Garbage Problem Part 3 | ಎಂಎಸ್‌ಜಿಪಿ ಘಟಕದ 30 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಕಲುಷಿತ

ಬಿಬಿಎಂಪಿ ವಹಿಸಿರುವ ಖಾಸಗಿ ಎಂಎಸ್‌ಜಿಪಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಾತ್ರ ಉತ್ತಮ ರಸ್ತೆ ಸಂಪರ್ಕವಿದೆ! ಸುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ.;

Update: 2025-07-10 13:40 GMT

ಬೆಂಗಳೂರಿನ ತ್ಯಾಜ್ಯ ಸುರಿಯುತ್ತಿರುವ ದೊಡ್ಡಬಳ್ಳಾಪುರದ ಎಂ.ಎಸ್.ಜಿ.ಪಿ. ಘಟಕದ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಕಲುಷಿತವಾಗಿದೆ ಎಂಬ ವರದಿಗಳು ಆತಂಕ ಮೂಡಿಸಿವೆ.

ತ್ಯಾಜ್ಯ ವಿಲೇವಾರಿ ಘಟಕದ ಸುತ್ತಲಿನ ಚಿಗರೇನಹಳ್ಳಿ, ಬೊಮ್ಮಹಳ್ಳಿ, ಗುಂಡ್ಲಹಳ್ಳಿ, ತಣ್ಣೀರನಹಳ್ಳಿ, ಮೂಡ್ಲ ಕಾಳೇನಹಳ್ಳಿ, ಖಾಲಿಪಾಳ್ಯ, ಮಂಕಳಾಲ ಹಾಗೂ ಕಾಡತಿಪ್ಪೂರು ಸೇರಿದಂತೆ  ಕೊರಟಗೆರೆ ಗಡಿಯಲ್ಲಿರುವ ಮಾವತ್ತೂರು ಕೆರೆವರೆಗಿನ ಜಲಮೂಲಗಳು ಕಲುಷಿತವಾಗಿವೆ.

ಪ್ರತಿ ಮಳೆಗಾಲಯದಲ್ಲೂ ತ್ಯಾಜ್ಯ ಘಟಕದ ರಾಸಾಯನಿಕ‌ ಮಿಶ್ರಿತ ನೀರು ಉತ್ತರ ಭಾಗದಲ್ಲಿರುವ ಬೊಮ್ಮನಹಳ್ಳಿ ಕೆರೆಗೆ ಹರಿದು, ಅಲ್ಲಿಂದ ತಣ್ಣೀರನಹಳ್ಳಿ, ಕಾಡತಿಪ್ಪೂರು, ಅಂಕೋನಹಳ್ಳಿ ಕೆರೆಗಳಿಗೆ ಹರಿದು ಬೈರಗೊಂಡ್ಲು ಹಳ್ಳದ ಮೂಲಕ ಮಾವತ್ತೂರು ಕೆರೆ ಸೇರುತ್ತಿದೆ. ಈ ಜಲಮೂಲಗಳ ಮೂಲಕ ಕಲುಷಿತ‌ ನೀರು ಅಂತರ್ಜಲ ಹೊಕ್ಕುತ್ತಿದೆ. ಎಂಎಸ್ ಜಿಪಿ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಮಾವತ್ತೂರು ಕೆರೆ 28.6 ಕಿ.ಮೀ.ದೂರದಲ್ಲಿದೆ.

ಘಟಕದ ದಕ್ಷಿಣ ಭಾಗದಲ್ಲಿ ದೊಡ್ಡತುಮಕೂರು, ಮಧುರೆ, ಕಾಕೋಳು ಕೆರೆಯವರೆಗೂ ನೀರು ಕಲುಷಿತಗೊಂಡಿದೆ. ತ್ಯಾಜ್ಯ ಘಟಕದಿಂದ ಕಾಕೋಳು ಕೆರೆ 30.8 ಕಿ.ಮೀ. ವ್ಯಾಪ್ತಿಯಲ್ಲಿದೆ. 

