ʻಬಿಜೆಪಿ ಸೋತರೂ ಸುಲಭವಾಗಿ ಅಧಿಕಾರ ಹಸ್ತಾಂತರಿಸುವುದಿಲ್ಲʼ: ಜನಾಭಿಪ್ರಾಯ ರಕ್ಷಿಸಲು ʻಎದ್ದೇಳು ಕರ್ನಾಟಕʼದಿಂದ ಸಮಾಲೋಚನಾ ಸಭೆ

Update: 2024-05-22 10:00 GMT

ಚುನಾವಣಾ ಆಯೋಗವು ಪಕ್ಷಪಾತಿಯಾಗಿದ್ದು, ಬಿಜೆಪಿ ಸರ್ವಾಧಿಕಾರಿ ನಡೆ ಅನುಸರಿಸುತ್ತಿದೆ ಎಂದು ಪ್ರಗತಿಪರ ವಲಯ ಆರೋಪಿಸುತ್ತಿದೆ. ಈ ಕುರಿತು 'ಎದ್ದೇಳು ಕರ್ನಾಟಕ ಸಂಘಟನೆ'ಯು ಇತ್ತೀಚೆಗೆ ಸಮಾಲೋಚನಾ ಸಭೆ ನಡೆಸಿ, ಜನಾಭಿಪ್ರಾಯಕ್ಕೆ ಇರುವ ಅಪಾಯ ಮತ್ತು ಜನಾಭಿಪ್ರಾಯವನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದೆ.

ಈ ಕುರಿತು ಎದ್ದೇಳು ಕರ್ನಾಟಕ ಸಂಘಟನೆಯ ಸಮನ್ವಯಕಾರರಾದ ತಾರಾ ರಾವ್‌ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ʻʻಚುನಾವಣಾ ಆಯೋಗದ ನಿರ್ಲಜ್ಜ ಪಕ್ಷಪಾತ ಹಾಗೂ ಬಿಜೆಪಿ ಪಕ್ಷದ ಸರ್ವಾಧಿಕಾರಿ ನಡತೆಯ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವಕ್ಕೆ ಇರುವ ಅಪಾಯ ಹಾಗೂ ಮತದಾರರ ಜವಬ್ದಾರಿಯ ಕುರಿತು ಸಮಾಲೋಚನಾ ಸಭೆ ನಡೆಸಲಾಯಿತುʼʼ ಎಂದು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

