'ರೋಮ್ ಹೊತ್ತಿ ಉರಿಯುತ್ತಿದ್ದರೆ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ' ಎಂಬಂತೆ ಡಿಸಿಎಂ

ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದರೆ, ಅತ್ತ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸಾಧನಾ ಸಮಾವೇಶ ಸಂಘಟನೆ ಹೆಸರಲ್ಲಿ ಪಿಟೀಲು ಬಾರಿಸಲು ಬೆಂಗಳೂರು ತೊರೆದು ಹೋಗಿದ್ದಾರೆ. ಬೆಂಗಳೂರಿನ ಜನ ಮಳೆಯ ತತ್ತರದಿಂದ ನರಳುತ್ತಿದ್ದರೆ, ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಮಾವೇಶದ ಹೆಸರಿನಲ್ಲಿ ಮೋಜು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ರಾಜಧಾನಿ ಬೆಂಗಳೂರು ಮಳೆಯ ನೀರಿನಿಂದ ಮುಳುಗುತ್ತಿದ್ದರೆ, ಇಡೀ ರಾಜ್ಯದ ಜನತೆಗೆ ಬೆಲೆ ಏರಿಕೆಯ ಕುಣಿಕೆ ಬಿಗಿಯಲು ಹೊರಟಿರುವ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ಮುಳುಗಿಸುತ್ತಿದೆ. ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳಿ, ಗುಂಡಿಗಳು ಹಾಗೂ ಮೂಲಸೌಕರ್ಯಗಳಿಲ್ಲದ ಅವ್ಯವಸ್ಥೆಯ ಆಗರವಾಗಿಸಿ ರಾಜ್ಯದ ಬೊಕ್ಕಸವೆಲ್ಲ ಖಾಲಿಯಾಗಿದ್ದರೂ, ಕೋಟಿ ಕೋಟಿ ಖರ್ಚು ಮಾಡಿ ಅಭಿವೃದ್ಧಿ ಶೂನ್ಯತೆಯನ್ನೇ ಸಾಧನೆ ಎಂಬಂತೆ ಕಾಂಗ್ರೆಸ್ಸಿಗರು ಬಿಂಬಿಸಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.

ಸರ್ಕಾರದ ಬೊಕ್ಕಸ ಖಾಲಿಯಾಗಿ ಕುಳಿತಿದೆ, 'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು' ಎಂಬಂತೆ ಕಾಂಗ್ರೆಸ್ ಸರ್ಕಾರ ಸಾಧನೆಯ ಹೆಸರಿನಲ್ಲಿ ಸಮಾವೇಶ ಆಯೋಜಿಸಿ ಸ್ವ- ಪ್ರತಿಷ್ಠೆ ಮೆರೆಯಲು ಹೊರಟಿದೆ. ಬೆಂಗಳೂರಿನ ಸ್ಥಿತಿ ತೀವ್ರ ಬಿಗಡಾಯಿಸುತ್ತಿದ್ದು ಈ ಕೂಡಲೇ ಉಸ್ತುವಾರಿಯನ್ನು ಹೊತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜಧಾನಿಗೆ ಬಂದು ಜನರ ದುಃಖ ದುಮ್ಮಾನಗಳನ್ನು ಆಲಿಸಲಿ, ಸಂಕಷ್ಟಕ್ಕೆ ಸ್ಪಂದಿಸಲಿ, ಇಲ್ಲದಿದ್ದರೆ ಬೆಂಗಳೂರಿಗರ ಆಕ್ರೋಶವನ್ನು ಎದುರಿಸಲು ಸಿದ್ದರಾಗಲಿ ಎಂದು ಹೇಳಿದ್ದಾರೆ.

Update: 2025-05-19 10:55 GMT

Linked news