ಒಂದು ಬೀಗ, ಹಲವು ತಿಕ್ಕಾಟ: ಸಚಿವರ ನಡುವೆ ಪ್ರತಿಷ್ಠೆಯ ಸಮರ ಹುಟ್ಟುಹಾಕಿದ ಬಿಗ್‌ಬಾಸ್!
ಜಾಲಿವುಡ್ ಸ್ಟುಡಿಯೋಸ್ ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸದಿರುವ ವಿಚಾರವು ರಾಜಕೀಯ ತಿಕ್ಕಾಟದ ತಿರುವು ಪಡೆದುಕೊಂಡಿದೆ. ಇದು ಸದ್ದು ಮಾಡಿದ್ದ ಬೆನ್ನಲ್ಲೇ ರಾಜಕೀಯದ ಬಣ್ಣ ಪಡೆದುಕೊಂಡಿತು.
ನಿಯಮ ಉಲ್ಲಂಘನೆ ಆರೋಪದ ಮೇಲೆ 'ಬಿಗ್‌ಬಾಸ್ ಕನ್ನಡ ಸೀಸನ್ 12' ಕಾರ್ಯಕ್ರಮ ನಡೆಯುತ್ತಿದ್ದ ಬಿಡದಿ ಸಮೀಪದ ಜಾಲಿವುಡ್ ಸ್ಟುಡಿಯೋಸ್‌ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೀಗ ಜಡಿದ ಘಟನೆಯು ಇದೀಗ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ತಿಕ್ಕಾಟಕ್ಕೆ ಕಾರಣವಾಗಿದೆ.
ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಿಸದ ಕಾರಣಕ್ಕೆ ಮಂಡಳಿ ಕೈಗೊಂಡ ಈ ಕ್ರಮವು ಕೇವಲ ಒಂದು ಆಡಳಿತಾತ್ಮಕ ನಿರ್ಧಾರವಾಗಿ ಉಳಿದಿಲ್ಲ, ಬದಲಾಗಿ ಆಡಳಿತಾರೂಢ ಸರ್ಕಾರದ ಸಚಿವರು ಮತ್ತು ನಿಗಮ ಮಂಡಳಿ ಅಧ್ಯಕ್ಷರ ನಡುವಿನ ಅಧಿಕಾರದ ಶೀತಲ ಸಮರಕ್ಕೆ ವೇದಿಕೆಯಾಗಿದೆ. ಒಂದೆಡೆ, ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಮತ್ತು ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದ್ದರೆ, ಮತ್ತೊಂದೆಡೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಜೆಡಿಎಸ್ ನಡುವೆ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದೆ. ಇದರ ನಡುವೆಯೇ, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟವೂ ಮುನ್ನೆಲೆಗೆ ಬಂದಿದೆ.
ಈಶ್ವರ್ ಖಂಡ್ರೆ-ನರೇಂದ್ರಸ್ವಾಮಿ ಮುನಿಸು ಶಮನಕ್ಕೆ ಸಿಎಂ ಮಧ್ಯಪ್ರವೇಶ?
ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಬೀಗ ಹಾಕಿದ ಪ್ರಕರಣವು ಇದೀಗ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹಾಗೂ ಅವರದೇ ಇಲಾಖೆಯ ಅಧೀನದಲ್ಲಿ ಬರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ನಡುವಿನ ಪ್ರತಿಷ್ಠೆಯ ಸಮರಕ್ಕೆ ಕಾರಣವಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ವಾಯತ್ತ ಸಂಸ್ಥೆಯಾಗಿದ್ದರೂ, ಆಡಳಿತಾತ್ಮಕವಾಗಿ ಅದು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲೇ ಬರುತ್ತದೆ. ಹೀಗಿದ್ದರೂ, ಇಷ್ಟು ದೊಡ್ಡ ಮಟ್ಟದ ಕ್ರಮ ಕೈಗೊಳ್ಳುವ ಮುನ್ನ ನರೇಂದ್ರಸ್ವಾಮಿ ಅವರು ತಮ್ಮ ಗಮನಕ್ಕೆ ತರಲಿಲ್ಲ ಎಂಬುದು ಸಚಿವ ಈಶ್ವರ್ ಖಂಡ್ರೆ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಆಂತರಿಕವಾಗಿ ಬೇಸರ ವ್ಯಕ್ತಪಡಿಸಿರುವ ಈಶ್ವರ್ ಖಂಡ್ರೆ, "ಮಂಡಳಿಯು ನನ್ನ ಇಲಾಖೆಯ ಅಧೀನದಲ್ಲೇ ಬರುತ್ತದೆ. ಆದರೂ, ಯಾವುದೇ ಮಾಹಿತಿ ನೀಡದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ" ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮನ್ನು ಕಡೆಗಣಿಸಿ ನರೇಂದ್ರಸ್ವಾಮಿ ಏಕಾಏಕಿ ನಿರ್ಧಾರ ಪ್ರಕಟಿಸಿದ್ದು ಖಂಡ್ರೆ ಅವರ ಅಚ್ಚರಿ ಮತ್ತು ಮುನಿಸಿಗೆ ಕಾರಣವಾಗಿದೆ. ನರೇಂದ್ರಸ್ವಾಮಿ ಅವರು ಈ ಹಿಂದೆ ಬೇರೆ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಅನುಭವ ಹೊಂದಿದ್ದು, ಎಲ್ಲದಕ್ಕೂ ಸಚಿವರನ್ನು ಕೇಳುವ ಅಗತ್ಯವಿಲ್ಲ ಮತ್ತು ಮಂಡಳಿಯನ್ನು ಸ್ವತಂತ್ರವಾಗಿ ಮುನ್ನಡೆಸುವೆ ಎಂಬ ಧೋರಣೆ ಹೊಂದಿರಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಮತ್ತೊಂದೆಡೆ, ನರೇಂದ್ರಸ್ವಾಮಿ ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಜಾಲಿವುಡ್ ಸ್ಟುಡಿಯೋಸ್‌ನಲ್ಲಿ ನಕ್ಷೆ ಅನುಮೋದನೆ ಇಲ್ಲದೆ ಕೆಲವು ನಿರ್ಮಾಣಗಳನ್ನು ಮಾಡಲಾಗಿದೆ. ಅಲ್ಲದೆ, ಅಲ್ಲಿ ಉತ್ಪತ್ತಿಯಾಗುವ ಮಲಿನ ನೀರಿನ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲ. ಈ ನಿಯಮ ಉಲ್ಲಂಘನೆಗಳ ಬಗ್ಗೆ ಈ ಹಿಂದೆಯೇ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಸ್ಟುಡಿಯೋ ಆಡಳಿತ ಮಂಡಳಿ ಅದ್ಯಾವುದಕ್ಕೂ ಉತ್ತರ ನೀಡಿಲ್ಲ. ಹಾಗಾಗಿಯೇ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಈ ಇಬ್ಬರು ಪ್ರಮುಖರ ನಡುವಿನ ಶೀತಲ ಸಮರ ತಾರಕಕ್ಕೇರುತ್ತಿದ್ದಂತೆ, ಇದರ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಲು ಮುಂದಾಗಿದ್ದಾರೆ. ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುವುದನ್ನು ತಪ್ಪಿಸಲು, ಇಬ್ಬರನ್ನೂ ತಮ್ಮ ನಿವಾಸಕ್ಕೆ ಕರೆದು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ತೀರ್ಮಾನಿಸಿದ್ದಾರೆ. ಅದರಲ್ಲೂ, ನರೇಂದ್ರಸ್ವಾಮಿ ಅವರಿಗೆ ಕೆಲವು ಹಿತವಚನಗಳನ್ನು ಹೇಳಿ, ಇಲಾಖೆ ಮತ್ತು ನಿಗಮ-ಮಂಡಳಿಯ ನಡುವೆ ಸಾಮರಸ್ಯ ಕಾಪಾಡಿಕೊಳ್ಳುವಂತೆ ಸೂಚಿಸುವ ಸಾಧ್ಯತೆಯಿದೆ. ಯಾವುದೇ ವಿಷಯವನ್ನು ಮಾಧ್ಯಮಗಳ ಮುಂದೆ ತೆಗೆದುಕೊಂಡು ಹೋಗುವ ಮುನ್ನ ಆಂತರಿಕವಾಗಿ ಚರ್ಚಿಸಿ, ಹೊಂದಾಣಿಕೆಯಿಂದ ಮುಂದುವರಿಯಬೇಕು ಎಂಬ ಸಲಹೆಯನ್ನು ಸಿಎಂ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜೆಡಿಎಸ್-ಡಿ.ಕೆ. ಶಿವಕುಮಾರ್ ನಡುವಿನ 'ನಟ್ಟು-ಬೋಲ್ಟ್' ಸಮರ
ಬಿಗ್‌ಬಾಸ್ ಕಾರ್ಯಕ್ರಮ ರದ್ದತಿಯ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದ್ವೇಷದ ರಾಜಕಾರಣವಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ. ಈ ಹಿಂದೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಚಿತ್ರರಂಗದ ಗಣ್ಯರು ಗೈರಾದಾಗ, "ಚಿತ್ರರಂಗದವರ ನಟ್ಟು ಬೋಲ್ಟ್ ಹೇಗೆ ಟೈಟ್ ಮಾಡಬೇಕು ಎಂದು ನನಗೆ ಗೊತ್ತು" ಎಂದು ಡಿ.ಕೆ. ಶಿವಕುಮಾರ್ ನೀಡಿದ್ದ ಎಚ್ಚರಿಕೆಯ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿತ್ತು. ಇದೇ ಹೇಳಿಕೆಯನ್ನು ಅಸ್ತ್ರವಾಗಿಸಿಕೊಂಡಿರುವ ಜೆಡಿಎಸ್, "ನಟ ಕಿಚ್ಚ ಸುದೀಪ್ ನಡೆಸಿಕೊಡುವ ಕಾರ್ಯಕ್ರಮವನ್ನು ನಿಲ್ಲಿಸುವ ಮೂಲಕ 'ನಟ್ಟು ಬೋಲ್ಟ್ ಮಿನಿಸ್ಟರ್' ಡಿ.ಕೆ. ಶಿವಕುಮಾರ್ ಅವರು ಕಲಾವಿದರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, "ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್‌ನವರು ಏನು ಬೇಕಾದರೂ ರಾಜಕೀಯ ಮಾಡಿಕೊಳ್ಳಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಕೆಲಸ ಮಾಡಿದೆ. ಆದರೆ, ಖಾಸಗಿಯವರು ಕಾರ್ಯಕ್ರಮಕ್ಕೆ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿರುತ್ತಾರೆ. ಅಲ್ಲಿ ಏನೋ ತಪ್ಪಾಗಿದ್ದರೆ, ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುವುದು ನನ್ನ ಸಲಹೆ" ಎಂದು ಹೇಳುವ ಮೂಲಕ ಮಂಡಳಿ ಕ್ರಮವನ್ನು ಸಮರ್ಥಿಸಿಕೊಳ್ಳುವ ಜೊತೆಯಲ್ಲೇ, ಕಾರ್ಯಕ್ರಮ ಆಯೋಜಕರ ಪರ ಮೃದು ಧೋರಣೆ ತಳೆದಿದ್ದಾರೆ.
ಡಿ.ಕೆ. ಶಿವಕುಮಾರ್ ನಡೆಗೆ ರಾಮಲಿಂಗಾರೆಡ್ಡಿ ಪರೋಕ್ಷ ಅಸಮಾಧಾನ
ಈ ವಿವಾದವು ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ನಡುವಿನ ಆಂತರಿಕ ಅಧಿಕಾರ ಸಂಘರ್ಷವನ್ನೂ ಹೊರಹಾಕಿದೆ. ಜಾಲಿವುಡ್ ಸ್ಟುಡಿಯೋಸ್ ಬರುವುದು ರಾಮಲಿಂಗಾರೆಡ್ಡಿ ಅವರ ಉಸ್ತುವಾರಿ ಜಿಲ್ಲೆಯ ವ್ಯಾಪ್ತಿಗೆ. ಹೀಗಿದ್ದರೂ, ವಿವಾದದ ಆರಂಭದಲ್ಲಿ ಅವರು ಮೌನ ವಹಿಸಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿತ್ತು. ನಂತರ ಮೌನ ಮುರಿದ ರಾಮಲಿಂಗಾರೆಡ್ಡಿ, ಡಿ .ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸದೆ, ಅವರ ನಡೆಯನ್ನು ಪರೋಕ್ಷವಾಗಿ ಟೀಕಿಸಿದ್ದರು. "ನಿಯಮ ಉಲ್ಲಂಘನೆಗಾಗಿ ನೋಟಿಸ್ ನೀಡಿ ಕಾರ್ಯಕ್ರಮ ರದ್ದುಪಡಿಸಿದ ಮೇಲೆ, ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವವರೆಗೂ ಮತ್ತೆ ಅನುಮತಿ ನೀಡಬಾರದಿತ್ತು. ಕಾನೂನಿನಲ್ಲೂ ಇದೇ ಹೇಳುವುದು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ಕೊಡಬೇಕು ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಇದು ವಿರುದ್ಧವಾಗಿತ್ತು.
ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆಯಾದರೂ, ಆಡಳಿತಾತ್ಮಕವಾಗಿ ಉಸ್ತುವಾರಿ ಸಚಿವರಾಗಿರುವ ರಾಮಲಿಂಗಾರೆಡ್ಡಿ ಅವರೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಕಾರ್ಯಕ್ರಮವನ್ನು ಪುನರಾರಂಭಿಸಲು ಡಿ.ಕೆ. ಶಿವಕುಮಾರ್ ಅವರು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಉಪಮುಖ್ಯಮಂತ್ರಿ ಹುದ್ದೆಯು ಸಾಂವಿಧಾನಿಕವಲ್ಲದಿದ್ದರೂ, ಸರ್ಕಾರದಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ತಮಗೆ ಸಂಬಂಧಪಡದ ವಿಷಯಗಳಲ್ಲಿ ಅವರು ಮಧ್ಯಪ್ರವೇಶಿಸುತ್ತಿದ್ದಾರೆ ಎಂಬ ಟೀಕೆಗಳು ರಾಜಕೀಯ ತಜ್ಞರಿಂದ ವ್ಯಕ್ತವಾಗಿವೆ.