ʻʻಬಿಜೆಪಿ ಸೋಲುತ್ತದೆ ಆದರೆ ಸುಲಭವಾಗಿ ಅಧಿಕಾರ ಹಸ್ತಾಂತರಿಸುವುದಿಲ್ಲ. ಜನಾಭಿಪ್ರಾಯವನ್ನು ರಕ್ಷಿಸಿಕೊಳ್ಳಲು ಜನಸಂಘಟನೆಗಳು ಮುಂದಾಗಲೇಬೇಕು. ಕಳೆದ 10 ವರ್ಷದ ಆಳ್ವಿಕೆ ನಡೆಸಿದ ಬಿಜೆಪಿ ಕೊಟ್ಟ ಮಾತನ್ನು ಈಡೇರಿಸುವಲ್ಲಿ ವಿಫಲಗೊಂಡಿದೆ, ಮತಗಳನ್ನು ಪಡೆಯಲು ಧಾರ್ಮಿಕ ದ್ವೇಷ ಮತ್ತು ಸುಳ್ಳು ಸುದ್ದಿಗಳನ್ನು ಅದು ಆಧರಿಸಿದೆ, ಆದರೆ ಅದಕ್ಕೆ ಜನ ಮರಳಾಗುವ ಸ್ಥಿತಿಯಲ್ಲಿ, ಬಿಜೆಪಿಯ ವಿರುದ್ಧ ವಿವಿಧ ಜನವರ್ಗಗಳು, ಸಮುದಾಯಗಳು ಬಿಜೆಪಿಯ ಬಗ್ಗೆ ಆಕ್ರೋಶಿತಗೊಂಡಿದ್ದಾರೆ. ದೇಶದಾದ್ಯಂತ ಜನಪರ ಸಂಘಟನೆಗಳು ಹಾಗೂ ನಾಗರೀಕ ರಾಜಕೀಯ ವೇದಿಕೆಗಳು ಬಿಜೆಪಿಯನ್ನು ಸೋಲಿಸಲು ಅವಿರತವಾಗಿ ಶ್ರಮಿಸಿವೆ, ವಿರೋಧ ಪಕ್ಷಗಳೂ ತಕ್ಕಮಟ್ಟಿಗೆ ಜನರ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಗೊಂಡಿವೆ. ಜನರ ಬದುಕಿಗೆ ಒಂದಷ್ಟು ಆಸರೆಯಾಗುವಂತಹ ಗ್ಯಾರಂಟಿಗಳನ್ನು ಕಾಂಗ್ರೆಸ್ ಮುಂದಿಟ್ಟಿದೆ. ಇದೆಲ್ಲದರ ಪರಿಣಾಮವಾಗಿ ಬಿಜೆಪಿ ಸೋಲಿನ ಕಡೆ ನಿಚ್ಚಳವಾಗಿ ಮುಖ ಮಾಡಿದೆ. ಆದರೆ ಅದು ಸೋಲನ್ನು ಒಪ್ಪಿಕೊಂಡು ಹಿಂದೆ ಸರಿಯುವುದಿಲ್ಲ, ಬಹುಮತ ಗಳಿಸಲಿರುವ INDIA ಒಕ್ಕೂಟಕ್ಕೆ ಅಧಿಕಾರ ಹಸ್ತಾಂತರಿಸುವುದಿಲ್ಲ ಎಂಬ ಆತಂಕ ನಾಗರೀಕ ಸಮಾಜವನ್ನು ಕಾಡುತ್ತಿದೆʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ʻʻಈ ಹಿನ್ನೆಲೆಯಲ್ಲಿ ಜನಾಭಿಪ್ರಾಯಕ್ಕೆ ಇರುವ ಅಪಾಯ ಮತ್ತು ಜನಾಭಿಪ್ರಾಯವನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಉನ್ನತ ಮಟ್ಟದ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿತ್ತು, ಈ ಸಭೆಯಲ್ಲಿ ಪ್ರಸಿದ್ಧ ಜನಪರ ಆರ್ಥಿಕ ತಜ್ಞ ಪರಕಾಲ ಪ್ರಭಾಕರ್, ಪ್ರಸಿದ್ಧ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾದ್, ನಿವೃತ್‌ತ ಐಎಎಸ್ ಅಧಿಕಾರಿ ಮತ್ತು ಇವಿಎಂ ವಿರೋಧಿ ಅಭಿಯಾನದ ರೂವಾರಿಗಳಲ್ಲೊಬ್ಬರಾದ ದೇವಸಾಹಯಂ, ಪ್ರಸಿದ್ಧ ಭಾಷಾ ತಜ್ಞ ಗಣೇಶ್ ದೇವಿ, ನಿವೃತ್ತ ಮೇಜರ್ ಜನರಲ್ ವೊಂಭತ್ತಕೆರೆ, ನಿವೃತ್ತು ಕ್ಯಾಬಿನೇಟ್ ಸಚಿವಾಲಯದ ಜಂಟಿ ಕಾರ್ಯದರ್ಶಿ ರವಿ ಜೋಶಿ, ಎಐಸಿಸಿಯ ಕಾರ್ಯಾಧ್ಯಕ್ಷರಾದ ಗುರುದೀಪ್ ಸಪ್ಪಾಲ್ ಮುಂತಾದ ಅನೇಕ ಗಣ್ಯರು ಭಾಗವಹಿಸಿದ್ದರು. ಇಡೀ ದಿನದ ಚಿಂತನ ಮಂಥನದ ನಂತರ ಸಭೆ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದೆʼʼ ಎಂದು ತಿಳಿಸಿದ್ದಾರೆ.

ʻʻಲೋಕಸಭಾ ಚುನಾವಣೆಯ ತೀರ್ಪಿನ ಹಂತದಲ್ಲಿ ಎರಡು ಅಪಾಯಗಳು ನಮ್ಮ ಮುಂದಿವೆ: ಒಂದು - ಮತ ಎಣಿಕೆಯನ್ನು ಮ್ಯಾನಿಪ್ಯುಲೇಟ್ ಮಾಡುವ ಅಪಾಯ, ಎರಡು - ತೀರ್ಪನ್ನೇ ಅಪರಾತಪರಾ ಮಾಡುವ ಅಪಾಯʼʼ ಎಂದು ಎಚ್ಚರಿಕೆ ನೀಡಿದ್ದಾರೆ.

ಅಭಿಯಾನ

ʻʻಜನತೆಯ ತೀರ್ಪನ್ನು ರಕ್ಷಿಸಿಕೊಳ್ಳುವುದಕ್ಕಾಗಿ ನಾವು 5 ರೀತಿಯ ಕರ್ತವ್ಯಗಳನ್ನು ಕೈಗೆತ್ತಿಕೊಳ್ಳಬೇಕಿದೆ. 1) ನ್ಯಾರೇಟಿವ್ ಕರ್ತವ್ಯ: "ಮತದಾರರ ಇಚ್ಛೆಯೇ ಜನತಂತ್ರದ ಫಲಿತಾಂಶವಾಗಬೇಕು" ಎಂಬ ಹೆಸರಿನಲ್ಲಿ ಬೃಹತ್ತಾದ 'ಮತದಾರರ ಹಕ್ಕಿನ ಕ್ಯಾಂಪೇನ್' ಕೈಗೊಳ್ಳಬೇಕು. 2) ಮತ ಎಣಿಕೆ ಕರ್ತವ್ಯ: ಮತ ಎಣಿಕೆಯಲ್ಲಿ ಗೋಲ್‌ಮಾಲ್ ಮಾಡುವುದನ್ನು ತಡೆಗಟ್ಟಲು 'ನಾಗರಿಕರ ಕಣ್ಣಾವಲು ಕಮಿಶನ್'ಅನ್ನು ರಚಿಸಲು ತೀರ್ಮಾನಿಸಲಾಗಿದೆ. 3) ಕಾನೂನು ಕರ್ತವ್ಯ: ಮತ ಎಣಿಕೆ ಪ್ರಕ್ರಿಯೆಯಲ್ಲಿ ಮಧ್ಯೆ ಪ್ರವೇಶಿಸಿ ಅದನ್ನು ನಿರ್ದೆಶನ ಮತ್ತು ಮೇಲ್ವಿಚಾರಣೆ ಮಾಡುವಂತೆ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸುವುದು. 4) ರಾಜಕೀಯ ಕರ್ತವ್ಯ: ಎದುರಾಗಿರುವ ಅತಿಗಂಭೀರ ಅಪಾಯದ ಬಗ್ಗೆ ರಾಜಕೀಯ ಪಕ್ಷಗಳನ್ನು ಎಚ್ಚರಿಸಿ ಮೇಲ್ಕಂಡ ಮ್ಯಾನಿಪ್ಯುಲೇಶನ್‌ಗಳನ್ನು ತಡೆಗಟ್ಟಲು ಮುಂದೊಡಗು ತೆಗೆದುಕೊಳ್ಳುವಂತೆ ಅವುಗಳ ಮೇಲೆ ಒತ್ತಡ ಉಂಟುಮಾಡುವುದು. 5) ಅಣಿನೆರೆಸುವ ಕರ್ತವ್ಯ: ಒಂದು ವೇಳೆ ಬಿಜೆಪಿ ಅನೈತಿಕ ಮಾರ್ಗ ಹಿಡಿದು, ಅಧಿಕಾರ ಹಸ್ತಾಂತರದ ಪ್ರಜಾತಾಂತ್ರಿಕ ವಿಧಾನಗಳನ್ನು ಉಲ್ಲಂಘಿಸಿ, ಮ್ಯಾನಿಪ್ಯುಲೇಶನ್, ನೀತಿ ನಿಯಮಗಳ ಉಲ್ಲಂಘನೆ, ಗೂಂಡಾಗಿರಿ, ಪಕ್ಷಗಳ ವಿಭಜನೆ, ಡಮ್ಮಿ ಸರ್ಕಾರದ ರಚನೆ ಮುಂತಾದವುಗಳಿಗೆ ಇಳಿದಿದ್ದೇ ಆದಲ್ಲಿ ನಾಗರೀಕರಾಗಿ ನಾವು ಸುಮ್ಮನಿರಬಾರದು, ಮತದಾರರ ಇಚ್ಛೆಯನ್ನು ರಕ್ಷಿಸಿಕೊಳ್ಳಲು ನಾವು ದೇಶವ್ಯಾಪಿಯಾಗಿ ಶಾಂತಿಯುತವಾದ ಪ್ರಬಲ ಸತ್ಯಾಗ್ರಹವನ್ನು ಆರಂಭಿಸಬೇಕು, ಈ ಒಂದು ವಾರ ಕಾಲ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಮಾಲೋಚನೆಗಳನ್ನು ಮುಂದುವರಿಸಬೇಕು, ತಿಂಗಳ ಕೊನೆಯ ಹೊತ್ತಿಗೆ ನಾಗರಿಕರ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಚಳವಳಿಯನ್ನು ಮತದಾರರ ಇಚ್ಛೆಯೇ ಜನತಂತ್ರದ ಫಲಿತಾಂಶವಾಗಬೇಕು” ಎಂಬ ಹೆಸರಿನಲ್ಲಿ ಆರಂಭಿಸಲಾಗುವುದು ಎಂದು ಎದ್ದೇಳು ಕರ್ನಾಟಕ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Similar News