ಹೊಸ ವರ್ಷಾಚರಣೆಗೆ ಸಿದ್ಧತೆ | ಬೆಂಗಳೂರಿನಲ್ಲಿ 6 ಕೋಟಿ ಮೌಲ್ಯದ ಮಾದಕ ವಸ್ತು ವಶ
ಹೊಸ ವರ್ಷಾಚರಣೆಗಾಗಿ ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಗಾಂಜಾವನ್ನು ವಶಕ್ಕೆ ಪಡೆದಿರುವ ಬೆಂಗಳೂರು ಪೊಲೀಸರು, ಆರು ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.
ಬೆಂಗಳೂರು ಪೊಲೀಸರು ಹಾಗೂ ಸಿಸಿಬಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಈ ಜಾಲವನ್ನು ಪತ್ತೆ ಮಾಡಿದ್ದು, ಗೋವಿಂದಪುರ ಮತ್ತು ಸಿಸಿಬಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಈ ಭಾರೀ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
ಕ್ವಿಂಟಾಲ್ ಗಟ್ಟಲೆ ಗಾಂಜಾದೊಂದಿಗೆ ಆರೋಪಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 318 ಕೆಜಿ ಗಾಂಜಾ ಜಪ್ತಿ ಮಾಡಲಾಗಿದ್ದು ಅದರ ಮೌಲ್ಯ ಸುಮಾರು 3.25 ಕೋಟಿ ಎಂದು ಅಂದಾಜಿಸಲಾಗಿದೆ. ಆ ಸಂಬಂಧ ಪೆಡ್ಲರ್ ಅಚ್ಚು, ಜಮೀರ್ ಮತ್ತು ರೇಷ್ಮಾ ದಂಪತಿಯನ್ನು ಬಂಧಿಸಲಾಗಿದೆ.
ಒಡಿಶಾ ಮತ್ತು ಆಂಧ್ರಪ್ರದೇಶದಿಂದ ಈ ಭಾರೀ ಪ್ರಮಾಣದ ಗಾಂಜಾ ಸಂಗ್ರಹಿಸಿದ್ದ ಆರೋಪಿಗಳು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರು ಮತ್ತು ಕೇರಳದಲ್ಲಿ ಮಾರಾಟ ಮಾಡಲು ಯೋಜಿಸಿದ್ದರು. ಅದಕ್ಕಾಗಿ ಆರೋಪಿಗಳು ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆಗೆ ಪಡೆದು ಮಾಲನ್ನು ಸಾಗಣೆ ಮಾಡುತ್ತಿದ್ದರು. ಬೆಂಗಳೂರಿಗೆ ಗಾಂಜಾ ತರುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಎಚ್ ಎಸ್ ಆರ್ ಲೇಔಟ್ ಬಳಿ ಕಾರು ತಪಾಸಣೆ ಮಾಡಿದಾಗ ಮಾಲು ಸಹಿತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಮೂರು ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್
ಪ್ರತ್ಯೇಕ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ ಸುಮಾರು 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಹೊಸ ವರ್ಷಾಚರಣೆಗೆಂದು ಆರೋಪಿಗಳು ಸೋಲದೇವನಹಳ್ಳಿ ಬಳಿ ಡ್ರಗ್ಸ್ ಸಂಗ್ರಹಿಸಿದ್ದ ಮಾಹಿತಿ ತಿಳಿದು ದಾಳಿ ನಡೆಸಿದಾಗ 1 ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ಪತ್ತೆಯಾಗಿವೆ.
ಆರೋಪಿಗಳು ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿ ಇಲ್ಲಿ ಮಾರಾಟ ಮಾಡುತ್ತಿದ್ದರು. ಹೊಸ ವರ್ಷಾಚರಣೆಯ ದಿನ ಮಾರಲು ಈ ಭಾರೀ ಪ್ರಮಾಣದ ಡ್ರಗ್ಸ್ ಸಂಗ್ರಹಿಸಿದ್ದರು ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ. ವಿದೇಶಿ ಡ್ರಗ್ ಪೆಡ್ಲರ್ಗಳು ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿದ್ದಾರೆ ಎಂದು ಸಿಸಿಬಿ ಮಾಹಿತಿ ನೀಡಿದೆ.