ಬಿಹಾರದ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದರೆ, ಅದರ ರಾಜಕೀಯ ತಾಪ ಮಾತ್ರ ಸಿಲಿಕಾನ್ ಸಿಟಿ ಬೆಂಗಳೂರನ್ನು ಬಿಸಿಮಾಡುತ್ತಿದೆ. ಬಿಹಾರದಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ 'ಇಂಡಿಯಾ' ಮೈತ್ರಿಕೂಟ, ಕರ್ನಾಟಕವನ್ನೇ ತನ್ನ ಪ್ರಚಾರದ ಅಖಾಡವನ್ನಾಗಿ ಪರಿವರ್ತಿಸಿಕೊಂಡಿದೆ. ಉದ್ಯೋಗ ಅರಸಿ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಬಿಹಾರ ಮೂಲದ ಕಾರ್ಮಿಕರ ಮತಗಳನ್ನು ಸೆಳೆಯಲು, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಅಬ್ಬರದ ಪ್ರಚಾರಕ್ಕೆ ಇಳಿದಿದ್ದು, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಹಾರದ ಸ್ಟಾರ್ ಪ್ರಚಾರಕರಾಗಬೇಕಿದ್ದ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನಲ್ಲೇ ಬೀಡುಬಿಟ್ಟು, ಬಿಹಾರಿ ಕಾರ್ಮಿಕರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಕೇವಲ ಮತಯಾಚನೆಯಲ್ಲದೆ, ಸಮುದಾಯ ಭವನ ನಿರ್ಮಾಣಕ್ಕೆ ಸಿ.ಎ. ನಿವೇಶನ ಮತ್ತು ಮತದಾನಕ್ಕೆ ತೆರಳಲು ಮೂರು ದಿನಗಳ ವಿಶೇಷ ರಜೆ ನೀಡುವಂತಹ ಆಮಿಷಗಳನ್ನು ಒಡ್ಡುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಕನ್ನಡ ಗ್ರಾಹಕರ ಕೂಟ ಹಾಗೂ ಬನವಾಸಿ ಬಳಗದ ಅರುಣ್ ಜಾವಗಲ್, "ನಮ್ಮ ರಾಜಕಾರಣಿಗಳದ್ದು ದೆಹಲಿಯ ಹೈಕಮಾಂಡ್ ಸಂಸ್ಕೃತಿ. ಅವರ ಆದೇಶದಂತೆ ಇಲ್ಲಿ ಬಿಹಾರಿ ಕಾರ್ಮಿಕರಿಗೆ ರಜೆ ಮಂಜೂರು ಮಾಡುತ್ತಾರೆ. ರಾಜ್ಯದ ಮತದಾರರ ಬಗ್ಗೆ ಕಾಳಜಿ ಇಲ್ಲದವರು, ಬೇರೆ ರಾಜ್ಯದವರ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಿರುವುದು ನಾಚಿಕೆಗೇಡು," ಎಂದು ಆಕ್ರೋಶ ವ್ಯಕ್ತಪಡಿಸಿದರು. "ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡದ ಸರ್ಕಾರ, ಬೇರೆಯವರಿಗೆ ಭೂಮಿ, ನೀರು, ಸೌಲಭ್ಯಗಳನ್ನು ಧಾರೆ ಎರೆಯಲು ಹೊರಟಿದೆ," ಎಂದು ಅವರು ಟೀಕಿಸಿದರು.
"ಬಂಡವಾಳ ಹೂಡಿಕೆ ಮಾಡುವ ಕಂಪನಿಗಳಿಗೆ ಇಲ್ಲಿನ ರೈತರ ಭೂಮಿಯೇ ಬೇಕಾಗಿದೆ. ಆದರೆ, ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಆದರೆ, ಬೇರೆ ರಾಜ್ಯಗಳಿಂದ ಬಂದವರಿಗೆ ಜಾಗವನ್ನೂ ಕೊಡ್ತಾರೆ, ಸೌಲಭ್ಯಗಳನ್ನು ಕೊಡುತ್ತಾರೆ. ಒಟ್ಟಾರೆ ಹೈಕಮಾಂಡ್ ಮೆಚ್ಚಿಸಲು ರಾಜ್ಯದ ಜನರಿಗೆ ಮೀಸಲಿರುವ ಭೂಮಿ, ನೀರು, ಇತ್ಯಾದಿ ಸೌಲಭ್ಯಗಳನ್ನು ಬೇರೆಯವರೆ ಧಾರೆ ಎರೆಯಲು ಹೋಗುತ್ತಿದ್ದಾರೆ" ಎಂದು ಟೀಕಿಸಿದರು.
