ಪ್ರಧಾನಿ ಮೋದಿ ಮನೆ ಮೇಲೆ ಬಾಂಬ್ ಹಾಕಿ ಎಂದ ಬೆಂಗಳೂರಿನ ಯುವಕನ ಬಂಧನ
ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಯಾಕೆ ಪಾಕಿಸ್ತಾನ ಬಾಂಬ್ ಹಾಕಿಲ್ಲ? ಜನರೆಲ್ಲ ಸುಮ್ಮನೆ ನೆಮ್ಮದಿಯಿಂದ ಇರುವಾಗ ಈ ಪರಿಸ್ಥಿತಿ ಸೃಷ್ಟಿಸಿದ್ದು ಮೋದಿ ಎಂದು ನವಾಜ್ ವಿಡಿಯೋದಲ್ಲಿ ಹೇಳಿಕೊಂಡಿದ್ದ.;
ಬಂಧಿತ ಆರೋಪಿ ನವಾಜ್
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ವಿಡಿಯೋ ಹಂಚಿಕೊಂಡಿದ್ದ ಯುವಕನನ್ನು ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ನವಾಜ್ ಬಂಧಿತ ಆರೋಪಿ.
ನವಾಜ್ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ "ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಯಾಕೆ ಪಾಕಿಸ್ತಾನ ಬಾಂಬ್ ಹಾಕಿಲ್ಲ? ಜನರೆಲ್ಲ ಸುಮ್ಮನೆ ನೆಮ್ಮದಿಯಿಂದ ಇರುವಾಗ ಈ ಪರಿಸ್ಥಿತಿ ಸೃಷ್ಟಿಸಿದ್ದು ಮೋದಿ. ಮೊದಲು ಮೋದಿ ಮನೆ ಮೇಲೆ ಬಾಂಬ್ ಹಾಕಬೇಕು" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ನವಾಜ್ 'ಪಬ್ಲಿಕ್ ಸರ್ವೆಂಟ್ ಐಡಿ' ಮೂಲಕ ವಿಡಿಯೋ ವೈರಲ್ ಮಾಡಿದ್ದ.
ಇತ್ತೀಚೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಪಾಕಿಸ್ತಾನ ಪರ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕೆಲವರನ್ನು ವಶಕ್ಕೆ ಪಡೆದಿದ್ದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ನಾಲ್ಕು ಪ್ರದೇಶಗಳು ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಐದು ಕಡೆಗಳಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿತ್ತು.
ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆ ಭಾರತೀಯ ನಾಗರಿಕರ ಮೇಲೆ ದಾಳಿ ನಡೆಸಿತ್ತು. ಅಲ್ಲದೆ ಭಾರತದ 15 ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಭಾರತೀಯ ಸೇನೆ ಪಾಕಿಸ್ತಾನದ ಅನೇಕ ವಾಯುನೆಲೆಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಧ್ವಂಸಗೊಳಿಸಿತ್ತು. ಅಂತಿಮವಾಗಿ ಪಾಕಿಸ್ತಾನ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮನವಿ ಮಾಡಿದ್ದರ ಮೇರೆಗೆ ಭಾರತ ಕದನ ವಿರಾಮಕ್ಕೆ ಸಮ್ಮತಿಸಿತ್ತು.