ಬಿಜೆಪಿ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಭೆ: ಸಿಎಂ ಸಿದ್ದರಾಮಯ್ಯ ಆರೋಪ

ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಭೆಗಳಾಗುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

Update: 2024-09-20 11:51 GMT
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಸಿ.ಎಂ ಮಾತನಾಡಿದರು.
Click the Play button to listen to article

ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಭೆಗಳಾಗುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಬಿಜೆಪಿಯವರ ಪ್ರಚೋದನೆ ಕಾರಣದಿಂದಲೇ ಗಲಾಟೆಗಳು ನಡೆಯುತ್ತಿವೆ. ರಾಜ್ಯದಲ್ಲಿ 60ಸಾವಿರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಇದುವರೆಗೆ ಎರಡು ಕಡೆಯಷ್ಟೆ ಗಲಾಟೆ ನಡೆದಿದೆ. ದಾವಣಗೆರೆಯಲ್ಲಿ ಕಲ್ಲು ತೂರಾಟವಷ್ಟೆ ಆಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಆ ಘಟನೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಮುಂಜಾಗ್ರತೆ ವಹಿಸುವಂತೆಯೂ ಸೂಚಿಸಿದ್ದೇನೆ. ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಅಲ್ಲಿನ ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ ಅಮಾನತು ಮಾಡಿದ್ದೇವೆ' ಎಂದು ತಿಳಿಸಿದರು.

ವಿಪಕ್ಷಗಳು ಗಾಜಿನ ಮನೆಯಲ್ಲಿ ಕುಳಿತು ಆರೋಪ

ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣದ ತನಿಖೆಗೆ ಆದೇಶ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, 'ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗಂಗೇನಹಳ್ಳಿಯಲ್ಲಿ ಬಹುಕೋಟಿ ಮೌಲ್ಯದ ಒಂದು ಎಕರೆ 11 ಗುಂಟೆ ಜಮೀನು ಡಿನೋಟಿಫಿಕೇಷನ್ ನಡೆದಿದೆ ಎಂದು ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಬೆಲೆ ಬಾಳುವಂತಹ ಜಮೀನದು. ಅಂಥದ್ದನ್ನು ಡಿನೋಟಿಫೈ ಮಾಡಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಭಾಮೈದನಿಗೆ ನೋಂದಣಿ ಆಗಿದೆ. ಅವರ ಅತ್ತೆ ಜಿಪಿಎ ಪಡೆದುಕೊಂಡಿದ್ದಾರೆ. ಆದ್ದರಿಂದ ಇದೊಂದು ಬಹಳ ಗಂಭೀರವಾದ ಪ್ರಕರಣ. ಅದನ್ನು ಈಗಾಗಲೇ ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿದೆ, ಡಿನೋಟಿಫೈಗೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರೂ ಮಾಡಿಸಿದ್ದಾರೆ. ಸತ್ತು ಹೋದವರ ಹೆಸರಿನಲ್ಲಿ ಮಾಡಿಸಿದ್ದಾರೆ. ದಾಖಲೆಗಳನ್ನು ನೋಡಿ, ಮಾಹಿತಿ ಪಡೆದುಕೊಂಡು ಆ ಬಗ್ಗೆ ಪ್ರತಿಕ್ರಿಯಿಸುತ್ತೇನೆ' ಎಂದು ಹೇಳಿದರು.

ವಿಪಕ್ಷಗಳು ಗಾಜಿನ ಮನೆಯಲ್ಲಿ ಕುಳಿತು ಸರ್ಕಾರದ ಮೇಲೆ ಆರೋಪ ಹೊರಸುತ್ತಿವೆ. ನಾವು ಯಾರ ಮೇಲೆಯೂ ಆರೋಪ ಹೊರಿಸುವ ಕೆಲಸವನ್ನು ಮಾಡುತ್ತಿಲ್ಲ. ಕುಮಾರಸ್ವಾಮಿಯವರು ಹಿಟ್ ಎಂಡ್ ರನ್ ಗಿರಾಕಿ, ಅವರು ತಮ್ಮ ಯಾವ ಆರೋಪಕ್ಕೂ ತಾರ್ಕಿಕ ಅಂತ್ಯ ಕಾಣಿಸುವುದಿಲ್ಲ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದು, ಜವಾಬ್ದಾರಿಯುತವಾಗಿ ವರ್ತಿಸಬೇಕು. ವಿಷಯದ ಸತ್ಯಾಸತ್ಯತೆಯನ್ನು ಅರಿತು ಮಾತನಾಡಬೇಕು ಎಂದೂ ಸಿದ್ದರಾಮಯ್ಯ ಹೇಳಿದರು.

ಗೃಹ ಸಚಿವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ

ಬಿಜೆಪಿ ಶಾಸಕ ಮುನಿರತ್ನ ಮೇಲೆ ಗಂಭೀರ ಪ್ರಕರಣಗಳಿವೆ. ಎಸ್ ಐಟಿ ತನಿಖೆ ಮಾಡಲು ಸಚಿವರು, ಶಾಸಕರು ಪತ್ರ ಕೊಟ್ಟಿದ್ದಾರೆ. ಪತ್ರದ ಮೇಲೆ ಮುಂದಿನ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವರಿಗೆ ಹೇಳಿದ್ದೇನೆ. ವಿಶೇಷ ತನಿಖಾ ತಂಡದ ಅಗತ್ಯವಿದೆ ಎಂದಿದ್ದಾರೆ. ಈ ಬಗ್ಗೆ ಗೃಹ ಸಚಿವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದರು.

ವಯೋಮಿತಿ ಹೆಚ್ಚಳದ ಬಗ್ಗೆ ತೀರ್ಮಾನ

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆಯನ್ನು ಆದಷ್ಟೂ ಶೀಘ್ರದಲ್ಲಿಯೇ ಏರ್ಪಡಿಸುವಂತೆ ಕೆ.ಪಿ.ಎಸ್.ಸಿ ಗೆ ಸೂಚಿಸಲಾಗಿದೆ. ಕಾನ್‌ಸ್ಟೆಬಲ್ ಹುದ್ದೆಗಳಿಗೆ ವಯೋಮಿತಿಯನ್ನು 27 ರಿಂದ 33 ವರ್ಷಕ್ಕೆ ಏರಿಸಬೇಕೆಂಬ ಬೇಡಿಕೆ ಇದ್ದು, ಒಂದು ಬಾರಿಯ ತೀರ್ಮಾನ ಕೈಗೊಳ್ಳುವಂತೆ ಗೃಹ ಸಚಿವರಿಗೆ ತಿಳಿಸಿದ್ದೇನೆ ಎಂದೂ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

Tags:    

Similar News