"ಹೈಕಮಾಂಡ್ ಹೇಳಿದವರಿಗೆ ಮತ ಹಾಕುವ ಪರಿಸ್ಥಿತಿ ಬಂದೊದಗಿದೆ. ಚುನಾವಣೆ ಟಿಕೆಟ್ ಪಡೆಯುವುದರಿಂದ ಹಿಡಿದು ಮುಖ್ಯಮಂತ್ರಿ ಆಗುವವರೆಗೂ ಹೈಕಮಾಂಡ್ ಹೇಳಿದಂತೆಯೇ ನಡೆಯುತ್ತದೆ. ಜನರ ಮತ ಪಡೆದು ಹೈಕಮಾಂಡ್ ಮಾತು ಕೇಳುವ ಇವರ ಉತ್ತರದಾಯಿತ್ವ ಯಾರಿಗೆ ಎಂಬುದು ಕಾಣುತ್ತದೆ. ಕಳೆದ ಬಾರಿ ಮಣಿಪುರ, ಅಸ್ಸಾಂನವರಿಗೆ ಸಮುದಾಯ ಭವನ ನಿರ್ಮಿಸಲು ನಾಗರಿಕ ಸೌಲಭ್ಯದ ನಿವೇಶನ ನೀಡುವುದಾಗಿ ಅಂದಿನ ಬಿಜೆಪಿ ಸರ್ಕಾರ ಹೇಳಿತ್ತು. ಈಗ ಕಾಂಗ್ರೆಸ್ ಸರ್ಕಾರದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಹಾರಿಗಳಿಗೆ ಸಿಎ ನಿವೇಶನ ನೀಡುವ ಭರವಸೆ ನೀಡಿದ್ದಾರೆ. ಇದು ಎಳ್ಳಷ್ಟು ಸರಿಯಲ್ಲ" ಎಂದು ಹೇಳಿದರು.
ಬಿಹಾರದಲ್ಲಿ ಚುನಾವಣೆಗೆ ಕರ್ನಾಟಕದಲ್ಲಿ ಅಬ್ಬರ
ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿರುವ ಬಿಹಾರಿ ಜನರನ್ನು ಮಹಾಘಟಬಂಧನ್ ಪರ ಮತಗಳನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನ.6 ಹಾಗೂ 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮತ ಚಲಾಯಿಸಲು ಬಿಹಾರಕ್ಕೆ ಹೋಗಿ ಬರಲು ವಲಸೆ ಕಾರ್ಮಿಕರನ್ನು ಹುರಿದುಂಬಿಸುತ್ತಿದ್ದಾರೆ. ಅದಕ್ಕಾಗಿಯೇ ಮೂರು ದಿನ ರಜೆ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿರುವ ಕಂಪೆನಿಗಳು, ಉದ್ಯಮಿಗಳಿಗೆ ಮನವಿ ಮಾಡಿದ್ದಾರೆ.
ಸಮುದಾಯ ಭವನದ ಭರವಸೆ
ಈ ಮಧ್ಯೆ, ಬಿಹಾರ ಕಾರ್ಮಿಕರ ಹೆಚ್ಚಾಗಿ ವಾಸಿಸುತ್ತಿರುವ ಸ್ಥಳಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ನಾಗರಿಕ ಸೌಲಭ್ಯವಿರುವ ನಿವೇಶನ ಕಲ್ಪಿಸಿಕೊಡುವುದಾಗಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿರುವುದು ಟೀಕೆಗೆ ಕಾರಣವಾಗಿದೆ. ಬಿಹಾರದಲ್ಲಿ ಈ ಬಾರಿ ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾ ಘಟಬಂಧನ್ ಅಧಿಕಾರಕ್ಕೆ ತರಲು ಕಾಂಗ್ರೆಸ್ ನಾಯಕರು ಪಣ ತೊಟ್ಟಂತಿದೆ. ಒಂದೆಡೆ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಮತಕಳವು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿ, ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದಾರೆ. ಈಗಾಗಲೇ ಬಿಹಾರದಲ್ಲಿ ರಾಹುಲ್ ಗಾಂಧಿ ಅವರು ಕಾಲಿಕೆ ಚಕ್ರ ಕಟ್ಟಿಕೊಂಡು ಜನ ಅಧಿಕಾರ ಯಾತ್ರೆ ನಡೆಸಿದ್ದಾರೆ.ಡಿ.ಕೆ. ಶಿವಕುಮಾರ್ ಅವರ ಈ ನಡೆಯನ್ನು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಾ.ರಾ. ಗೋವಿಂದ್ ಅವರು ತೀವ್ರವಾಗಿ ಖಂಡಿಸಿದ್ದಾರೆ. "ಕಂಡ ಕಂಡವರಿಗೆ ನಿವೇಶನ ನೀಡಲು ಕರ್ನಾಟಕವೇನು ಗೋಮಾಳವಲ್ಲ. ಉದ್ಯೋಗ ಅರಸಿ ಬಂದವರಿಗೆ ಎಲ್ಲವನ್ನೂ ಕೊಡಲು ಇದೇನು ಅವರ ತವರುಮನೆಯೇ?" ಎಂದು ಕಿಡಿಕಾರಿದ್ದಾರೆ. "ಈಗಾಗಲೇ ಬೆಂಗಳೂರಿನಲ್ಲಿ ಉತ್ತರ ಭಾರತೀಯರಿಂದ ಉದ್ಯೋಗ ಮತ್ತು ಮಾತೃಭಾಷೆಯ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಈಗ ಸಮುದಾಯ ಭವನ ಕೊಟ್ಟರೆ, ನಾಳೆ ಪ್ರತ್ಯೇಕ ಕಾಲೊನಿ ಕೇಳುತ್ತಾರೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು," ಎಂದು ಅವರು ಎಚ್ಚರಿಸಿದ್ದಾರೆ.
