Bangalore Rain: ಮಳೆಹಾನಿ ಪ್ರದೇಶಗಳಿಗೆ ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಭೇಟಿ
ಬಿಬಿಎಂಪಿ ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿದ್ದು, ಮಳೆಯಿಂದ ಆಗುವ ತೊಂದರೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಮ್ಮ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಸುರಿತ್ತಿರುವ ಜನರು ಕಂಗಾಲಾಗಿದ್ದಾರೆ. ಹಲವಡೆ ಭಾರೀ ಮಳೆಗೆ ಭಾರೀ ಅನಾಹುತ ಸೃಷ್ಟಿಯಾಗಿದ್ದು, ಮಳೆಹಾನಿ ಪ್ರದೇಶಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಧಾರಾಕಾರ ಮಳೆಯಿಂದ ಜಲಾವೃತವಾಗಿರುವ ಯಲಹಂಕದ ಕೇಂದ್ರೀಯ ವಿಹಾರ ವಸತಿ ಸಮುಚ್ಚಯಕ್ಕೂ ಭೇಟಿ ನೀಡಿದ ಡಿ.ಸಿ.ಎಂ ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಹಾಗೂ NDRF ತಂಡಕ್ಕೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಕೇಂದ್ರೀಯ ವಿಹಾರ ವಸತಿ ಸಮುಚ್ಚಯದಲ್ಲಿ ಕೇಂದ್ರ ಸರ್ಕಾರದ ನೌಕರರು ವಾಸಿಸುತ್ತಿದ್ದು, ಯಲಹಂಕದಲ್ಲಿ ಇಷ್ಟು ಪ್ರಮಾಣದ ಮಳೆಯಾಗಿರುವ ಇತಿಹಾಸವಿಲ್ಲ. ಸಮುಚ್ಚಯದಲ್ಲಿನ ಅರ್ಧದಷ್ಟು ಮಳೆಯ ನೀರನ್ನು ಈಗಾಗಲೇ ತೆಗೆಯಲಾಗಿದೆ. ಈ ಸಮುಚ್ಚಯದಲ್ಲಿ ನೀರು ಹಾಗೂ ವಿದ್ಯುತ್ ಸರಬರಾಜು ಇಲ್ಲದೆ ತೊಂದರೆಯಾಗುತ್ತಿದ್ದು, ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಗೊಳಿಸಿ ಖಾಸಗಿ ಹೋಟೆಲ್'ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಇದಕ್ಕೆ ಬಿಬಿಎಂಪಿ ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿದ್ದು, ಮಳೆಯಿಂದ ಆಗುವ ತೊಂದರೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಮ್ಮ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಧಾರಾಕಾರ ಮಳೆಯಿಂದ ಬೆಂಗಳೂರಿನ ಸಾಯಿಬಾಬಾ ಲೇಔಟ್ ಹಾಗೂ ಥಣಿಸಂದ್ರ ವ್ಯಾಪ್ತಿಯಲ್ಲಿ ಹಾನಿಗೊಳಗಾದ ಸ್ಥಳಗಳಿಗೆ ಡಿಸಿಎಂ ಭೇಟಿ ನೀಡಿ ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಅಲ್ಲಿನ ನಿವಾಸಿಗಳು ಮಳೆಯಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
ಮತ್ತೆಆರಂಭವಾದ ಮಳೆ
ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಮಂಗಳವಾರ ಸಂಜೆಯಿಂದ ಸ್ವಲ್ಪ ಬಿಡುವು ನೀಡಿದ್ದ ಮಳೆ ಬುಧವಾರ ಸಂಜೆಯಾಗುತ್ತಿದ್ದಂತೆ ಮತ್ತೆ ಆರಭವಾಗಿದೆ. ಆ ಮೂಲಕ ಜನರು ಮತ್ತೆ ಕಂಗಾಲಾಗಿದ್ದಾರೆ. ಹಲವೆಡೆ ಸುರಿಯುತ್ತಿರುವ ಭಾರೀ ಮಳೆಗೆ ಮಲ್ಲೇಶ್ವರಂನ ಹಳ್ಳಿ ಮನೆ ಮುಂದೆ ಬೃಹದಾಕಾರ ಮರ ಧರೆಗುರುಳಿದು ಅವಾಂತರ ಸೃಷ್ಟಿಯಾಗಿದೆ.
ವಿಧಾನಸೌಧ, ಕೆ.ಆರ್.ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಕಾರ್ಪೊರೇಷನ್ ಸರ್ಕಲ್ ಶಾಂತಿನಗರ ಮತ್ತು ರಿಚ್ಮಂಡ್ ಸರ್ಕಲ್, ಡಾಲರ್ಸ್ ಕಾಲೋನಿ, ಹೆಬ್ಬಾಳ, ಸಂಜಯ್ ನಗರ, ಬಿಇಎಲ್ ರೋಡ್, ಎಂಎಸ್ ರಾಮಯ್ಯ ಆಸ್ಪತ್ರೆ ಸೇರಿದಂತೆ ಹಲವೆಡೆ ಭಾರೀ ಮಳೆ ಆಗಿದೆ. ಕೆಂಗೀರಿ ಸುತ್ತಮುತ್ತ ಜಿಟಿ ಜಿಟಿ ಮಳೆ ಆರಂಭವಾಗಿದ್ದರೆ, ಜಯನಗರ 7ನೇ ಹಂತದಲ್ಲಿ ಸುಮಾರು 30 ನಿಮಿಷದಿಂದ ಜೋರು ಗಾಳಿ ಜೊತೆಗೆ ಧಾರಾಕಾರ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಗೆ ಮ್ಯಾನ್ ಹೋಲ್ ಓಪನ್ ಆಗಿ ನೀರು ಉಕ್ಕಿ ಹರಿದಿದೆ. ಪರಿಣಾಮ ಶಾಂತಿನಗರದ ಬಿಟಿಎಸ್ ರಸ್ತೆ ಕೆಸರು ಮಯವಾಗಿದೆ. ನೀರು ತುಬಿಕೊಂಡ ಹಿನ್ನಲೆ ಗುಂಡಿಗಳು ಕಾಣದಂತಾಗಿದ್ದು, ಬೈಕ್ ಸವಾರರು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.