ಹೆಣ್ಣು ಮಕ್ಕಳು ಶಾಲೆಗೆ ಹೋದರೆ ಮನೆಗೆ ವಾಪಸ್‌ ಬರುವ ಗ್ಯಾರಂಟಿ ಇಲ್ಲ: ಅಶೋಕ್‌

Update: 2024-05-26 13:12 GMT

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಎಷ್ಟು ಹದಗೆಟ್ಟು ಹೋಗಿದೆ ಎಂದರೆ, ಹೋಮ್ ಮಿನಿಸ್ಟರ್ ಯಾರು ಅನ್ನೋದೇ ಗೊತ್ತಾಗ್ತಾ ಇಲ್ಲ. ಹೆಣ್ಣು ಮಕ್ಕಳು ಶಾಲೆಗೆ ಹೋದರೆ, ಮಹಿಳೆಯರು ಕೆಲಸಕ್ಕೆ ಹೋದರೆ ಮನೆಗೆ ವಾಪಸ್ ಬರುವ ಗ್ಯಾರಂಟಿಯೇ ಇಲ್ಲ ಎಂದು ಪ್ರತಿಪಕ್ಷ ನಾಯಕರಾದ ಆರ್ ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನಪರಿಷತ್‌ ಚುನಾವಣೆ ಸಂಬಂಧ ಜೆಡಿಎಸ್‌ ಜತೆ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಎಲ್ಲ ಕಡೆ ಲೂಟಿ ಮಾಡುತ್ತಿದೆ. ಈಗ ಬಿಡಿಎ ಕಾಂಪ್ಲೆಕ್ಸ್ ಗಳನ್ನು ಮಾರಾಟಕ್ಕೆ ಇಟ್ಟಿದೆ. ಹಿಂದೆ ಲಕ್ಷ್ಮಣರಾವ್ ಅವರಂಥ ಮಹಾನುಭಾವರು ಇವನ್ನೆಲ್ಲ ಕಾಪಾಡಿಕೊಂಡು ಬಂದಿದ್ದರು. ಸರ್ಕಾರದಲ್ಲಿ ಹಣ ಇಲ್ಲ. ಅವರ ವರಿಷ್ಠರಿಗೆ ಕಪ್ಪ ಕೊಡಲು ಇಲ್ಲಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಅಶೋಕ್ ಟೀಕಿಸಿದರು.

ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿದೆ. ಬರ ನಿರ್ವಹಣೆ, ಆರೋಗ್ಯ, ಮೂಲ ಸೌಕರ್ಯದಲ್ಲಿಯೂ ವಿಫಲವಾಗಿದೆ ಈ ಸರ್ಕಾರ. ಕೇವಲ ಒಂದು ಸಮುದಾಯವನ್ನು ತುಷ್ಟೀಕರಣ ಮಾಡುತ್ತಿದೆ. ಕೊಲೆ ಸುಲಿಗೆ, ಅತ್ಯಾಚಾರದಂತ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ನವರು ಭಂಡತನದವರು, ಅವರಿಗೆ ಸೂಕ್ಷ್ಮತೆಯೇ ಇಲ್ಲ. ಅವರ ಐವತ್ತು ವರ್ಷದ ಅನುಭವ ಬರೀ ಭಾಷಣದ ಹಾವಭಾವ ಸೀಮಿತವಾಗಿ, ಸಮಾಜ ಒಡೆಯುವುದಕ್ಕೆ ಮಾತ್ರ ಮೀಸಲಾಗಿದೆ ಎಂದು ದೂರಿದರು.

ಕಾಂಗ್ರೆಸ್ ಮುಕ್ತ ಕರ್ನಾಟಕವೇ ಈ ಮೈತ್ರಿ ಉದ್ದೇಶ. ಎರಡೂ ಪಕ್ಷಗಳ ಉದ್ದೇಶ ಒಂದೇ, ಕಾಂಗ್ರೆಸ್ ವಿರೋಧಿ ನೀತಿ. ಹೀಗಾಗಿ ನಾವು ಒಂದಾಗಿದ್ದೇವೆ. ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದೇವೆ. ದೇವೇಗೌಡರು ಮೋದಿ ಅವರು ಈ ಮೈತ್ರಿಗೆ ಕಾರಣರು ಎಂದರು.

ಸಮೃದ್ಧ ಕರ್ನಾಟಕ ನಿರ್ಮಾಣ ಈ ಮೈತ್ರಿಕೂಟದಿಂದ ಸಾಧ್ಯ. ಕಾಂಗ್ರೆಸ್ ಎದುರಿಸಲು ನಾವು ಒಂದಾಗಿದ್ದೇವೆ. ಕುಮಾರಸ್ವಾಮಿ ಅವರ ಪ್ರೀತಿಗೆ ನಾವು ಪೂರ್ಣವಾಗಿ ಸೋತಿದ್ದೇವೆ. ನಮ್ಮನ್ನೆಲ್ಲ ಪ್ರೀತಿಯಿಂದ ಕರೆದು ಮಾತನಾಡಿದ್ದಾರೆ. ಜನರು ಕಾರ್ಯಕರ್ತರು ನಮ್ಮನ್ನು ಒಪ್ಪಿದ್ದಾರೆ. ಮೊದಲ ಪರೀಕ್ಷೆಯಲ್ಲಿ ನಾವು ಪಾಸಾಗುತ್ತೇವೆ.

Similar News