"ಈಗ ಚುನಾವಣೆ ಹಿನ್ನೆಲೆಯಲ್ಲಿ ಸಮುದಾಯ ಭವನ, ಇನ್ನಿತರೆ ಸೌಲಭ್ಯ ನೀಡಿದರೆ ನಾಳೆ ಪ್ರತ್ಯೇಕ ಕಾಲೊನಿ, ಜಾಗ ಕೇಳುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮರು, ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಗಳು ಕಾರ್ಯ ನಿರ್ವಹಿಸಬೇಕು. ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ನಾವು ವಿರೋಧಿಸುತ್ತೇವೆ" ಎಂದು ಹೇಳಿದರು.
ವಾಟ್ಸಾಪ್ ಮೂಲಕ ಪ್ರಚಾರ
ಬೆಂಗಳೂರಿನಲ್ಲಿ ಬಿಹಾರಿ ಕಾರ್ಮಿಕರನ್ನು ಒಗ್ಗೂಡಿಸಿ ಮತ ಚಲಾವಣೆ ಮಾಡುವಂತೆ ಪ್ರೇರೇಪಿಸಲು ವಾಟ್ಸ್ಆ್ಯಪ್ ಗುಂಪುಗಳನ್ನು ರಚಿಸಿ ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ. ಬಿಹಾರದ ಚುನಾವಣಾ ಅಖಾಡದಲ್ಲಿರುವ ರಾಜಕೀಯ ಪಕ್ಷಗಳು ಕೂಡ ಕರ್ನಾಟಕದಲ್ಲಿ ಬಿಹಾರಿ ಸಮುದಾಯದ ಮತ ಚಲಾಯಿಸಲು ಕಸರತ್ತು ನಡೆಸಿವೆ.ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸೂರಜ್ ಪಕ್ಷವು ಕಳೆದ ಐದು ತಿಂಗಳಿನಿಂದಲೇ ಕರ್ನಾಟಕದಲ್ಲಿ ಬಿಹಾರಿ ಸಮುದಾಯವರಿರುವ ಕಡೆಗಳಲ್ಲಿ ಪ್ರಚಾರ ಆರಂಭಿಸಿದೆ. ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ 'ಬೆಂಗಳೂರು ಸೇ ಬಿಹಾರ್ ಬದ್ಲಾವ್' ಶೀರ್ಷಿಕೆಯ ಸಮುದಾಯ ಕಾರ್ಯಕ್ರಮ ಸಹ ಆಯೋಜಿಸಿತ್ತು.ಬ್ಯಾಟರಾಯನಪುರದಲ್ಲಿ ಹೆಚ್ಚು ಬಿಹಾರಿಗಳು ಬ್ಯಾಟರಾಯಪುರ ವಿಧಾನಸಭೆ ವ್ಯಾಪ್ತಿಗೆ ಬರುವ ಹೆಬ್ಬಾಳದ ಕೆಂಪಾಪುರದಲ್ಲಿ ಬಿಹಾರಿ ಸಮುದಾಯ ಹೆಚ್ಚು ವಾಸಿಸುತ್ತಿದ್ದು, ಡಿ.ಕೆ. ಶಿವಕುಮಾರ್ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಇತ್ತೀಚೆಗೆ ಮತಯಾಚನೆ ನಡೆಸಿದ ಅವರು, ಮಹಾಘಟಬಂಧನ್ ಬೆಂಬಲಿಸಿದರೆ ಸಮುದಾಯ ಭವನ ನಿರ್ಮಿಸಲು ನಾಗರಿಕ ಸೌಲಭ್ಯವಿರುವ ನಿವೇಶನ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇದು ಪ್ರತಿಪಕ್ಷ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ."ನಾವೆಲ್ಲರೂ ಭಾರತೀಯರು. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ರಾಷ್ಟ್ರಧ್ವಜ, ಸಂವಿಧಾನದ ರಕ್ಷಣೆಯಲ್ಲಿ ನಾವೆಲ್ಲರು ಬದುಕುತ್ತಿದ್ದೇವೆ. ನಿಮ್ಮನ್ನು ಭೇಟಿ ಮಾಡುವ ದೊಡ್ಡ ಅವಕಾಶ ಸಿಕ್ಕಿದೆ. ನಿಮಗೆ ಸಮುದಾಯ ಭವನ ಇಲ್ಲ ಎಂಬುದು ಕೇಳಿ ಬೇಸರವಾಯಿತು. ಒಂದು ವಾರ ಅಥವಾ 10 ದಿನ ಬಿಟ್ಟು ನನ್ನನ್ನು ಭೇಟಿಯಾಗಿರಿ, ನಿಮಗೆ ಒಂದು ಸಮುದಾಯ ಭವನ ನಿರ್ಮಿಸಿಕೊಡಲಾಗುವುದು" ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು.ಡಿ.ಕೆ.ಶಿವಕುಮಾರ್ ಅವರ ಈ ಆಮಿಷಕ್ಕೆ ಬಿಜೆಪಿ ಕಿಡಿಕಾರಿದೆ. ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, "ಡಿ.ಕೆ. ಶಿವಕುಮಾರ್ ಅವರು ಸಂವಿಧಾನ ವಿರೋಧಿ ನಡೆ ಪ್ರದರ್ಶಿಸಿದ್ದಾರೆ. ಮತದಾನದ ಸಮಯದಲ್ಲಿ ಆಮಿಷವೊಡ್ಡುತ್ತಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಸಂವಿಧಾನದ ಪುಸ್ತಕವನ್ನು ಸದಾ ಕೈಯಲ್ಲಿ ಇಟ್ಟುಕೊಂಡು ಓಡಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಡಿ.ಕೆ.ಶಿವಕುಮಾರ್ ಅವರ ಕಿವಿ ಹಿಂಡಬೇಕು. ಕುರ್ಚಿ ಕನಸಲ್ಲಿರುವ ಡಿಕೆಶಿ, ಹೈಕಮಾಂಡ್ ನಾಯಕರ ಮೆಚ್ಚುಗೆ ಗಳಿಸಲು ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ" ಎಂದು ಆರೋಪಿಸಿದರು.ಪ್ರಶ್ನೆ ಹುಟ್ಟುಹಾಕಿದ ಕಾಂಗ್ರೆಸ್ ಕಾರ್ಯತಂತ್ರ
ಬೆಂಗಳೂರಿನಲ್ಲಿ ಸಾಕಷ್ಟು ಬಿಹಾರಿ ಸಮುದಾಯದವರು ದುಡಿಯುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಅವರ ಮತ ಸೆಳೆಯಲು ಕಾಂಗ್ರೆಸ್ ನಾಯಕರು ಆಮಿಷವೊಡ್ಡುವ ಮೂಲಕ ಪ್ರಚಾರ ನಡೆಸುತ್ತಿರುವುದು ವಿವಾದ ಸೃಷ್ಟಿಸಿದೆ. ಈಗಾಗಲೇ ಬಿಹಾರ ಚುನಾವಣೆಗೆ ದೇಣಿಗೆ ಕಳುಹಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಬಿಹಾರಿಗಳಿಗೆ ಆಮಿಷವೊಡ್ಡುತ್ತಿರುವುದು ಪಾರದರ್ಶಕ ಮತ್ತು ಚುನಾವಣೆಯ ವ್ಯಾಪ್ತಿಯ ಕುರಿತು ಪ್ರಶ್ನೆ ಹುಟ್ಟುಹಾಕಿದೆ. ಬೆಂಗಳೂರಿನಲ್ಲಿ ಬಿಹಾರ ಚುನಾವಣೆಗೆ ಮತಯಾಚನೆ ನಡೆಸಿರುವುದು ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಚಲನಶೀಲತೆಗೆ ಸಾಕ್ಷಿಯಾಗಿದೆ ಎನ್ನಲಾಗಿದೆ.ಸಿ.ಎ. ನಿವೇಶನ ಪಡೆಯಲು ಅರ್ಹತೆ ಏನು?
ನಾಗರಿಕ ಸೌಲಭ್ಯ ನಿವೇಶನ ಪಡೆಯಲು ಅರ್ಜಿದಾರರು ಸಂಬಂಧಪಟ್ಟ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಅರ್ಜಿದಾರರು ಕರ್ನಾಟಕ ಸರ್ಕಾರದ ವಸತಿ ಯೋಜನೆಗೆ ಅರ್ಹರಾಗಿರಬೇಕು. ಫಲಾನುಭವಿಗಳು ಅಥವಾ ಅವರ ಕುಟುಂಬದ ಆದಾಯವು ಸರ್ಕಾರದ ನಿಗದಿಪಡಿಸಿದ ಮಿತಿಗಿಂತ ಕಡಿಮೆ ಇರಬೇಕು. ಅರ್ಜಿದಾರರು ಕನಿಷ್ಠ ಒಂದು ವರ್ಷದಿಂದ ನಿರ್ದಿಷ್ಟ ಜಿಲ್ಲೆಯಲ್ಲಿ ವಾಸಿಸುತ್ತಿರುವುದನ್ನು ದೃಢೀಕರಿಸುವ ಪತ್ರ ಹೊಂದಿರಬೇಕು. ಅರ್ಜಿದಾರರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಕುಟುಂಬದ ಪಡಿತರ ಚೀಟಿ, ಬ್ಯಾಂಕ್ ಪಾಸ್ಬುಕ್ ಇತ್ಯಾದಿ ಅಗತ್ಯ ದಾಖಲೆ ಸಲ್ಲಿಸಬೇಕು. ಸರ್ಕಾರಿ ಮತ್ತು ಸಾರ್ವಜನಿಕ ಉಪಯುಕ್ತತೆ ಸಂಸ್ಥೆಗಳು, ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳು, ಸಮುದಾಯ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ನಾಗರಿಕ ಸೌಲಭ್ಯದ ನಿವೇಶನಗಳನ್ನು ಪಡೆಯಬಹುದಾಗಿದೆ.ಬೆಂಗಳೂರಿನಲ್ಲಿ ಬಿಹಾರ ಕಾರ್ಮಿಕರ ಸಂಖ್ಯೆ ಎಷ್ಟು? ಬೆಂಗಳೂರು ಸೇರಿ ರಾಜ್ಯಾದ್ಯಂತ 24,000 ನೋಂದಾಯಿತ ವಲಸೆ ಕಾರ್ಮಿಕರಿರುವುದು ರಾಜ್ಯ ಕಾರ್ಮಿಕ ಇಲಾಖೆ ದತ್ತಾಂಶದಿಂದ ಕಂಡು ಬಂದಿದೆ. ಆದರೆ, ರಾಜ್ಯದಲ್ಲಿ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಐಟಿ, ನಿರ್ಮಾಣ ವಲಯ, ತಯಾರಿಕಾ ಕ್ಷೇತ್ರ, ಹೋಟೆಲ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಬಹುಪಾಲು ಜನರು ರಾಜಧಾನಿಯಲ್ಲಿ ಕೇಂದ್ರೀಕೃತರಾಗಿದ್ದಾರೆ. ಬ್ಯಾಟರಾಯನಪುರ ಕ್ಷೇತ್ರ ಒಂದರಲ್ಲೇ ಅಂದಾಜು 1.40ಲಕ್ಷ ಕಾರ್ಮಿಕರು ವಾಸವಿದ್ದಾರೆ.ಬೆಂಗಳೂರಿನಲ್ಲಿ ಸುಮಾರು ಶೇ 80 ಬ್ಲೂ ಕಾಲರ್ ಕಾರ್ಮಿಕರಿದ್ದರೆ ಉಳಿದವರು ವೈಟ್ ಕಾಲರ್ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಬ್ಲೂ ಕಾಲರ್ ಕಾರ್ಮಿಕರು ನಿರ್ಮಾಣ, ಸಾರಿಗೆ, ಸಣ್ಣ ಕೈಗಾರಿಕೆಗಳು ಮತ್ತು ಆಹಾರ ಕ್ಷೇತ್ರಗಳಲ್ಲಿದ್ದಾರೆ. ಹೆಚ್ಚಿನ ಜನರು ಸರ್ಜಾಪುರ, ಎಲೆಕ್ಟ್ರಾನಿಕ್ಸ್ ಸಿಟಿ, ವೈಟ್‌ಫೀಲ್ಡ್, ಯಲಹಂಕ, ಯಶವಂತಪುರ ಮತ್ತು ಪೀಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.