IPL 2025, RCB vs GT| ಐಪಿಎಲ್ ನೋಡಲು ಹೋಗುವವರಿಗೆ ವಿಶೇಷ ಮನವಿ ಮಾಡಿದ ಬೆಂಗಳೂರು ಸಂಚಾರ ಪೊಲೀಸರು
ಚಿನ್ನಸ್ವಾಮಿ ಸ್ಟೇಡಿಯಮ್ ಸುತ್ತಮುತ್ತ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಿದ್ದು, ಕೆಲವೊಂದು ರಸ್ತೆಗಳಲ್ಲಿ ಸಂಚಾರ ನಿರ್ಬಂಧವನ್ನೂ ಹೇರಲಾಗಿದೆ. ಕ್ರಿಕೆಟ್ ಪ್ರೇಮಿಗಳು ಮೊದಲೇ ಯೋಜನೆ ಹಾಕಿಕೊಳ್ಳುವುದು ಉತ್ತಮ.;
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಟೂರ್ನಿಯ ಪ್ರಸಕ್ತ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗುಜರಾತ್ ಟೈಟನ್ಸ್ ವಿರುದ್ಧ ಬುಧವಾರ ಸೆಣಸಾಡಲು ತವರು ಬೆಂಗಳೂರಿಗೆ ಆಗಮಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಈ ಪಂದ್ಯ ನಡೆಯಲಿದೆ.
ಪಂದ್ಯ ನೋಡಲು ಸಾವಿರಾರು ಮಂದಿ ಏಕಾಏಕಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸಂಚಾರಕ್ಕೆ ತೊಂದರೆಯಾಗದಂತೆ ಬೆಂಗಳೂರು ಸಂಚಾರ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಈ ನಡುವೆ ಅವರು ವಿಶೇಷ ಮನವಿಯೊಂದನ್ನು ಮಾಡಿದ್ದು, ಆದಷ್ಟು ಬಸ್, ಮೆಟ್ರೊದಂಥ ಸಾರ್ವಜನಿಕ ಸಾರಿಗೆ ಹೆಚ್ಚು ಬಳಸಿ ಎಂದಿದ್ದಾರೆ.
ಸಾರಿಗೆ ಸಂಸ್ಥೆಗಳಾದ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಸೇವೆಯನ್ನು ವಿಸ್ತರಿಸಿದೆ. ಮೆಟ್ರೊ ತಡ ರಾತ್ರಿ 12.30ರ ವರೆಗೆ ಸಂಚರಿಸಿದರೆ, ಬಿಬಿಟಿಸಿ ಹೆಚ್ಚುವರಿ ಬಸ್ಗಳನ್ನು ಓಡಿಸಲಿದೆ.
ಮೆಟ್ರೋ ವಿವರ
ಬೆಂಗಳೂರಿನಲ್ಲಿ ಪಂದ್ಯ ಆಯೋಜನೆಗೊಂಡಿರುವ ದಿನಾಂಕಗಳಾದ ಏಪ್ರಿಲ್ 02, 10, 18, ಹಾಗೂ 24ನೇ ಮತ್ತು ಮೇ 03, 13 ಹಾಗೂ ೧೭ರಂದು ಮೆಟ್ರೊ ತನ್ನ ಎಲ್ಲಾ ನಾಲ್ಕು ಟರ್ಮಿನಲ್ಗಳಲ್ಲಿ ಅಂದರೆ ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ ರೇಷ್ಮೆ ಸಂಸ್ಥೆ ಮತ್ತು ಮಾದವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆಯನ್ನು ರಾತ್ರಿ 12.30ರ ವರೆಗೆ ವಿಸ್ತರಿಸಿದೆ. ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 01.15ಕ್ಕೆ ಹೊರಡಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವಿಶೇಷ ಬಸ್ ಸೇವೆ ಒದಗಿಸುವುದಾಗಿ ಹೇಳಿದ್ದು, ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಪಂದ್ಯಗಳ ದಿನ ಕೂಡ ಕಾರ್ಯಚರಣೆ ನಡೆಸಲಿವೆ.
ಎಲ್ಲಿಂದ ಎಲ್ಲಿಗೆ ಸ್ಪೆಷಲ್ ಬಸ್?
ಎಂ ಚಿನ್ನಸ್ವಾಮಿ ಕ್ರೀಡಾಂಗಣ – ಕಾಡುಗೋಡಿಬಸ್ ನಿಲ್ದಾಣ (ಹೆಚ್.ಎ.ಎಲ್‌ರಸ್ತೆ)
ಚಿನ್ನಸ್ವಾಮಿ ಕ್ರೀಡಾಂಗಣ (ಜಿ-2) – ಸರ್ಜಾಪುರ
ಚಿನ್ನಸ್ವಾಮಿ ಕ್ರೀಡಾಂಗಣ (ಜಿ-3) – ಎಲೆಕ್ಟ್ರಾನಿಕ್ ಸಿಟಿ (ಹೊಸೂರುರಸ್ತೆ)
ಚಿನ್ನಸ್ವಾಮಿ ಕ್ರೀಡಾಂಗಣ (ಜಿ-4) – ಬನ್ನೇರುಘಟ್ಟ ಮೃಗಾಲಯ.
ಚಿನ್ನಸ್ವಾಮಿ ಕ್ರೀಡಾಂಗಣ (ಜಿ-7) – ಜನಪ್ರಿಯ ಟೌನ್‌ಷಿಪ್ (ಮಾಗಡಿ ರಸ್ತೆ)
ಚಿನ್ನಸ್ವಾಮಿ ಕ್ರೀಡಾಂಗಣ (ಜಿ-10) – ಆರ್.ಕೆ. ಹೆಗಡೆ ನಗರ ಯಲಹಂಕ (ನಾಗವಾರ, ಟ್ಯಾನರಿ ರಸ್ತೆ)
ಚಿನ್ನಸ್ವಾಮಿ ಕ್ರೀಡಾಂಗಣ (317 ಜಿ) – ಹೊಸಕೋಟೆ.
ಚಿನ್ನಸ್ವಾಮಿ ಕ್ರೀಡಾಂಗಣ (13) – ಬನಶಂಕರಿ.
ಬೆಂಗಳೂರಿನ ಐಪಿಎಲ್ ಮ್ಯಾಚ್ ದಿನಾಂಕಗಳು
ಏಪ್ರಿಲ್ 10, 18, 24 ಮತ್ತು ಮೇ 3, 13 ಹಾಗೂ 17 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿದೆ. ಬುಧವಾರ ಗುಜರಾತ್ ಟೈಟನ್ಸ್ ಅನ್ನು ಆರ್ಸಿಬಿ ಎದುರಿಸಲಿದೆ. ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದೆ.