ಗುಳಿಕ ಕಾಲದಲ್ಲೇ ಜೈಲಿನಿಂದ ಬಿಡುಗಡೆಯಾಗಿ ನೇರ ದೇವೇಗೌಡರ ಮನೆ ಸೇರಿದ ರೇವಣ್ಣ

Update: 2024-05-14 09:24 GMT

ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ ಹಾಲಿ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಸೋಮವಾರ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ (ಮೇ 14) ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಬಳಿಕ ರೇವಣ್ಣ ಅವರು ನೇರವಾಗಿ ಪದ್ಮನಾಭನಗರದಲ್ಲಿರುವ ಅವರ ತಂದೆ, ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರ ನಿವಾಸಕ್ಕೆ ತೆರಳಿದ್ದಾರೆ.

ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಇದರಿಂದಾಗಿ ಒಟ್ಟು 11 ದಿನಗಳ ಕಾಲ ಅವರು ಜೈಲು ಸೇರಿದ್ದರು. ಸೋಮವಾರ ಜಾಮೀನು ಸಿಕ್ಕಿದ್ದು, ಮಂಗಳವಾರ ಮಧ್ಯಾಹ್ನ ಅವರು ಬಿಡುಗಡೆಯಾಗಿ ಮನೆ ಸೇರಿದರು.

ಇದೀಗ ರೇವಣ್ಣ ಪರ ವಕೀಲರು ಜಾಮೀನು ಷರತ್ತುಗಳನ್ನು ಪೂರೈಸಿದ್ದಾರೆ. ರೇವಣ್ಣ ಪಾಸ್ ಪೋರ್ಟ್, ಇಬ್ಬರು ಶ್ಯೂರಿಟಿ, ಐದು ಲಕ್ಷ ರೂಪಾಯಿ ಬಾಂಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ವಕೀಲರು ಸಲ್ಲಿಸಿದ ಬಳಿಕ ರೇವಣ್ಣ ಅವರನ್ನು ಬಿಡುಗಡೆ ಮಾಡಲಾಯಿತು.

ಗುಳಿಕ ಕಾಲದಲ್ಲಿಯೇ ರೇವಣ್ಣ ಜೈಲಿನಿಂದ ರಿಲೀಸ್

ಮಧ್ಯಾಹ್ನ 3:22 ರಿಂದ 5 ಗಂಟೆಯವರೆಗೆ ರಾಹುಕಾಲ ಇರುವ ಹಿನ್ನೆಲೆಯಲ್ಲಿ ಬಿಡುಗಡೆ ಪ್ರಕ್ರಿಯೆಯನ್ನು ಬೇಗ ಮಾಡಲಾಗಿದೆ. ಮಧ್ಯಾಹ್ನ 12.5 ರಿಂದ 1:39ರವರೆಗೆ ಗುಳಿಕ ಕಾಲ ಇದ್ದದ್ದರಿಂದ 1.30ಕ್ಕೆ ರೇವಣ್ಣ ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ. ರೇವಣ್ಣ ಜೈಲಿನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿ ಅವರ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ.

Tags:    

Similar News