Honey Trap | ಸಂಸತ್ತಿನಲ್ಲಿ ಪ್ರತಿಧ್ವನಿಸಲಿದೆ ʼಹನಿ ಟ್ರಾಪ್‌ ಪ್ರಕರಣʼ; ಕಾಂಗ್ರೆಸ್‌ ಮುಖಭಂಗಕ್ಕೆ ಬಿಜೆಪಿ ಸಜ್ಜು

ಸೋಮವಾರ ನಡೆಯುವ ಕಲಾಪದ ವೇಳೆ ಕರ್ನಾಟಕವನ್ನು ಪ್ರತಿನಿಧಿಸುವ ಎಲ್ಲಾ ಸಂಸದರು ಕಡ್ಡಾಯವಾಗಿ ಹಾಜರಿರುವಂತೆ ನಡ್ಡಾ ಸೂಚನೆ ಕೊಟ್ಟಿದ್ದಾರೆ. ಪ್ರಕರಣವನ್ನು ಕೆದಕಿದಷ್ಟೂ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌‍ಗೆ ಹಿನ್ನಡೆ ಉಂಟು ಮಾಡುವುದರ ಜೊತೆಗೆ ಸಾಧ್ಯವಾದಷ್ಟೂ ಮುಜುಗರ ಮಾಡಬೇಕೆಂಬುದು ಕೇಸರಿ ಪಡೆಯ ಲೆಕ್ಕಾಚಾರ.;

Update: 2025-03-24 00:30 GMT

ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಸೃಷ್ಟಿಸಿರುವ ಪ್ರಭಾವಿ ರಾಜಕಾರಣಿಯಿಂದಲೇ ನಡೆದಿದೆ ಎನ್ನಲಾದ ಸಚಿವರ ಹಾಗೂ ಇತರ ರಾಜಕಾರಣಿಗಳ ಹನಿಟ್ರ್ಯಾಪ್‌ ಪ್ರಕರಣವನ್ನು ಬಿಜೆಪಿ ಸಂಸತ್‌ನ ಉಭಯ ಸದನಗಳಲ್ಲಿ ಪ್ರಸ್ತಾಪಿಸಲು ಮುಂದಾಗಿದ್ದು, ಕಾಂಗ್ರೆಸ್‌‍ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ  ಸಾಧ್ಯತೆ ದಟ್ಟವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾದ ಸಚಿವರ ವಿರುದ್ಧ ಸಂಪುಟ ಸಹೋದ್ಯೋಗಿಯೊಬ್ಬರು ಹನಿಟ್ರ್ಯಾಪ್‌ ನಡೆಸಲು ಮುಂದಾಗಿದ್ದಾರೆ ಎಂಬ ಆರೋಪ ಕರ್ನಾಟಕ ಮಾತ್ರವಲ್ಲದೆ ದೆಹಲಿ ಮಟ್ಟದಲ್ಲೂ ಸದ್ದು ಮಾಡಿದೆ. ಸಂಸತ್‌ನಲ್ಲಿ ಬಜೆಟ್‌ ಮೇಲಿನ ಮುಂದುವರೆದ ಚರ್ಚೆ ನಡೆಯುತ್ತಿದ್ದು,  ಪ್ರತಿಯೊಂದು ವಿಷಯದಲ್ಲೂ ಸರ್ಕಾರದ ಮೇಲೆ ಮುಗಿಬೀಳುತ್ತಿರುವ ವಿರೋಧ ಪಕ್ಷ ಕಾಂಗ್ರೆಸ್‌‍ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಲು ಬಿಜೆಪಿ ಹನಿಟ್ರಾಪ್‌ ವಿಷಯ ಪ್ರಸ್ತಾಪಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಕೆಲವು ಸಚಿವರು ಮತ್ತು ಸಂಸದರಿಗೆ ಮೌಖಿಕ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಕೇಂದ್ರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ, ಪ್ರಹ್ಲಾದ್‌ ಜೋಷಿ, ಸಂಸದರಾದ ತೇಜಸ್ವಿ ಸೂರ್ಯ, ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್‌  ಮತ್ತಿತರರಿಗೆ ವಿಷಯ ಪ್ರಸ್ತಾಪಿಸಲು ಸೂಚನೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎರಡು ದಿನಗಳ ಹಿಂದೆ ಮುಕ್ತಾಯಗೊಂಡ  ಕರ್ನಾಟಕ ಬಜೆಟ್‌ ಅಧಿವೇಶನದ ವೇಳೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರೇ ʼನನ್ನನ್ನು ಹನಿಟ್ರಾಪ್‌ಗೆ ಕೆಡವಲು ಪ್ರಯತ್ನ ನಡೆದಿತ್ತುʼ ಎಂದು ಆರೋಪ ಮಾಡಿದ್ದು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸದ್ದು ಮಾಡಿತ್ತು. ಸಿಕ್ಕಿರುವ ಅವಕಾಶದಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲೂ ಮುಜುಗರಕ್ಕೀಡು ಮಾಡಲು ಶತ ಪ್ರಯತ್ನ ನಡೆಸಿರುವ ಬಿಜೆಪಿ, ಹನಿಟ್ರಾಪ್‌ ವಿಷಯವನ್ನು ಕೆದಕಿ ಪ್ರತಿಪಕ್ಷವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಟ್ಟಿ ಹಾಕಲು ಮುಂದಾಗಿದೆ.