ಪೂರ್ವ ಭಾಗದಲ್ಲಿ ದೊಡ್ಡಬಳ್ಳಾಪುರದ ನಾಗರಕೆರೆವರೆಗಿನ ಜಲಮೂಲಗಳು ಕೈಗಾರಿಕಾ ತ್ಯಾಜ್ಯದಿಂದ ಕಲುಷಿತವಾಗಿವೆ. ಈ ಕೆರೆಯು ತ್ಯಾಜ್ಯ ಘಟಕದಿಂದ 26.4 ಕಿ.ಮೀ.ದೂರದಲ್ಲಿದೆ. ಘಟಕದ ಪಶ್ಚಿಮ ಭಾಗದಲ್ಲಿ ದಾಬಸ್ ಪೇಟೆ, ಶಿವಗಂಗೆ ಇದ್ದು, ಇಲ್ಲಿನ ಕೈಗಾರಿಕೆಗಳಿಂದಲೇ ಜಲಮೂಲಗಳು ಹಾನಿಯಾಗಿವೆ. 

ಈ ಎಲ್ಲಾ ಭಾಗಗಳಲ್ಲೂ ನೀರಿನ ಮಾದರಿಗಳನ್ನು ಪರೀಕ್ಷೆ ನಡೆಸಿರುವ ಅಂತರ್ಜಲ ನಿರ್ದೇಶನಾಲಯವು ನೀರು ಕಲುಷಿತ ಆಗಿರುವುದಾಗಿ ಹೇಳಿದೆ. ಒಟ್ಟಾರೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ  ಶೇ 137 ರಷ್ಟು ಅಂತರ್ಜಲ‌ ಕಲುಷಿತವಾಗಿದೆ ಎಂದು 2016-17 ರಲ್ಲಿ ಕೇಂದ್ರ ಅಂತರ್ಜಲ ಮಂಡಳಿ ನಡೆಸಿರುವ ನೀರಿನ ಮಾಪನ ಹಾಗೂ ನಿರ್ವಹಣಾ ಯೋಜನೆಯ ಕರಡು ವರದಿಯಲ್ಲಿ ಉಲ್ಲೇಖಿಸಿದೆ. ಈಗ‌ ಅಂತರ್ಜಲ ಮತ್ತಷ್ಟು ಕಲುಷಿತಗೊಂಡು ಜ‌ನರ ಮೇಲೆ ನೇರ ಪರಿಣಾಮ ಬೀರುತ್ತಿದೆ.

ತಾಲೂಕು ಪಂಚಾಯ್ತಿಯ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ ಕೂಡ ಎಂಎಸ್ ಜಿಪಿ ತ್ಯಾಜ್ಯ ಘಟಕದ ಸುತ್ತ ನೀರಿನ ಮಾದರಿಗಳನ್ನ ಪರೀಕ್ಷೆ ನಡೆಸಿದ್ದು, ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದೆ ಎಂದು ಭಕ್ತರಹಳ್ಳಿ ಗ್ರಾ.ಪಂ.ಸದಸ್ಯ ಸಿದ್ದಲಿಂಗಯ್ಯ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಈ ಹಿಂದೆ ವಿಧಾನಸಭೆ ಅಧಿವೇಶನದಲ್ಲೂ ಎಂಎಸ್‌ಜಿಪಿ ಘಟಕದ ಸಮಸ್ಯೆ ಪ್ರಸ್ತಾಪಿಸಿದ್ದ‌ ಶಾಸಕ ಧೀರಜ್ ಮುನಿರಾಜು ಅವರು, ಸುಮಾರು 25 ಕಿ.ಮೀ ದೂರದಲ್ಲಿರುವ ಗರುಡಾಚಲ ನದಿಗೆ ನಿರ್ಮಿಸಲಾಗಿರುವ 2,200 ಎಕರೆ ವಿಸ್ತಿರ್ಣದ ಮಾವತ್ತೂರು ಕೆರೆಗೂ ಘಟಕದ ತ್ಯಾಜ್ಯ ನೀರು ಸೇರ್ಪಡೆಯಾಗುತ್ತಿದೆ ಎಂದು ಹೇಳಿದ್ದರು. 

