Bangalore Rain | ಬಿಬಿಎಂಪಿ ವಾರ್ ರೂಂನಲ್ಲಿ ಕುಳಿತು ಮಳೆ ಅನಾಹುತದ ಮಾಹಿತಿ ಪಡೆದ ಸಿಎಂ, ಡಿಸಿಎಂ
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ "ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳು ಹೊಸವೇನಲ್ಲ. ಮಳೆ ಸಂಬಂಧಿತ ಅನಾಹುತಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.;
ಬೆಂಗಳೂರಿನಲ್ಲಿ ಭಾರೀ ಮಳೆಗೆ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಅನಾಹುತಕ್ಕೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೊದಲ ಬಲಿಯಾಗಿದೆ. ಇಲ್ಲಿನ 32ವರ್ಷದ ಶಶಿಕಲಾ ಎಂಬುವರು ಗೋಡೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಾರತ್ತಹಳ್ಳಿ, ವೈಟ್‌ಫೀಲ್ಡ್ ಸೇರಿದಂತೆ ಹಲವೆಡೆ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ.
ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಸುರಿದ ಧಾರಾಕಾರ ಮಳೆಯಿಂದ ಹಲವು ಪ್ರದೇಶಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರ ದುಸ್ತರವಾಯಿತು. ಸೋಮವಾರ ಬೆಳಿಗ್ಗೆ ಕಚೇರಿಗಳಿಗೆ ಹೋಗಲು ಜನರು ಪರದಾಡಬೇಕಾಯಿತು.
ಸಿಲ್ಕ್ ಬೋರ್ಡ್, ಎಚ್‌ಆರ್‌ಬಿಆರ್ ಲೇಔಟ್ ಮತ್ತು ಬೊಮ್ಮನಹಳ್ಳಿ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿಯಿಡೀ ಮಳೆಯಿಂದಾಗಿ ಸ್ಥಳೀಯರು ಜಾಗರಣೆ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ರಸ್ತೆಗಳು ಕೆರೆಗಳಂತಾದರೂ ಬಿಬಿಎಂಪಿ ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು ಹೆಣ್ಣೂರು-ಬಾಗಲೂರು ರಸ್ತೆ ಮಳೆ ನೀರಿನಿಂದ ಜಲಾವೃತವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಪರ್ಯಾಯ ಮಾರ್ಗ ಸೂಚಿಸಲಾಯಿತು. ಆದರೂ, ವಾಹನ ಸವಾರರು ಮಳೆ ನೀರಿನಲ್ಲೇ ಸಾಗುತ್ತಿದ್ದ ದೃಶ್ಯಗಳು ಕಂಡು ಬಂದವು.
ರಾಜ್ಯದ ಹಲವೆಡೆ ಧಾರಾಕಾರ ಮಳೆ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಕೊಡಗು, ಬೆಳಗಾವಿ, ಬೀದರ್, ರಾಯಚೂರು, ಯಾದಗಿರಿ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರಭಸದ ಮಳೆ ಸಾಕಷ್ಟು ಹಾನಿ ತಂದಿದೆ.
ಬೆಂಗಳೂರಿನ ಹೊರಮಾವು ಸಮೀಪದ ಸಾಯಿ ಲೇಔಟ್ ಮಳೆಯಿಂದ ಹೆಚ್ಚು ಹಾನಿಗೊಳಗಾಗಿದೆ. ಬಡಾವಣೆಯಲ್ಲಿ ಎರಡು ದಿನಗಳಿಂದ ಮಳೆ ನೀರು ತುಂಬಿದ್ದು, ನಿವಾಸಿಗಳು ಪರದಾಡುತ್ತಿದ್ದಾರೆ. ಮಳೆ ಹಾನಿ ಪ್ರದೇಶಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರು ಟ್ರ್ಯಾಕ್ಟರ್‌ನಲ್ಲಿ ಭೇಟಿ ನೀಡಿದ ಪರಿಶೀಲಿಸಿದರು. ಆಗ ಸ್ಥಳೀಯರು ಮುಖ್ಯ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದೇ ಅವಾಂತರಕ್ಕೆ ಕಾರಣ. ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದರೂ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ ಎಂದು ಆರೋಪಿಸಿದರು.