ಈ ಪ್ರಕರಣವನ್ನು ಕೆದಕಿ, ಕೇಂದ್ರ ಸರ್ಕಾರದ ನೀತಿ ನಿರೂಪಣೆಗಳನ್ನು ಕಟುವಾಗಿ ಟೀಕಿಸುವ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ  ಮುಜುಗರ ಉಂಟು ಮಾಡುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಹೀಗಾಗಿ ಸೋಮವಾರ ನಡೆಯುವ ಕಲಾಪದ ವೇಳೆ ಕರ್ನಾಟಕವನ್ನು ಪ್ರತಿನಿಧಿಸುವ ಎಲ್ಲಾ ಸಂಸದರು ಕಡ್ಡಾಯವಾಗಿ ಹಾಜರಿರುವಂತೆ ನಡ್ಡಾ ಸೂಚನೆ ಕೊಟ್ಟಿದ್ದಾರೆ. ಪ್ರಕರಣವನ್ನು ಕೆದಕಿದಷ್ಟೂ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌‍ಗೆ ಹಿನ್ನಡೆ ಉಂಟು ಮಾಡುವುದರ ಜೊತೆಗೆ ಸಾಧ್ಯವಾದಷ್ಟೂ ಮುಜುಗರ ಮಾಡಬೇಕೆಂಬುದು ಕೇಸರಿ ಪಡೆಯ ಲೆಕ್ಕಾಚಾರ.

ಸಚಿವರೊಬ್ಬರ ವಿರುದ್ಧ ಕಾಂಗ್ರೆಸ್‌ ಸಂಪುಟದ ಸಹೋದ್ಯೋಗಿಯೇ ಹನಿಟ್ರಾಪ್‌ ನಡೆಸಲು ಮುಂದಾಗಿದ್ದರು ಎಂಬುದು ಮುನ್ನೆಲೆಗೆ ಬಂದರೆ ಕಾಂಗ್ರೆಸ್‌‍ ಪಕ್ಷದ ಮೈತ್ರಿ ಪಕ್ಷಗಳು ಮುಂದೆ ಇಂಡಿಯಾ ಮೈತ್ರಿಕೂಟದಿಂದ ದೂರ ಉಳಿಯಬಹುದು. ಅಲ್ಲದೆ ಆ ಪಕ್ಷದ ಜೊತೆ ಮುಂದೆ ಜರಗಬಹುದಾದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಹಿಂದೇಟು ಹಾಕಬಹುದೆಂಬ ದೂರದೃಷ್ಟಿಯೂ ಇದೆ.

ಯಾರು ಆ ಪ್ರಭಾವಿ?

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಹನಿಟ್ರಾಪ್‌ಗೆ ಸಿಲುಕಿಸಿದ ವೃತ್ತಿಪರ ತಂಡವೇ ಸಚಿವ ರಾಜಣ್ಣ ಅವರ ಮೇಲೂ ಇದೇ ಪ್ರಯತ್ನವನ್ನು ಎರಡು ಬಾರಿ ನಡೆಸಿದ್ದರು ಎನ್ನಲಾಗಿದೆ. ಜೊತೆಗೆ ಇತ್ತೀಚೆಗೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಾಣಿಕೆ ವೇಳೆ ಸಿಕ್ಕಿಬಿದ್ದ ಕರ್ನಾಟಕದ ಡಿಜಿಪಿ ರಾಮಚಂದ್ರರಾವ್‌ ಅವರ ಮಲಮಗಳು ರನ್ಯಾರಾವ್‌ ಪ್ರಕರಣವನ್ನು ಬಹಿರಂಗಗೊಳಿಸಿದ ಪ್ರಮುಖರೊಬ್ಬರೇ ಹನಿಟ್ರಾಪ್‌ನಲ್ಲೂ ಅವರ ಹೆಸರೇ ತಳುಕು ಹಾಕಿಕೊಂಡಿದೆ.

ಪ್ರತಿ ಬಾರಿಯೂ ಬೇರೆಯವರನ್ನು ಬಳಸಿಕೊಂಡು ತಮ್ಮ ರಾಜಕೀಯ ಎದುರಾಳಿಯನ್ನು ಹಣಿಯಲು ಮುಂದಾಗಿದ್ದ ಪ್ರಭಾವಿ  ನಾಯಕನನ್ನು ಶತಾಯಗತಾಯ ಹನಿಟ್ರಾಪ್‌ ಪ್ರಕರಣದಲ್ಲಿ ಸಿಲುಕಿಸಿ ಮುಖಭಂಗ ಉಂಟು ಮಾಡಲು ಬಿಜೆಪಿ ಸರ್ವ ರೀತಿಯಲ್ಲೂ ಸಜ್ಜಾಗಿದೆ.

Tags:    

Similar News