ಬಳ್ಳಾರಿ ಬಾಣಂತಿಯರ ಸಾವು | ಆರೋಗ್ಯ ಸಚಿವರ ರಾಜೀನಾಮೆಗೆ ಒತ್ತಾಯ: ಲೋಕಾಯುಕ್ತರಿಗೆ ಬಿಜೆಪಿ ದೂರು

ಪ್ರಕರಣದ ಕುರಿತು ಸು-ಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಲೋಕಾಯುಕ್ತರಿಗೆ ಮನವಿ ಮಾಡಿರುವ ಬಿಜೆಪಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.

Update: 2024-12-06 12:14 GMT

ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮತ್ತೊಂದು ಉರುಳಾಗುವ ಸಾಧ್ಯತೆಗಳು ಹೆಚ್ಚಿವೆ.

ಮುಡಾ, ವಾಲ್ಮೀಕಿ, ಅಬಕಾರಿ ಹಗರಣಗಳಂತೆ ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣವು ʼಮೆಡಿಕಲ್ ಮಾಫಿಯಾʼದಂತಿದೆ ಎಂಬ ಬಿಜೆಪಿಯ ಆರೋಪ ರಾಜ್ಯ ಸರ್ಕಾರವನ್ನು ಸಂಕಷ್ಟಕ್ಕೆ ತಳ್ಳಿದೆ.

ತನ್ನ ಆಡಳಿತ ಅವಧಿಯಲ್ಲಿ ನಡೆದ ಕೋವಿಡ್ ಹಗರಣಕ್ಕೆ ಪ್ರತಿಯಾಗಿ ಬಳ್ಳಾರಿ ಬಾಣಂತಿಯರ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಲುಕಿಸಲು ಬಿಜೆಪಿ ನಿರ್ಧರಿಸಿದೆ. ಪ್ರಕರಣ ಸಂಬಂಧ ರಾಜ್ಯ ಬಿಜೆಪಿ ನಿಯೋಗ ಲೋಕಾಯುಕ್ತರಿಗೆ ಶುಕ್ರವಾರ ದೂರು ನೀಡಿದ್ದು, ತನಿಖೆಗೆ ಮನವಿ ಮಾಡಿದೆ. 

ಕಳಪೆ ಗುಣಮಟ್ಟದ ಐವಿ ದ್ರಾವಣ ನೀಡಿದ್ದರಿಂದಲೇ ಐವರು ಬಾಣಂತಿಯರ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ದ್ರಾವಣದಲ್ಲಿ ಫಂಗಸ್‌, ಇತರೆ ಬ್ಯಾಕ್ಟೀಯಾ ಇರುವುದು ಪ್ರಯೋಗಾಲಯದ ವರದಿಯಿಂದ ಬಯಲಾಗಿದೆ. ರಾಜ್ಯ ಸರ್ಕಾರ ಆರು ತಿಂಗಳ ಹಿಂದೆಯೇ ʼರಿಂಗರ್‌ ಲ್ಯಾಕ್ಟೇಟ್‌ ಐವಿ ದ್ರಾವಣʼದ ಬಳಕೆಯನ್ನು ನಿಲ್ಲಿಸುವಂತೆ ಸೂಚಿಸಿದ್ದರೂ ಆಸ್ಪತ್ರೆಯಲ್ಲಿ ಇದೇ ದ್ರಾವಣ ಬಳಸಲಾಗಿದೆ. ನಿಷೇಧಿತ ದ್ರಾವಣ ಬಳಕೆಯ ಹಿಂದಿರುವವರ ಪತ್ತೆಗೆ ಲೋಕಾಯುಕ್ತರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ನೇತೃತ್ವದ ಬಿಜೆಪಿ ನಿಯೋಗ ಶುಕ್ರವಾರ ಬೆಂಗಳೂರಿನಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರಿಗೆ ದೂರು ಸಲ್ಲಿಸಿದೆ.

ಬಿಜೆಪಿ ನಿಯೋಗದ ಒತ್ತಾಯವೇನು?