ಟ್ಯಾನರಿ ರಸ್ತೆಯಲ್ಲಿರುವ ಎನ್‌ಸಿ ಕಾಲೋನಿ ಮನೆಗಳಿಗೂ ನೀರು ನುಗ್ಗಿದೆ. ಆದರೆ, ಇದರಿಂದ ಯಾವುದೇ ಹಾನಿಯಾಗಿಲ್ಲ. ಜಯನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮರವೊಂದು ಬುಡಮೇಲಾಗಿ ಕಾರು ಮತ್ತು ಜೀಪ್ ಮೇಲೆ ಬಿದ್ದು ಹಾನಿಯಾಗಿದೆ. ಕೆಲವು ರಸ್ತೆಗಳು ನೀರಿನಿಂದ ತುಂಬಿ ತುಳುಕುತ್ತಿರುವುದರಿಂದ ರಸ್ತೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
23 ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ
ಬೆಂಗಳೂರು ಸೇರಿದಂತೆ ಕರ್ನಾಟಕದ 23 ಜಿಲ್ಲೆಗಳಲ್ಲಿ ಗುರುವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ 'ಯೆಲ್ಲೋ ಅಲರ್ಟ್' ನೀಡಿದೆ. ಗುಡುಗು, ಮಿಂಚು ಮತ್ತು ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ.
ಮಳೆ ಅನಾಹುತ ಹೊಸದೇನಲ್ಲ
ಬೆಂಗಳೂರಿನಲ್ಲಿ ಮಳೆ ಅನಾಹುತದ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು "ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳು ಹೊಸವೇನಲ್ಲ. ಮಳೆ ಸಂಬಂಧಿತ ಅನಾಹುತಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಧಾರಾಕಾರ ಮಳೆಯಿಂದ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರೊಂದಿಗೆ ಬಿಬಿಎಂಪಿ ವಾರ್ ರೂಮಲ್ಲಿ ಕುಳಿತು ಮಾಹಿತಿ ಪಡೆದರು. ಅಲ್ಲದೇ, ಪರಿಹಾರೋಪಾಯಗಳ ಬಗ್ಗೆ ಸಲಹೆ, ಸೂಚನೆ ನೀಡಿದರು.
ಸಚಿವ ಕೆ ಜೆ ಜಾರ್ಜ್, ಶಾಸಕ ಹ್ಯಾರಿಸ್, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜ್, ನಜೀರ್ ಅಹ್ಮದ್, ಸೀತಾರಾಮ್, ಸುಧಾಮದಾಸ್ ಮತ್ತಿತರರು ಹಾಜರಿದ್ದರು.
ಬೆಂಗಳೂರಿನ ಹೆಸರನ್ನು ಪ್ರವಾಹದಲ್ಲಿ ಮುಳುಗಿಸಿದ ಸರ್ಕಾರ ಎಂದು ಸಂಸದ ಬಸವರಾಜ ಬೊಮ್ಮಾಯಿ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ. ಬೆಂಗಳೂರಿಂದ ಅತ್ಯಧಿಕ ತೆರಿಗೆ ಪಡೆಯುವ ಸರ್ಕಾರ ಕಳೆದ ಎರಡು ವರ್ಷದಿಂದ ನಮ್ಮ ಅವಧಿಯಲ್ಲಿ ನೀಡಿದ್ದ 2000 ಕೋಟಿ ರೂ. ಮಳೆ ಪರಿಹಾರ ಬಿಡುಗಡೆ ಮಾಡಿಲ್ಲ. ಸಿಲಿಕಾನ್ ಸಿಟಿ, ಶ್ರಿಮಂತ ಸಿಟಿ ಬೆಂಗಳೂರನ್ನು ಬಡ ಸಿಟಿ ಬೆಂಗಳೂರನ್ನಾಗಿ ಮಾಡಿದೆ. ಇದು ಅತ್ಯಂತ ಖಂಡನೀಯ, ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಅಲ್ಲಲ್ಲಿ ಮರಗಳು ಧರೆಗೆ ಉರುಳಿದ್ದು, ಸಂಚಾರ ಸಮಸ್ಯೆ ತೀವ್ರಗೊಂಡಿದೆ. ತುರ್ತು ಸಂದರ್ಭಗಳಲ್ಲಿ ಜನರು ಬಿಬಿಎಂಪಿ ಸಹಾಯವಾಣಿ ಸಂಖ್ಯೆಗಳಿಗೆ ದೂರು ನೀಡಬಹುದು. ಸಹಾಯವಾಣಿ ಸಂಖ್ಯೆಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ.
