ಲೋಕ ಸ್ವಾರಸ್ಯ | ಕಾಂಗ್ರೆಸ್- ಬಿಜೆಪಿ ಮಧ್ಯೆ ಚೊಂಬು – ಖಾಲಿ ಚೊಂಬಿನ ವಾಕ್ಸಮರ
ಕಾಂಗ್ರೆಸ್ ನೀಡಿದ ಜಾಹೀರಾತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಚೊಂಬನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಬಿಜೆಪಿ ತಿರುಗೇಟು ನೀಡಿದೆ.;
ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ʻಚೊಂಬʼನ್ನು ಉಲ್ಲೇಖಿಸಿ ನೀಡಿರುವ ಜಾಹೀರಾತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪ್ರಕಟಿಸಿರುವ ಜಾಹೀರಾತಿಗೆ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದೆ. ಇದು ಎರಡೂ ಪಕ್ಷಗಳ ನಾಯಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನೀಡಿದ ಜಾಹೀರಾತಿನಲ್ಲಿ ಏನಿದೆ ?
ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎನ್ನುವ ಶೀರ್ಷಿಕೆಯಡಿ ಕಾಂಗ್ರೆಸ್ ಜಾಹೀರಾತೊಂದನ್ನು ಪ್ರಕಟಿಸಿದ್ದು, ಅದರಲ್ಲಿ ʻಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವ ಚೊಂಬು, ರೈತರ ಆದಾಯ ಡಬಲ್ ಮಾಡುವ , ತೆರಿಗೆ ಹಂಚಿಕೆಯಲ್ಲಿ , ಬರ / ನೆರೆ ಪರಿಹಾರದಲ್ಲಿ ಹಾಗೂ 27 ಜನ ಬಿಜೆಪಿ/ ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು, ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬುʼ ಎಂದು ಉಲ್ಲೇಖಿಸಲಾಗಿದೆ.
ʻಬಿಜೆಪಿಯವರಿಗೆ ಅದೇ ಚೊಂಬು ಕೊಡಿʼ
ಬಿಜೆಪಿಯವರು ಕನ್ನಡಿಗರಿಗೆ ಚೊಂಬು ನೀಡಿರುವಾಗ ಕನ್ನಡಿಗರು ಬಿಜೆಪಿಗೆ ಮರಳಿ ಅದೇ ಚೊಂಬನ್ನೆ ನೀಡಬೇಕಲ್ಲವೇ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಪ್ರಿಯಾಂಕ್ ಖರ್ಗೆ ಟ್ವೀಟ್
ಈ ಸಂಬಂಧ ಪ್ರಿಯಾಂಕ್ ಖರ್ಗೆ ಸಹ ಟ್ವೀಟ್ ಮಾಡಿದ್ದು, ಬಿಜೆಪಿಗೆ ಸರಣಿ ಪ್ರಶ್ನೆ ಕೇಳಿದ್ದಾರೆ.
ಬಿಜೆಪಿಯಿಂದ ವಿರೋಧ
ಕಾಂಗ್ರೆಸ್‌ನ ಈ ಪ್ರಕಟಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ʻಕಾಂಗ್ರೆಸ್ಸಿಗರೇ, ತಮಿಳುನಾಡಿಗೆ ನೀರು ಬಿಟ್ಟು ಕಾವೇರಿ ಮಾತೆಯ ʻತುಂಬಿದ ಕೊಡʼ ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟವರು ನೀವು. ಬೆಳೆ ಒಣಗಿಸಿ ರೈತರಿಗೆ ಚೊಂಬು ಕೊಟ್ಟವರು ನೀವು, ಇದ್ದ ಬದ್ದ ಹಣವನ್ನೆಲ್ಲ ಖಾಲಿ ಮಾಡಿಕೊಂಡು ಪರಿಶಿಷ್ಟರ/ ಹಿಂದುಳಿದವರ ಕಲ್ಯಾಣಕ್ಕೆ ಮೀಸಲಾದ ಹಣವನ್ನೂ ವರ್ಗಾಯಿಸಿಕೊಂಡು ಶೋಷಿತರಿಗೆ, ಕುಡಿಯುವ ನೀರೂ ಒದಗಿಸಲಾರದೇ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಅಲೆದಾಡುವ ಸ್ಥಿತಿ ತಂದವರು ನೀವು, ನಿರುದ್ಯೋಗಿಗಳಿಗೆ ಯುವನಿಧಿ ಹೆಸರಲ್ಲಿ ಖಾಲಿ ಚೊಂಬು ಕೊಟ್ಟವರು ನೀವು, ದೇಶದಲ್ಲಿ ಕಾಣದ ʻಕೈʼ ಸ್ಥಿತಿ ತಲುಪುತ್ತಿರುವ ನಿಮಗೆ ಕೆಲವೇ ದಿನಗಳಲ್ಲಿ ಜನರೇ ನೀಡಲಿದ್ದಾರೆ ಖಾಲಿ ಚೊಂಬʼ ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಹ ಟ್ವೀಟ್ ಮಾಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʻಜೂನ್ 4ರ ನಂತರ ನಿಮ್ಮ ಇಂಡಿ ಮೈತ್ರಿ ಕೂಟದ ಭ್ರಷ್ಟ ನಾಯಕರ ಗತಿ ಜೈಲಿನಲ್ಲಿ ಚಾಪೆ ದಿಂಬುʼ ಎಂದು ಟೀಕಿಸಿದ್ದಾರೆ.