  • ಬಾಣಂತಿಯರ ಸಾವಿನ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
  • ಬಾಣಂತಿಯರ ಸಾವಿನ ಸತ್ಯಾಂಶ ತಿಳಿಯಲು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.
  • ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ರಾಜಕಾರಣಿಗಳ ವಿರುದ್ಧ ಪ್ರಾಸಿಕ್ಯೂಷನ್‌ ತನಿಖೆಗೆ ಒಳಪಡಿಸಿ, ಕ್ರಮ ಜರುಗಿಸಬೇಕು.
  • ಸಂತ್ರಸ್ಥೆಯರ ಕುಟುಂಬಕ್ಕೆ ಅಗತ್ಯ ಪರಿಹಾರ ಒದಗಿಸಬೇಕು. ಅವರ ಕುಟುಂಬಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಜೊತೆಗೆ ವೈದ್ಯಕೀಯ ನೆರವು ಘೋಷಿಸಬೇಕು.
  • ವೈದ್ಯಕೀಯ ಪರಿಕರಗಳ ಪೂರೈಕೆಯಲ್ಲಿ ಪಾರದರ್ಶಕತೆ, ಗುಣಮಟ್ಟ ಪರಿಶೀಲನೆಗೆ ಒತ್ತು ನೀಡಬೇಕು.
  • ಸುರಕ್ಷತೆ, ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಸಲುವಾಗಿ ರಾಜ್ಯಾದ್ಯಂತ ಆರೋಗ್ಯ ವ್ಯವಸ್ಥೆ ಸುಧಾರಿಸಬೇಕು.

ಮಾನವೀಯತೆ ಕಳೆದುಕೊಂಡ ಸರ್ಕಾರ

ಬಳ್ಳಾರಿಯಲ್ಲಿ11 ಹಸುಗೂಸುಗಳ ಸಾವಾಗಿದೆ. ಐವರು ಬಾಣಂತಿಯರು ಮೃತಪಟ್ಟಿದ್ದಾರೆ. ಬೇರೆ ಬೇರೆ ಕಡೆಗಳಲ್ಲೂ ಬಾಣಂತಿಯರು ಮೃತಪಟ್ಟಿದ್ದಾರೆ. ರಾಜ್ಯಾದ್ಯಂತ ಆರೋಗ್ಯ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎಲ್ಲಾ ಕಡೆ ಆಸ್ಪತ್ರೆಗಳಿಗೆ ಲೋಕಾಯುಕ್ತರೇ ಸ್ವಯಂಪ್ರೇರಿತವಾಗಿ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಜನರ ಪ್ರಾಣ ಕಾಪಾಡುವ ಬದಲು ಪ್ರಾಣ ತೆಗೆಯುತ್ತಿದೆ. ಮಾನವೀಯತೆ ಕಳೆದುಕೊಂಡಿದೆ. ಅಧಿಕಾರ ಹಂಚಿಕೆ, ಭ್ರಷ್ಟಾಚಾರ, ಸಮಾವೇಶ ನಡೆಸುವುದರಲ್ಲಿ ಸರ್ಕಾರ ನಿರತವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಉದಾಸೀನ ಸರ್ಕಾರವಾಗಿದೆ. ಬಳ್ಳಾರಿ ಬಾಣಂತಿಯರ ಪ್ರಕರಣ ಕುರಿತು ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಐವಿ ರಿಂಗರ್ ಲ್ಯಾಕ್ಟೇಟ್ ಕಳಪೆ ಗುಣಮಟ್ಟದ ದ್ರಾವಣ ಎಂಬುದು ಮೊದಲೇ ತಿಳಿದಿತ್ತು. ಪೂರೈಕೆ ಸ್ಥಗಿತಗೊಳಿಸಿದರೂ ಆಸ್ಪತ್ರೆಗೆ ಹೇಗೆ ಬಂತು, ಔಷಧ ನಿಯಂತ್ರಣ ಮಂಡಳಿ ಏನು ಮಾಡುತ್ತಿತ್ತು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಮೃತ ಬಾಣಂತಿಯರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ನೀಡಬೇಕು ಎಂದು ರವಿಕುಮಾರ್ ಒತ್ತಾಯಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಒತ್ತಾಯ

ಈ ನಡುವೆ, ಬಳ್ಳಾರಿ ಬಾಣಂತಿಯರ ಸಾವಿನ  ಪ್ರಕರಣವನ್ನು ಕುರಿತು ಪ್ರತ್ಯೇಕ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಬೆಜೆಪಿ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಪ್ಪುಪಟ್ಟಿಗೆ ಸೇರಿದ ಕಂಪನಿಯಿಂದ ಐವಿ ದ್ರಾವಣ ಖರೀದಿಸಲಾಗಿದೆ. ಇದರಿಂದ ಐವರು ಬಾಣಂತಿಯರು ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ಸತ್ಯಾಂಶ ಹೊರಗೆ ಬರಲು ನ್ಯಾಯಾಂಗ ತನಿಖೆ ನಡೆಸಬೇಕು. ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Tags:    

Similar News