ಬಿಬಿಎಂಪಿ ಹೆಲ್ಪ್‌ಲೈನ್ ಸಂಖ್ಯೆ- 1533
ಬಿಬಿಎಂಪಿ ಕೇಂದ್ರ ಕಚೇರಿ- 080-22660000, 080-22975595, 080-22221188
ಕೇಂದ್ರ ಕಚೇರಿ ವಾಟ್ಸಾಪ್ ಸಂಖ್ಯೆ- 9480685700
ಪೂರ್ವ ವಲಯ- 9480685702, 080-22975803
ಪಶ್ಚಿಮ ವಲಯ- 9480685703, 080-23561692, 080-23463366
ದಕ್ಷಿಣ ವಲಯ- 9480685704, 080-26566362, 080-22975703
ಮಹದೇವಪುರ- 9480685706, 080-28512300
ಬೊಮ್ಮನಹಳ್ಳಿ ವಲಯ- 9480685707, 080-25735642, 080-25732447
ಆರ್.ಆರ್.ನಗರ- 9480685708, 080-28601851
ದಾಸರಹಳ್ಳಿ- 9480685709, 080-28394909 ಸಂಪರ್ಕಿಸಬಹುದು.
ಬಳ್ಳಾರಿಯಲ್ಲಿ ರಾಜ್ಯ ಸರ್ಕಾರದ ಎರಡು ವರ್ಷದ ಸಮರ್ಪಣಾ ಸಂಕಲ್ಪ ಸಮಾವೇಶದ ಸಿದ್ಧತೆಯಲ್ಲಿ ತೊಡಗಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿಢೀರ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಭಾರೀ ಮಳೆ ಅವಾಂತರ ಸೃಷ್ಟಿಸಿದ್ದರೂ ಉಸ್ತುವಾರಿ ಸಚಿವರು ಇತ್ತ ಮುಖ ಮಾಡಿದಿರುವ ಬಗ್ಗೆ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲೂ ಆಕ್ರೋಶ ಕೇಳಿ ಬಂದಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಮಾಹಿತಿ ಪಡೆಯುತ್ತಿದ್ದಂತೆ ದಿಢೀರ್ ಬೆಂಗಳೂರಿನಲ್ಲಿ ಪ್ರಯಾಣ ಆರಂಭಿಸಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಿರುಸಿನ ಮಳೆಗೆ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಅಂತಹ ಪ್ರದೇಶಗಳಿಗೆ ನಾನು ಮತ್ತು ಮುಖ್ಯಮಂತ್ರಿ ಅವರು ಭೇಟಿಯಾಗಿ ಪರಿಶೀಲನೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತಗೊಂಡಿದ್ದು ಆಗ್ನೆಯ ಬಂಗಾಳಕೊಲ್ಲಿ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ 23 ಜಿಲ್ಲೆಗಳಲ್ಲಿ ಶುಕ್ರವಾರದವರೆಗೂ (ಮೇ23) ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಹಾಸನ, ಕೊಡಗು, ಬೆಳಗಾವಿ, ಬೀದರ್, ರಾಯಚೂರು, ಯಾದಗಿರಿ, ದಾವಣಗೆರೆ, ಮತ್ತು ಚಿತ್ರದುರ್ಗದಲ್ಲಿ ಮಳೆಯಾಗಲಿದೆ. ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ಬೆಂಗಳೂರು ಉಸ್ತುವಾರಿ ಸಚಿವರು ಭೂ ವ್ಯವಹಾರಗಳಲ್ಲಿ ತೊಡಗಿದ್ದಾರೆ. ಜನಸಾಮಾನ್ಯರು ಕೆಲಸ ಕಾರ್ಯಗಳಿಗೆ ತೆರಳಲು ಪ್ರವಾಹದ ನೀರಿನಲ್ಲಿ ಈಜಿಕೊಂಡು ತಲುಪುವ ಅನಿವಾರ್ಯ ಸ್ಥಿತಿ ಬಂದಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಬ್ರ್ಯಾಂಡ್ ಬೆಂಗಳೂರು'? ಈಗ ಬೀಚ್ ಬೆಂಗಳೂರಾಗಿದೆ. ಹೊಣೆಗಾರಿಕೆ ಮರೆತಿರುವ ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಅಭಿವೃದ್ಧಿ ಎಂದರೆ ಪ್ರವಾಹದಿಂದ ತುಂಬಿದ ರಸ್ತೆಗಳು, ತೇಲುವ ವಾಹನಗಳು. ಫ್ಲೈಓವರ್ ಮರೆತುಬಿಡಿ, ಬೆಂಗಳೂರಿನ ನಾಗರಿಕರಿಗೆ ಬೋಟ್‌ಗಳು ಅತ್ಯವಶ್ಯಕವಾಗಿದೆ. ಇದು "ಗ್ರೇಟರ್ ಬೆಂಗಳೂರು" ಅಥವಾ ಗ್ರೇಟರ್ ಬ್ಲಂಡರ್ ಗಳೂರು? ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕುಟುಕಿದ್ದಾರೆ.
ಮುಂಗಾರು ಬೆಂಗಳೂರನ್ನು ಶಾಶ್ವತ ಸರೋವರ ವನ್ನಾಗಿ ಪರಿವರ್ತಿಸುವ ಮೊದಲು ಎಚ್ಚರಗೊಳ್ಳಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದರೆ, ಅತ್ತ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸಾಧನಾ ಸಮಾವೇಶ ಸಂಘಟನೆ ಹೆಸರಲ್ಲಿ ಪಿಟೀಲು ಬಾರಿಸಲು ಬೆಂಗಳೂರು ತೊರೆದು ಹೋಗಿದ್ದಾರೆ. ಬೆಂಗಳೂರಿನ ಜನ ಮಳೆಯ ತತ್ತರದಿಂದ ನರಳುತ್ತಿದ್ದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಸಮಾವೇಶದ ಹೆಸರಿನಲ್ಲಿ ಮೋಜು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ರಾಜಧಾನಿ ಬೆಂಗಳೂರು ಮಳೆಯ ನೀರಿನಿಂದ ಮುಳುಗುತ್ತಿದ್ದರೆ, ಇಡೀ ರಾಜ್ಯದ ಜನತೆಗೆ ಬೆಲೆ ಏರಿಕೆಯ ಕುಣಿಕೆ ಬಿಗಿಯಲು ಹೊರಟಿರುವ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ಮುಳುಗಿಸುತ್ತಿದೆ. ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳಿ, ಗುಂಡಿಗಳು ಹಾಗೂ ಮೂಲಸೌಕರ್ಯಗಳಿಲ್ಲದ ಅವ್ಯವಸ್ಥೆಯ ಆಗರವಾಗಿಸಿ ರಾಜ್ಯದ ಬೊಕ್ಕಸವೆಲ್ಲ ಖಾಲಿಯಾಗಿದ್ದರೂ, ಕೋಟಿ ಕೋಟಿ ಖರ್ಚು ಮಾಡಿ ಅಭಿವೃದ್ಧಿ ಶೂನ್ಯತೆಯನ್ನೇ ಸಾಧನೆ ಎಂಬಂತೆ ಕಾಂಗ್ರೆಸ್ಸಿಗರು ಬಿಂಬಿಸಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ಸರ್ಕಾರದ ಬೊಕ್ಕಸ ಖಾಲಿಯಾಗಿ ಕುಳಿತಿದೆ, 'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು' ಎಂಬಂತೆ ಕಾಂಗ್ರೆಸ್ ಸರ್ಕಾರ ಸಾಧನೆಯ ಹೆಸರಿನಲ್ಲಿ ಸಮಾವೇಶ ಆಯೋಜಿಸಿ ಸ್ವ- ಪ್ರತಿಷ್ಠೆ ಮೆರೆಯಲು ಹೊರಟಿದೆ. ಬೆಂಗಳೂರಿನ ಸ್ಥಿತಿ ತೀವ್ರ ಬಿಗಡಾಯಿಸುತ್ತಿದ್ದು ಈ ಕೂಡಲೇ ಉಸ್ತುವಾರಿಯನ್ನು ಹೊತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜಧಾನಿಗೆ ಬಂದು ಜನರ ದುಃಖ ದುಮ್ಮಾನಗಳನ್ನು ಆಲಿಸಲಿ, ಸಂಕಷ್ಟಕ್ಕೆ ಸ್ಪಂದಿಸಲಿ, ಇಲ್ಲದಿದ್ದರೆ ಬೆಂಗಳೂರಿಗರ ಆಕ್ರೋಶವನ್ನು ಎದುರಿಸಲು ಸಿದ್ದರಾಗಲಿ ಎಂದು ಹೇಳಿದ್ದಾರೆ.