ವೈಟ್‌ಫೀಲ್ಡ್‌ನಲ್ಲಿ ಬೈಕ್ ಕಳ್ಳನ ಬಂಧನ: 20 ಲಕ್ಷ ರೂಪಾಯಿ ಮೌಲ್ಯದ 20 ದ್ವಿಚಕ್ರ ವಾಹನಗಳು ವಶ

ಆಗಸ್ಟ್ 30ರಂದು ವೈಟ್‌ಫೀಲ್ಡ್‌ನ ಐಟಿಪಿಎಲ್ ಹಿಂಭಾಗದ ಮಾಲ್ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವೊಂದು ಕಳ್ಳತನವಾಗಿತ್ತು. ಈ ಕುರಿತು ವಾಹನದ ಮಾಲೀಕರು ಸೆಪ್ಟೆಂಬರ್ 6 ರಂದು ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Update: 2025-09-23 08:05 GMT
ಸಾಂದರ್ಭಿಕ ಚಿತ್ರ
Click the Play button to listen to article

ನಗರದ ವೈಟ್‌ಫೀಲ್ಡ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸರಣಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಹೊರರಾಜ್ಯದ ಖದೀಮನನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ 20 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಗಸ್ಟ್ 30ರಂದು ವೈಟ್‌ಫೀಲ್ಡ್‌ನ ಐಟಿಪಿಎಲ್ ಹಿಂಭಾಗದ ಮಾಲ್ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವೊಂದು ಕಳ್ಳತನವಾಗಿತ್ತು. ಈ ಕುರಿತು ವಾಹನದ ಮಾಲೀಕರು ಸೆಪ್ಟೆಂಬರ್ 6 ರಂದು ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ಆರಂಭಿಸಿದ್ದರು.

ಖಚಿತ ಮಾಹಿತಿ ಆಧರಿಸಿ, ಪೊಲೀಸರು ಸೆಪ್ಟೆಂಬರ್ 7 ರಂದು ಹೊಸಕೋಟೆಯ ಕೊಟ್ಟೂರು ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದರು. ಪ್ರಾಥಮಿಕ ವಿಚಾರಣೆ ವೇಳೆ, ಐಟಿಪಿಎಲ್ ಬಳಿ ಬೈಕ್ ಕದ್ದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ನಂತರ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 15 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು.

ಪೊಲೀಸ್ ಕಸ್ಟಡಿಯಲ್ಲಿ ಸುದೀರ್ಘ ವಿಚಾರಣೆ ನಡೆಸಿದಾಗ, ಆರೋಪಿಯು ವೈಟ್‌ಫೀಲ್ಡ್ ವ್ಯಾಪ್ತಿಯಲ್ಲಿ ಹಲವು ಬೈಕ್‌ಗಳನ್ನು ಕದ್ದಿರುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಕದ್ದ ವಾಹನಗಳ ಪೈಕಿ 5 ಬೈಕ್‌ಗಳನ್ನು ಮದ್ದೂರು ತಾಲ್ಲೂಕಿನ ಹುರುಗುಳವಾಡಿ ಗ್ರಾಮದ ಪರಿಚಿತನಿಗೆ ಮಾರಾಟ ಮಾಡಿರುವುದಾಗಿಯೂ, 9 ಬೈಕ್‌ಗಳನ್ನು ಆಂಧ್ರಪ್ರದೇಶದ ಕದಿರಿ ಮಂಡಲದಲ್ಲಿರುವ ತನ್ನ ಸಂಬಂಧಿಕರಿಗೆ ನೀಡಿರುವುದಾಗಿಯೂ ತಿಳಿಸಿದ್ದಾನೆ. ಉಳಿದ 6 ಬೈಕ್‌ಗಳನ್ನು ಸ್ಥಳೀಯ ಶಿವಕುಂಟಮ್ಮ ದೇವಸ್ಥಾನದ ಬಳಿಯ ಖಾಲಿ ಜಾಗದಲ್ಲಿ ಬಚ್ಚಿಟ್ಟಿರುವುದಾಗಿ ಮಾಹಿತಿ ನೀಡಿದ್ದಾನೆ.

ಆರೋಪಿಯ ಮಾಹಿತಿ ಆಧರಿಸಿ, ಸೆಪ್ಟೆಂಬರ್ 10 ರಿಂದ 15ರ ಅವಧಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಒಟ್ಟು 20 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಯ ಬಂಧನದಿಂದ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 12 ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ವಶಪಡಿಸಿಕೊಂಡಿರುವ ಉಳಿದ 8 ವಾಹನಗಳ ಮಾಲೀಕರನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಆರೋಪಿಯನ್ನು ಸೆಪ್ಟೆಂಬರ್ 15 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags:    

Similar News