ಅಂತರ್ಜಲ ಕಲುಷಿತ ಅಳೆಯಲಾಗದು

ಭೂ ಮೇಲ್ಭಾಗದಲ್ಲಿ ನದಿ, ತೊರೆಗಳಿರುವಂತೆ ಭೂಮಿಯ ಆಳದಲ್ಲಿ ಅಂತರ್ಜಲದ ತೊರೆಗಳಿವೆ. ಆದರೆ, ಅವುಗಳ ವ್ಯಾಪ್ತಿ, ಆಳ ಎಷ್ಟಿದೆ ಎಂಬುದು ಗುರುತಿಸಲು ಅಸಾಧ್ಯ. ಈ ಮೊದಲು 300 ಅಡಿ ಆಳದಲ್ಲಿ ನೀರು ಕಲುಷಿತವಾದರೆ ಅದೇ ಸಮಾನಾಂತರ ತೊರೆಗಳಲ್ಲಿ ಮಾತ್ರ ವ್ಯಾಪಿಸುತ್ತಿತ್ತು. ಆದರೆ, ಈಗ ಸಾವಿರ ಅಥವಾ ಅದಕ್ಕಿಂತ ಹೆಚ್ಚು ಆಳದವರೆಗೆ ಕೊಳವೆಬಾವಿ ಕೊರೆಸುತ್ತಿರುವುದರಿಂದ ಎಲ್ಲಾ ನೀರಿನ ಸೆಲೆಗಳು ಒಂದೇ ಆಗಿಬಿಟ್ಟಿವೆ. ಇದರಿಂದ ಅಂತರ್ಜಲದ ತಳಮಟ್ಟವನ್ನೂ ರಾಸಾಯನಿಕಗಳು ತಲುಪುತ್ತಿವೆ ಎಂದು ಅನಿಸುತ್ತಿದೆ. ಇದು ತ್ವರಿತವಾದ ಪರಿಣಾಮ ಉಂಟು ಮಾಡದಿದ್ದರೂ ದೀರ್ಘಕಾಲದಲ್ಲಿ ಹೆಚ್ಚು ಹಾನಿ ಉಂಟು ಮಾಡುವ ಅಪಾಯವಿದೆ ಎಂದು ಪರಿಸರವಾದಿ ಚಿದಾನಂದ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಕಸ, ನೀರು, ಗಾಳಿ ಕಲುಷಿತವಾಗುತ್ತಿದ್ದರೂ ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ಈ ಹಿಂದೆ ಕೆ.ಸಿ.ವ್ಯಾಲಿ ನೀರಿನಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸರ್ಕಾರ ಹೇಳುತ್ತಿತ್ತು. ಈಗ ಅದೇ ಸರ್ಕಾರ ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಕೆರೆಗಳ‌ ಮುಂದೆ 'ಈ ನೀರು ಬಳಸಲು ಯೋಗ್ಯವಲ್ಲ' ಎಂದು ಫಲಕಗಳನ್ನು ಅಳವಡಿಸಿದೆ. ಎಂಎಸ್ ಜಿಪಿ ಘಟಕದಲ್ಲಿ ಕಸ ಹಾಕುವಾಗಲೂ ಇದೇ ರೀತಿ ಏನೂ ಆಗುವುದಿಲ್ಲ ಎಂದು ಹೇಳಿತ್ತು. ಈಗ ಎಂಎಸ್ ಜಿಪಿ ಘಟಕದ ಸುತ್ತಲಿನ ಗ್ರಾಮಗಳಲ್ಲಿ ಗಾಳಿಯೂ ವಿಷವಾಗುತ್ತಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಕಸ ಸುರಿದಿದೆಯೋ ಅಂತಹ ಕಡೆಗಳಲ್ಲಿ ಸರ್ಕಾರದ ಯೋಜನೆಗಳು ಫೇಲ್ ಆಗಿವೆ. ಎಲ್ಲಾದರೂ ಒಂದು ಕಡೆ ಮಾದರಿ ಕಸ ವಿಲೇವಾರಿ ಘಟಕ ಇದೆಯಾ ಎಂದು ಪ್ರಶ್ನಿಸಿದರು.

