ಬಿಪಿಎಲ್‌ ಕಾರ್ಡ್‌ ರದ್ದತಿಯಲ್ಲಿ ಹಿಂದೂಗಳೇ ಟಾರ್ಗೆಟ್‌; ಬಸನಗೌಡ ಪಾಟೀಲ ಯತ್ನಾಳ ಆರೋಪ

ರಾಜ್ಯ ಸರ್ಕಾರ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.;

Update: 2024-11-20 13:41 GMT

ಅನರ್ಹರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಪ್ರತಿಪಕ್ಷಗಳು ಇದ್ದನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ಸಮರಕ್ಕಿಳಿದಿವೆ. ವಕ್ಫ್ ವಿವಾದದ ಬಳಿಕ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಆಪರೇಷನ್ ಆರಂಭಿಸಿದೆ ಎಂದು ಟೀಕಿಸಿವೆ.

ರಾಜ್ಯ ಸರ್ಕಾರ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರೇ ಹಿಂದೂಗಳ ವೋಟು ಬೇಡ ಎಂದಿದ್ದರು. ಅದಕ್ಕಾಗಿಯೇ ಹಿಂದೂಗಳ ರೇಷನ್ ಕಾರ್ಡ್ ರದ್ದುಗೊಳಿಸುತಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ದೂರಿದ್ದಾರೆ.

ರದ್ದಾಗಿರುವ ಹಿಂದೂಗಳ ಬಿಪಿಎಲ್ ಕಾರ್ಡ್ ಪಟ್ಟಿ ತೆಗೆದುಕೊಂಡು ಅಧಿವೇಶನದಲ್ಲಿ ಧರಣಿ ಕೂರುತ್ತೇವೆ. ಯಾವುದೇ ಕಾರಣಕ್ಕೂ ಹಿಂದೂಗಳಿಗೆ ಪಡಿತರ ಹಂಚಿಕೆಯಲ್ಲಿ ಅನ್ಯಾಯ ಆಗಬಾರದು. ಕಾಂಗ್ರೆಸ್ ಸರ್ಕಾರ ಬೇಕೆಂತಲೇ ಹಿಂದೂಗಳನ್ನು ಗುರಿಯಾಗಿಸಿಕೊಂಡು ಈ ರೀತಿ ಮಾಡುತ್ತಿದೆ. ಪಾನ್ ಕಾರ್ಡ್ ಗೆ ಅರ್ಜಿ ಹಾಕಿದವರ ರೇಷನ್ ಕಾರ್ಡನ್ನೂ ಸರ್ಕಾರ ರದ್ದು ಮಾಡಿದೆ. ಹಿಂದೂಗಳನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನು ವಕ್ಫ್ ವಿವಾದಲ್ಲಿ ನೋಟಿಸ್ ಹಿಂಪಡೆದರೆ ಸಾಲದು. ವಕ್ಫ್‌ ಅಧಿಸೂಚನೆಯನ್ನೇ ರದ್ದು ಮಾಡಬೇಕು. ಇದರ ಬಗ್ಗೆಯೂ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ. ಮುಸ್ಲಿಮರಿಗೆ ಪ್ರತ್ಯೇಕವಾಗಿರುವ ವಕ್ಫ್ ನ್ಯಾಯಾಧೀಕರಣವನ್ನು ನಾವು ಒಪ್ಪುವುದಿಲ್ಲ. ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ನೋಟಿಸ್ ನೀಡದೆಯೂ ವಕ್ಫ್ ಮಂಡಳಿಗೆ ಸೇರ್ಪಡೆಯಾಗಿರುವ ಆಸ್ತಿಗಳನ್ನು ಮರಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಕ್ಫ್‌ ವಿರುದ್ಧ ದೆಹಲಿಗೆ ನಿಯೋಗ ಕೊಂಡೊಯ್ದು ಜೆಪಿಸಿ ಅಧ್ಯಕ್ಷರಿಗೆ ಮತ್ತೊಮ್ಮೆ ಮನವಿ ಮಾಡುತ್ತೇವೆ. ವಕ್ಫ್ ವಿರುದ್ಧ ಸಾಯುವವರೆಗೂ ಹೋರಾಟ ಮಾಡುತ್ತೇನೆ. ಮೋದಿಯವರು 42 ಆಪರೇಶನ್ ಮಾಡುತ್ತಿದ್ದಾರೆ. ಅದರಲ್ಲೂ ವಕ್ಫ್ ಕೂಡ ಒಂದು. ಒಂದು ವೇಳೆ ಅದು ಜೀವಂತವಾಗಿ ಉಳಿದರೂ ಇಂಜೆಕ್ಷನ್ ಕೊಟ್ಟು ಕೊಲ್ಲುತ್ತೇವೆ ಎಂದು ಯತ್ನಾಳ್ ಹೇಳಿದ್ದಾರೆ.

ಈ ಮಧ್ಯೆ ಬಿಪಿಎಲ್ ಕಾರ್ಡ್ ರದ್ದತಿ ಕುರಿತಂತೆ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಬಿಜೆಪಿ ಹಾಗೂ ಕುಮಾರಸ್ವಾಮಿ ಅವರಿಗೆ ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅವರ ಕಾಲದಲ್ಲಿ ಏನೇನು ಅನ್ಯಾಯ ಮಾಡಬೇಕೋ ಅಲ್ಲವರನ್ನೂ ಮಾಡಿ ಆಗಿದೆ. ಪಡಿತರ ವಿತರಣೆ, ಪಿಂಚಣಿ ಯೋಜನೆ, ವಸತಿ ಸೌಲಭ್ಯ ನೀಡಿದ್ದು ಯಾರೂ ಎಂದು ಪ್ರಶ್ನಿಸಿದ್ದಾರೆ.

Tags:    

Similar News