Rain Damages | ನಿರ್ಮಾಣ ಹಂತದ ಕಟ್ಟಡ ಕುಸಿತ; ಮೂವರು ಸಾವು, ‌ಇನ್ನಷ್ಟು ಕಾರ್ಮಿಕರು ಸಿಲುಕಿರುವ ಶಂಕೆ

ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಕಮ್ಮನಹಳ್ಳಿ ಬಳಿಯ ಬಾಬುಸಾ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು, ಕಟ್ಟಡದ ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರಬಹುದು ಎಂದು ಶಂಕಿಸಲಾಗಿದೆ

Update: 2024-10-22 12:23 GMT
ಮಹಾಮಳೆಗೆ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ.

ಬೆಂಗಳೂರಿನಲ್ಲಿ ಬಿಟ್ಟೂಬಿಡದೆ ಮಳೆ ಸುರಿಯುತ್ತಿದ್ದು, ಧಾರಾಕಾರ ಮಳೆಗೆ ಕಮ್ಮನಹಳ್ಳಿ ಬಳಿಯ ಬಾಬುಸಾಪಾಳ್ಯದಲ್ಲಿ (ಬಾಬುಸಾಹೇಬ್‌ ಪಾಳ್ಯ) ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು, ಅವಶೇಷಗಳಡಿ ಸಿಲುಕಿದ್ದ ಮೂವರು ಕಾರ್ಮಿಕರ ಶವ ಹೊರತೆಗೆದಿದ್ದಾರೆ. ಇನ್ನು ಮೂವರನ್ನು ರಕ್ಷಣೆ ಮಾಡಿದ್ದು, ಇನ್ನುಳಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಹೆಣ್ಣೂರು ಸಮೀಪ‌ ಇರುವ ಬಾಬುಸಾಪಾಳ್ಯದಲ್ಲಿ ಈ ಘಟನೆ ನಡೆದಿದೆ. ಕಟ್ಟಡದ ಕಾಮಗಾರಿಯ ವೇಳೆಗೆ 16 ಜನಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕಟ್ಟಡ ಕುಸಿಯುತ್ತಿದ್ದಂತೆಯೇ ಅವಶೇಷಗಳಡಿಯಲ್ಲಿ ಸಿಲುಕಿದ್ದ ಕಾರ್ಮಿಕನೋರ್ವ ರಕ್ತ ಸಿಕ್ತ ಸ್ಥಿತಿಯಲ್ಲಿ ಆಚೆ ಬಂದಿದ್ದು, ರಕ್ತದ ಮಡುವಿನಲ್ಲೇ ಅಳುತ್ತ ನಮ್ಮವರು ಒಳಗೆ ಸಿಲುಕಿದ್ದಾರೆಂದು ಎಂದು ಮಾಹಿತಿ ನೀಡಿದ್ದಾನೆ. ಒಳಗೆ ಇನ್ನು ಕಾರ್ಮಿಕರು ಇದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ರಕ್ಷಣಾ ಕಾರ್ಯಚರಣೆ ಚುರುಕುಗೊಂಡಿದೆ.

 ಸ್ಥಳಕ್ಕೆ ರೆಸ್ಕ್ಯೂ ಟೀಂ ಭೇಟಿ ನೀಡಿ ಅವಶೇಷಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಕಾರ್ಮಿಕರು ಈ ಬಿಲ್ಡಿಂಗ್‌ ನಿರ್ಮಾಣದಲ್ಲಿ ತೊಡಗಿದ್ದರು. ಘಟನೆ ಬೆನ್ನಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ನಾಲ್ಕು ಸ್ಟೇಷನ್‌ಗಳಿಂದ ರಕ್ಷಣಾ ಕಾರ್ಯಕ್ಕೆ ಸಿಬ್ಬಂದಿಗಳನ್ನು ರವಾನಿಸಲಾಗಿದೆ.

ಮಂಗಳವಾರ ಮಧ್ಯಾಹ್ನದಿಂದಲೇ ಬೆಂಗಳೂರಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಲವು ಬಡಾವಣೆಗಳು ಜಲಾವೃತವಾಗಿವೆ. ರಸ್ತೆ, ಕಳೆಸೇತುವೆಗಳಂತೂ ಹೊಳೆಗಳಂತಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯವಸ್ತಗೊಂಡಿದೆ. ಹಲವು ಕಡೆ ಮರಗಳು ಧರೆಗುರುಳಿವೆ. ಸಾಕಷ್ಟು ಮನೆಗಳಿಗೆ ಹಾನಿಯಾಗಿದ್ದು, ಅಲ್ಲಲ್ಲಿ ವಾಹನಗಳಿಗೂ ಗಾಳಿ ಮಳೆಯಿಂದ ಹಾನಿಯಾದ ವರದಿಗಳಿವೆ.

Tags:    

Similar News