ಬೆಂಗಳೂರಿನ ತ್ಯಾಜ್ಯವನ್ನು ತಂದು ಸುರಿದು, ಸಮಸ್ಯೆ ಸೃಷ್ಟಿಸುವುದಷ್ಟೇ ಈಗ ನಡೆಯುತ್ತಿದೆ. ತ್ಯಾಜ್ಯ ವಿಲೇವಾರಿ ವರವಾಗುವ ಬದಲು ಶಾಪವಾಗಿದೆ. ಕಸದಲ್ಲಿ ಒಂಭತ್ತು ರೀತಿಯ ಗೊಬ್ಬರ ತಯಾರಿಸಬಹುದಿತ್ತು. ಆದರೆ, ಅದು ಎಲ್ಲಿಯೂ ಆಗಿಲ್ಲ. ಕಸವನ್ನು ಸುಡಲಾಗುತ್ತಿದೆ. ಇದರಿಂದ ವಾಯುಮಾಲಿನ್ಯವಾಗುತ್ತಿದೆ. ಇದರಿಂದ ಜನರ ಬದುಕನ್ನೇ ಹಾಳು ಮಾಡುವ ಕೆಲಸವನ್ನು ಸರ್ಕಾರ ನಾಜೂಕಾಗಿ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಎಂಎಸ್ ಜಿಪಿ ಘಟಕಕ್ಕೆ ಕೈಗಾರಿಕಾ ತ್ಯಾಜ್ಯ ಸಂಸ್ಕರಣೆ ಬಳಿಕ ಉಳಿಯುವ ಘನತ್ಯಾಜ್ಯವನ್ನು ತಂದು ಸುರಿಯಲಾಗುತ್ತಿತ್ತು. ಇದನ್ನು ಜನಸಾಮಾನ್ಯರೇ ಹಿಡಿದು ದೂರು ಕೊಟ್ಟಿದ್ದರು. ಆಗ ನ್ಯಾಯಾಲಯ ದಂಡವನ್ನೂ ವಿಧಿಸಿತ್ತು. ಈ ರೀತಿ ಯಾವ ವಾಹನದಲ್ಲಿ ಎಂತಹ ತ್ಯಾಜ್ಯ ತಂದು ಸುರಿಯುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಇದ್ಯಾವುದನ್ನೂ ಗಮನಿಸುವುದಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಆಡಳಿತ ಯಂತ್ರವು 'ಎಲ್ಲವೂ ಸರಿಯಿದೆ' ಎಂದು ಹೇಳುತ್ತವೆ. ಆದರೆ, ಜನರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ ಎಂದು ಕಿಡಿಕಾರಿದರು.

ನಮ್ಮದಲ್ಲದ ತ್ಯಾಜ್ಯ ನಮಲ್ಲೇಕೆ?

ಬೆಂಗಳೂರಿನ ತ್ಯಾಜ್ಯವನ್ನು ದೊಡ್ಡಬಳ್ಳಾಪುರ ಹಾಗೂ ಬೇರೆ ಬೇರೆ ಕಡೆಗೆ ಸಾಗಿಸಲಾಗುತ್ತಿದೆ. ನಮ್ಮದಲ್ಲದ ತ್ಯಾಜ್ಯವನ್ನು ನಮ್ಮಲ್ಲೇಕೆ ಸುರಿಯಬೇಕು. ಬೆಂಗಳೂರಿನವರ ತ್ಯಾಜ್ಯದ ಸಮಸ್ಯೆಯನ್ನು ಬೆಂಗಳೂರಿನಲ್ಲೇ ಬಗೆಹರಿಸಿಕೊಳ್ಳಲಿ.  ವಾರ್ಡ್ ವಾರು ಕಸ ವಿಂಗಡಣೆ ಸರಿಯಾಗಿ ನಡೆಸಿದ್ದರೆ ಇಂತಹ ಘಟಕಗಳ ಅನಿವಾರ್ಯತೆ ಬರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಈಗ ದೊಡ್ಡಬಳ್ಳಾಪುರದಲ್ಲಿ ಮತ್ತೊಂದು ಕಸ ವಿಲೇವಾರಿ ಘಟಕ ಮಾಡುವ ಬಗ್ಗೆ ಸರ್ಕಾರ ಹುನ್ನಾರ ನಡೆಸುತ್ತಿದೆ. ಹೊಸ ಮಾದರಿ ಎಂದೆಲ್ಲಾ ಹೇಳುತ್ತಿದೆ. ಇಲ್ಲಿಯವರೆಗಿನ ಕಸ ವಿಲೇವಾರಿ ಮಾದರಿಗಳು ಏನಾದವು, ಯಾವುದಾದರೂ ಯಶಸ್ವಿ ಆಗಿದೆಯಾ ಎಂದು ಪ್ರಶ್ನಿಸಿದ ಅವರು, ಈಗ ಹೊಸ ಮಾದರಿ ತಂದು ಅದಕ್ಕಾಗಿ ನಮ್ಮ ಪಲವತ್ತಾದ‌ ಭೂಮಿ, ಪರಿಸರವನ್ನು ಹಾಳು ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. 

ಅನುದಾನ ನೀಡಿ  ಕಣ್ಣೊರೆಸುವ ತಂತ್ರ

ದಶಕದ ಹಿಂದೆ ಆರಂಭವಾದ ಎಂಎಸ್‌ಜಿಪಿ ಘಟಕದ ವಿರುದ್ಧ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಆರಂಭದಲ್ಲಿ ಹೋರಾಟ ಮಾಡುವಾಗ ಎಂಎಸ್‌ಜಿಪಿ ಘಟಕದಿಂದ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಗೆ ಸ್ಥಳೀಯ ಶಾಸಕರು ಸುಮಾರು 20 ಲಕ್ಷ ರೂಪಾಯಿ ಅನುದಾನ ಕೊಡಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಅನುದಾನ ತಿರಸ್ಕರಿಸಿದ್ದ ಗ್ರಾಮ ಪಂಚಾಯಿತಿ, ನಮಗೆ ಯಾವುದೇ ಅನುದಾನ ಬೇಕಿಲ್ಲ. ಘಟಕವನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿತ್ತು. ಇದೇ ರೀತಿ ಸ್ಥಳೀಯರು ಹೋರಾಟಕ್ಕೆ ಸಿದ್ಧವಾಗುವ ಸಂದರ್ಭದಲ್ಲಿ ಒಂದಿಷ್ಟು ಹಣ ನೀಡಿ ಹೋರಾಟ ಹತ್ತಿಕ್ಕುವ ಷಡ್ಯಂತ್ರ‌ ನಡೆಸುತ್ತಿದೆ‌ ಎಂಬ ಆರೋಪಗಳು ಕೇಳಿಬಂದಿವೆ.

ತ್ಯಾಜ್ಯ ನೀರಿನಿಂದ ಘಟಕಕ್ಕೆ ಸಮೀಪವಿರುವ ಗ್ರಾಮಸ್ಥರ ಪಾಡು ಹೇಳ ತೀರದಾಗಿದೆ. 

'ನಮ್ಮ ಮನೆ ಹಳ್ಳದ ಪಕ್ಕದಲ್ಲೇ ಇದೆ. ಮಳೆ ಬಂದಾಗ ಮನೆಯಲ್ಲಿ ಇರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ತಣ್ಣೀರನಹಳ್ಳಿ ರೈತ ರಂಗಪ್ಪ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು. 

