ಬಿಜೆಪಿ ಅವಧಿಯ ಬಿಬಿಎಂಪಿ ಅಕ್ರಮ ಆರೋಪ: ನಾಗಮೋಹನ್ ದಾಸ್ ಆಯೋಗದಿಂದ 8,900 ಪುಟಗಳ ವರದಿ ಸಲ್ಲಿಕೆ

ಅನುಬಂಧಗಳು ಸೇರಿದಂತೆ ಒಟ್ಟು 8,900 ಪುಟಗಳ ಬೃಹತ್ ವರದಿಯಲ್ಲಿ, ಕಾಮಗಾರಿಗಳ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಹಲವು ನ್ಯೂನತೆಗಳನ್ನು ಗುರುತಿಸಲಾಗಿದೆ.;

Update: 2025-08-30 13:04 GMT

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 2019-20ರಿಂದ 2022-23ರವರೆಗೆ (ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದ ಅವಧಿ) ನಡೆದಿದೆ ಎನ್ನಲಾದ ಕಾಮಗಾರಿಗಳ ಅಕ್ರಮಗಳ ಕುರಿತು ತನಿಖೆ ನಡೆಸಿದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗವು, ತನ್ನ ಅಂತಿಮ ತನಿಖಾ ವರದಿಯನ್ನು ಶನಿವಾರ (ಆಗಸ್ಟ್ 30) ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ.

ಅನುಬಂಧಗಳು ಸೇರಿದಂತೆ ಒಟ್ಟು 8,900 ಪುಟಗಳ ಬೃಹತ್ ವರದಿಯಲ್ಲಿ, ಕಾಮಗಾರಿಗಳ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಹಲವು ನ್ಯೂನತೆಗಳನ್ನು ಗುರುತಿಸಲಾಗಿದೆ. ಅಕ್ರಮಗಳಲ್ಲಿ ಭಾಗಿಯಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲು ಆಯೋಗವು ಶಿಫಾರಸು ಮಾಡಿದೆ. ಇದರ ಜೊತೆಗೆ, ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ತಡೆಯಲು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಬಗ್ಗೆಯೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ತನಿಖೆಯ ಹಿನ್ನೆಲೆಯೇನು?

ಬಿಬಿಎಂಪಿ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಸಂಪೂರ್ಣ ತನಿಖೆ ನಡೆಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 2023ರಿಂದ ಜುಲೈ 13ರಂದು ಮುಖ್ಯಮಂತ್ರಿಗಳಿಗೆ ಕೋರಿದ್ದರು. ಸರ್ಕಾರದ ಆದೇಶದಂತೆ, 2023 ಆಗಸ್ಟ್​​ 3ರಂದು ತಜ್ಞರನ್ನು ಒಳಗೊಂಡ ನಾಲ್ಕು ವಿಶೇಷ ತನಿಖಾ ಸಮಿತಿಗಳನ್ನು (SIT) ರಚಿಸಲಾಗಿತ್ತು. ನಂತರ, ಡಿಸೆಂಬರ್​ 15ರಂದು ನಾಲ್ಕು ಸಮಿತಿಗಳನ್ನು ಹಿಂಪಡೆದು, ತನಿಖೆಯ ಜವಾಬ್ದಾರಿಯನ್ನು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗಕ್ಕೆ ವರ್ಗಾಯಿಸಲಾಯಿತು.

ಸಮಗ್ರ ತನಿಖೆಯ ಹಂತಗಳು ಈ ರೀತಿ ಇವೆ

ಆಯೋಗವು ತನ್ನ ತನಿಖಾ ಪ್ರಕ್ರಿಯೆಯಲ್ಲಿ ಮೂರು ಹಂತದ ಪರಿಶೀಲನಾ ಮಾರ್ಗವನ್ನು ಅನುಸರಿಸಿದೆ ಎಂದು ವರದಿಯಲ್ಲಿ ಹೇಳಿದೆ. ಮೊದಲ ಹಂತದಲ್ಲಿ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ನಂತಗರ ಕಾಮಗಾರಿಗಳು ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಮೂರನೇ ಹಂತರದಲ್ಲಿ ಕಾಮಗಾರಿಗಳ ವೆಚ್ಚ ಮತ್ತು ಪಾವತಿಗಳಿಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಪರಿಶೋಧಿಸಲಾಗಿದೆ.

ಆಯೋಗವು 'ರಾಂಡಮ್' ಮಾದರಿಯಲ್ಲಿ 528 ಕಾಮಗಾರಿಗಳನ್ನು ಮತ್ತು ಇತರ 233 ಕಾಮಗಾರಿಗಳನ್ನು, ಒಟ್ಟು 761 ಪೂರ್ಣಗೊಂಡ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಿ, ಹಲವು ನ್ಯೂನತೆಗಳನ್ನು ಪತ್ತೆಹಚ್ಚಿದೆ.  

Tags:    

Similar News