ಬೆಂಗಳೂರು ಸೇರಿ ರಾಜ್ಯದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಆರಂಭ
ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ತೀವ್ರ ಪಟ್ಟು ಬೆನ್ನಲ್ಲೇ ಸುರಕ್ಷತೆಯ ದೃಷ್ಟಿಯಿಂದ ಜೂನ್ 16ರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ರದ್ದಾಗಿತ್ತು.;
ಇಂದಿನಿಂದ ಬೈಕ್ ಟಾಕ್ಸಿ ಪುನರಾರಂಭ
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇಂದಿನಿಂದ ಬೈಕ್ ಟ್ಯಾಕ್ಸಿ ಸೇವೆ ಪುನರ್ ಆರಂಭವಾಗಲಿದೆ. ಆ ಮೂಲಕ ಜೂನ್ 16ರಿಂದ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ.
ಓಲಾ ಹೊರತುಪಡಿಸಿ ಊಬರ್, ರ‍್ಯಾಪಿಡೊ ಆ್ಯಪ್ಗಳಲ್ಲಿ ಮಾತ್ರ ಬೈಕ್ ಟ್ಯಾಕ್ಸಿ ಸೇವೆ ಲಭ್ಯವಿದೆ.
ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ತೀವ್ರ ಪಟ್ಟು ಬೆನ್ನಲ್ಲೇ ಸುರಕ್ಷತೆಯ ದೃಷ್ಟಿಯಿಂದ ಜೂನ್ 16ರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ರದ್ದಾಗಿತ್ತು. ಆ ಸಂದರ್ಭದಲ್ಲಿ ಅನಧಿಕೃತವಾಗಿ ಸಂಚರಿಸಿದ ಬೈಕ್ ಟ್ಯಾಕ್ಸಿಗಳ ಮೇಲೆ ಆರ್‌ಟಿಓ ಅಧಿಕಾರಿಗಳು ಕ್ರಮಕೈಗೊಂಡಿದ್ದರು.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು,"ಬುಧವಾರ, ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಿದ್ದು, ಇತರ ಹಲವು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಗಮನಿಸಿ ನೀತಿ ಚೌಕಟ್ಟಿನ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ. ಟ್ಯಾಕ್ಸಿ ಅಗ್ರಿಗೇಟರ್‌ಗಳು ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಲು ನ್ಯಾಯಾಲಯವು ಅವಕಾಶ ನೀಡಿಲ್ಲ. ನಾನು ಅಡ್ವೊಕೇಟ್ ಜನರಲ್ ಅವರೊಂದಿಗೆ ಮಾತನಾಡಿ, ಅವರ ಅಭಿಪ್ರಾಯವನ್ನು ಕೇಳುತ್ತೇನೆ" ಎಂದು ಹೇಳಿದ್ದಾರೆ.
ಬೈಕ್ ಟ್ಯಾಕ್ಸಿಗೆ ನೀತಿ ಚೌಕಟ್ಟು ನಿಗದಿಪಡಿಸಲು ಸೂಚನೆ
ಇದರ ಬೆನ್ನಲ್ಲೇ ಬೈಕ್ ಟ್ಯಾಕ್ಸಿ ಸೇವೆ ರದ್ದು ಪ್ರಶ್ನಿಸಿ ಆ್ಯಪ್ ಆಧಾರಿತ ಸೇವೆ ಒದಗಿಸುವ ಕಂಪನಿಗಳು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದವು. ಸದ್ಯ ಬೈಕ್ ಟ್ಯಾಕ್ಸಿ ಸಂಬಂಧ ನೀತಿ ಚೌಕಟ್ಟು ನಿಗದಿಪಡಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ಸೆಪ್ಟೆಂಬರ್ 22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಸದ್ಯ ರಾಜ್ಯ ಸರ್ಕಾರ ಇಂದಿನಿಂದ ಬೈಕ್ ಟ್ಯಾಕಿ ಸೇವೆಯನ್ನು ಆರಂಭಿಸಿದೆ.
ಹೈಕೋರ್ಟ್ ಹೇಳಿದ್ದೇನು?
ಬೈಕ್ ಟ್ಯಾಕ್ಸಿಗಳ ಮೇಲೆ ರಾಜ್ಯ ಸರ್ಕಾರ ಹೇರಿದ್ದ ಸಂಪೂರ್ಣ ನಿಷೇಧವನ್ನು ಕೋರ್ಟ್ “ಕಾನೂನಾತ್ಮಕವಾಗಿ ಅಸ್ಥಿರ” ಎಂದು ತಿರಸ್ಕರಿಸಿದೆ. ಬೈಕ್ ಟ್ಯಾಕ್ಸಿಗಳು ಐಶಾರಾಮಿ ಸೇವೆಯಲ್ಲ, ನಗರ ಸಾರಿಗೆ ವ್ಯವಸ್ಥೆಯಲ್ಲಿ ಅವು ಅಗತ್ಯವೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಬೈಕ್ ಟ್ಯಾಕ್ಸಿ ಕುರಿತ ಸಮಗ್ರ ನೀತಿಯನ್ನು ಒಂದು ತಿಂಗಳೊಳಗೆ ರೂಪಿಸಲು ಸೂಚಿಸಿದೆ. ಹೊಸ ನೀತಿ ಹೊರಬರುವವರೆಗೆ ಉಬರ್, ರ್ಯಾಪಿಡೋ ಮುಂತಾದ ಕಂಪನಿಗಳ ಮೇಲೆ ದಂಡಾತ್ಮಕ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ರಕ್ಷಣೆ ಕೂಡಾ ನೀಡಲಾಗಿದೆ.
ಉಬರ್ ತನ್ನ ವಾದದಲ್ಲಿ ಮೋಟಾರ್ ವಾಹನ ಕಾಯ್ದೆ 1988ರ ಸೆಕ್ಷನ್ 93 ಅನ್ನು ಉಲ್ಲೇಖಿಸಿ, ಬೈಕ್‌ಗಳನ್ನು ಟ್ಯಾಕ್ಸಿಗಳಾಗಿ ಬಳಸಲು ಅನುಮತಿ ಇದ್ದರೆ, ಆ ಸೇವೆಗಳನ್ನು ಒದಗಿಸುವ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳಿಗೂ ಅವಕಾಶ ನೀಡಬೇಕು ಎಂದು ಕೋರಿತ್ತು. ಇದರೊಂದಿಗೆ ಬೈಕ್ ಟ್ಯಾಕ್ಸಿಗಳು ಸಂಚಾರ ತೊಂದರೆ ಕಡಿಮೆ ಮಾಡಲು ಹಾಗೂ ಕೊನೆಯ ಹಂತದ ಸಂಪರ್ಕಕ್ಕೆ ಸಹಾಯ ಮಾಡುತ್ತವೆ ಎಂಬುದನ್ನೂ ಎತ್ತಿತೋರಿಸಲಾಗಿದೆ.
ಇದಕ್ಕೂ ಜೂನ್ 16, 2025ರಿಂದ ಹೈಕೋರ್ಟ್ ಆದೇಶದಂತೆ ಬೈಕ್ ಟ್ಯಾಕ್ಸಿ ಸೇವೆಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿತ್ತು. ಬೈಕ್ ಟ್ಯಾಕ್ಸಿ ನಿಷೇಧವು ರಾಜ್ಯದ ಗಿಗ್ ಆರ್ಥಿಕತೆಯ ಸಾವಿರಾರು ಕಾರ್ಮಿಕರ ಜೀವನೋಪಾಯಕ್ಕೆ ದೊಡ್ಡ ಹೊಡೆತ ನೀಡಿತ್ತು.