ಘಟಕಕ್ಕೆ ಮಾತ್ರ ಉತ್ತಮ ರಸ್ತೆ ಸಂಪರ್ಕ 

ಘಟಕದ ಸುತ್ತಮತ್ತಲಿನ ಸುಮಾರು ಹತ್ತಕ್ಕೂ ಹೆಚ್ಚು ಗ್ರಾಮಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಆದರೆ, ಎಂಎಸ್‌ಜಿಪಿ ಘಟಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾತ್ರ ಹೆದ್ದಾರಿಗೂ ಕಡಿಮೆಯಿಲ್ಲದಂತೆ ನಿರ್ಮಿಸಲಾಗಿದೆ. ಈ ರಸ್ತೆಯುದ್ದಕ್ಕೂ ತ್ಯಾಜ್ಯವನ್ನು ಹೊತ್ತು ತರುವ ಲಾರಿಗಳಿಂದ ನೀರು ಸುರಿದು ಸಾರ್ವಜನಿಕರು ಓಡಾಡಲು ಸಾಧ್ಯವಾಗದಂತಾಗಿದೆ.  ನಮ್ಮ ಗ್ರಾಮದ ರಸ್ತೆಗಳು ಹಾಳಾಗಿದ್ದರೂ ಜನಪ್ರತಿನಿಧಿಗಳು ಮಾತ್ರ ಇತ್ತ ಹೆಜ್ಜೆ ಇಟ್ಟಿಲ್ಲ ಎಂದು ತಣ್ಣೀರನಹಳ್ಳಿ ಯುವಕ ಲೋಕೇಶ್‌ ಟಿ.ಬಿ. ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು. 

ಜನೋಪಯೋಗಿ ಕಾರ್ಯಗಳಿಲ್ಲ

ಯಾವುದೇ ಕಂಪನಿಗಳು ತಮ್ಮ ಲಾಭಾಂಶದ ಒಂದಿಷ್ಟು ಪಾಲನ್ನು ಸಾರ್ವಜನಿಕ ಕಾರ್ಯಗಳಿಗೆ ವಿನಿಯೋಗಿಸಬೇಕೆಂಬ ನಿಯಮವಿದೆ. ಆದರೆ ಎಂಎಸ್‌ಜಿಪಿ ಘಟಕದಿಂದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಯಾವುದೇ ಆರೋಗ್ಯ ಕಾರ್ಯಗಳು, ರಸ್ತೆ ನಿರ್ಮಾಣ, ಶಾಲಾ ಕಟ್ಟಡಗಳ ನಿರ್ಮಾಣ, ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಸೇರಿದಂತೆ  ಯಾವುದೇ ಜನೋಪಯೋಗಿ ಕಾರ್ಯಗಳು ನಡೆದಿಲ್ಲ ಎಂದು ಸ್ಥಳೀಯ ಜನಪ್ರತಿನಿಧಿಗಳು ಆರೋಪಿಸಿದ್ದಾರೆ.

ಎಂಎಸ್‌ಜಿಪಿ ಘಟಕಕ್ಕೆ ಮಾತ್ರ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ, ಸುತ್ತಮುತ್ತಲಿನ ಗ್ರಾಮಗಳ ರಸ್ತೆಗಳಲ್ಲಿ ವಾಹನಗಳು ಸಂಚರಿಸಲು ಕಷ್ಟಸಾಧ್ಯವಾಗಿದೆ. ಜನರಿಗೆ ಇಷ್ಟೆಲ್ಲಾ‌ ಸಮಸ್ಯೆ  ತಂದೊಡ್ಡಿರುವ ಎಂಎಸ್ ಜಿಪಿ ಘಟಕದಿಂದ ಯಾವುದೇ ಅನುಕೂಲಗಳಿಲ್ಲ ಎಂದಾದರೆ ನಮ್ಮ ಭಾಗದಲ್ಲಿ ಈ ಘಟಕ ಇರುವುದೇ ಬೇಡ ಎಂದು ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಭೀಮರಾಜು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

Tags:    

Similar News