದೆಯ ವ್ಯಾಪ್ತಿಗೆ ಬರುವ ಎಲ್ಲಾ ಬಹುಮಹಡಿ ಮತ್ತು ಎತ್ತರದ ಕಟ್ಟಡಗಳಿಗೆ 1% ರಷ್ಟು ಸೆಸ್ ವಿಧಿಸಲು ತೀರ್ಮಾನಿಸಲಾಗಿದೆ. ವಾಣಿಜ್ಯ ಕಟ್ಟಡಗಳು, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಎಲ್ಲಾ ಎತ್ತರದ ಕಟ್ಟಡಗಳು ಈ ಹೊಸ ಸೆಸ್ ವ್ಯಾಪ್ತಿಗೆ ಬರಲಿವೆ. ಅಗ್ನಿ ಸುರಕ್ಷತಾ ಕ್ರಮಗಳನ್ನು ಬಲಪಡಿಸಲು ಮತ್ತು ಇಲಾಖೆಯ ಸಬಲೀಕರಣಕ್ಕಾಗಿ ಈ ಸೆಸ್ ಅನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.
ಬಾಲ್ಯ ವಿವಾಹಕ್ಕೆ ಬೀಳಲಿದೆ ಬ್ರೇಕ್
ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ, ರಾಜ್ಯ ಸಚಿವ ಸಂಪುಟವು 'ಬಾಲ್ಯ ವಿವಾಹ ನಿಷೇಧ ಕಾಯ್ದೆ'ಗೆ ಮಹತ್ವದ ತಿದ್ದುಪಡಿಗಳನ್ನು ತರಲು ಒಪ್ಪಿಗೆ ಸೂಚಿಸಿದೆ.
ಹೊಸ ತಿದ್ದುಪಡಿಯ ಪ್ರಕಾರ, ಬಾಲ್ಯ ವಿವಾಹವನ್ನು ನಡೆಸಿಕೊಡುವುದು ಮಾತ್ರವಲ್ಲ, ಅದರ ನಿಶ್ಚಿತಾರ್ಥ ಅಥವಾ ಮಾತುಕತೆಯಲ್ಲಿ ಭಾಗಿಯಾದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. 'ತೊಟ್ಟಿಲು ಮದುವೆ'ಯಂತಹ ಪದ್ಧತಿಗಳನ್ನು ನಡೆಸಿದರೂ, ಅದನ್ನು ಬಾಲ್ಯ ವಿವಾಹವೆಂದೇ ಪರಿಗಣಿಸಿ ಶಿಕ್ಷೆ ವಿಧಿಸಲಾಗುತ್ತದೆ. ಕುಟುಂಬಸ್ಥರು ಒಪ್ಪಿಗೆ ನೀಡಿದರೂ ಅಥವಾ ಯಾರೇ ಒತ್ತಡ ಹೇರಿದರೂ, ಅಂತಹವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು. ಈ ಕಠಿಣ ನಿಯಮಗಳು ಬಾಲ್ಯ ವಿವಾಹವನ್ನು ಮೂಲದಲ್ಲೇ ಚಿವುಟಿ ಹಾಕುವ ಸರ್ಕಾರದ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತವೆ.