ಲಂಚ ಸ್ವೀಕಾರ | ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇಇ, ಜೆಇ
ಬೊಮ್ಮೇನಹಳ್ಳಿಯ ನ್ಯೂ ರಾಯಲ್ ಪ್ರೆಷ್ ಮಾರ್ಟ್ ಬಳಿ ಕರೆಸಿ, ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಲೆಗೆ ಕೆಡವಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಹೊಸದಾಗಿ ನಿರ್ಮಿಸಿದ ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 16.50 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಬೆಸ್ಕಾಂ ಎಇಇ ರಮೇಶ್ ಬಾಬು ಹಾಗೂ ಜೆಇ ನಾಗೇಶ್ ಅವರು ಗುರುವಾರ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹೊಸಕೋಟೆ ತಾಲೂಕಿನ ಆವಲಹಳ್ಳಿ ಸಮೀಪದ ಪಿ. ಮುತ್ತುಸ್ವಾಮಿ ಎಂಬುವರ ಮಾಲೀಕತ್ವದಲ್ಲಿ ಬೊಮ್ಮೇನಹಳ್ಳಿ ಗ್ರಾಮದ ಸರ್ವೇ ನಂಬರಿಗೆ ಸೇರಿದ ಜಾಗದಲ್ಲಿ ಬಡಾವಣೆ ನಿರ್ಮಿಸಲಾಗಿತ್ತು. ಹೊಸದಾಗಿ ನಿರ್ಮಿಸಿರುವ ಲೇಔಟ್ಗೆ ವಿದ್ಯುತ್ ಸಂಪರ್ಕ ಪಡೆಯಲು ಖಾಸಗಿ ಎಲೆಕ್ಟಿಕಲ್ಸ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
ಖಾಸಗಿ ಎಲೆಕ್ಟಿಕಲ್ಸ್‌ನ ವಿಜಯಕುಮಾರ್ ಎಂಬುವರು ಸೆ. 26 ರಂದು ಆವಲಹಳ್ಳಿ ಬೆಸ್ಕಾಂ ಕಚೇರಿಯ ಎಇಇ ರಮೇಶ್ ಬಾಬು ಅವರನ್ನು ಭೇಟಿ ಮಾಡಿ ಖರ್ಚುವೆಚ್ಚಗಳ ಕುರಿತು ಮಾಹಿತಿ ಪಡೆದಿದ್ದರು. ಈ ಕುರಿತು ಸೆಕ್ಷನ್ ಅಧಿಕಾರಿಯಾದ ಜೆಇ ನಾಗೇಶ್ ಅವರೊಂದಿಗೆ ಮಾತನಾಡುವಂತೆ ಎಇಇ ಸೂಚಿಸಿ, ಅಲ್ಲಿಯವರೆಗೂ ಕಡತ ಬಾಕಿ ಉಳಿಸುವುದಾಗಿ ಹೇಳಿದ್ದರು.
ಎಇಇ ರಮೇಶ್ ಬಾಬು ಹೇಳಿದಂತೆ ಅದೇ ದಿನ ವಿಜಯಕುಮಾರ್ ಅವರು ಸೆಕ್ಷನ್ ಅಧಿಕಾರಿ ನಾಗೇಶ್ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ 16.50 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ವಿಜಯ್‌ಕುಮಾರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ(ಅ.24) ಎಇಇ ರಮೇಶ್ ಬಾಬು ಸೂಚನೆಯಂತೆ ಜೆ.ಇ ನಾಗೇಶ್ ಅವರನ್ನು ಬೊಮ್ಮೇನಹಳ್ಳಿಯ ನ್ಯೂ ರಾಯಲ್ ಪ್ರೆಷ್ ಮಾರ್ಟ್ ಬಳಿ ಕರೆಸಿ, ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಲೆಗೆ ಕೆಡವಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಟ್ರ್ಯಾಪ್ ಪ್ರಕ್ರಿಯೆಯಲ್ಲಿ ಲೋಕಾಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್, ಪೊಲೀಸ್ ಇನ್ಸ್ಪೆ ಕ್ಟರ್ ಗಳಾದ ರಮೇಶ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.