ಅರಣ್ಯಕ್ಕೆ ಜಾನುವಾರು ಪ್ರವೇಶ ನಿರ್ಬಂಧ: ಸರ್ಕಾರದ ವಿರುದ್ಧ ಕಾಡಂಚಿನ ರೈತರ ಕಿಡಿ

ಸರ್ಕಾರಕ್ಕೆ ನಿಜವಾಗಿಯೂ ಅರಣ್ಯ ಉಳಿಸುವ ಕಾಳಜಿ ಇದ್ದರೆ, ಮೊದಲು ಪ್ರಾಣಿ ಬೇಟೆ ಮತ್ತು ಮರಗಳ ಕಳ್ಳಸಾಗಾಟವನ್ನು ತಡೆಯಲಿ ಎಂದು ಕಿಡಿಕಾರಿದ್ದಾರೆ.;

Update: 2025-07-24 04:22 GMT

ರಾಜ್ಯದಲ್ಲಿ ಹುಲಿಗಳ ಸಾವಿನ ವಿಚಾರವನ್ನು ಮುಂದಿಟ್ಟುಕೊಂಡು, ಅರಣ್ಯ ಪ್ರದೇಶಕ್ಕೆ ಜಾನುವಾರುಗಳ ಪ್ರವೇಶವನ್ನು ನಿರ್ಬಂಧಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕಾಡಂಚಿನ ರೈತರು ಮತ್ತು ಅರಣ್ಯವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹುಲಿ ಸಂರಕ್ಷಣೆಯ ಹೆಸರಿನಲ್ಲಿ ತಮ್ಮನ್ನು ಒಕ್ಕಲೆಬ್ಬಿಸಲು ನಡೆಸುತ್ತಿರುವ ಹುನ್ನಾರ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಈ ಕುರಿತು ಅಭಿಪ್ರಾಯಪಟ್ಟಿರುವ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷೀಯ ಮಂಡಳಿ ಸದಸ್ಯರಾದ ಹೊನ್ನೂರು ಪ್ರಕಾಶ್, "ರೈತರು ಹಾಗೂ ಕಾಡು ಜೊತೆಯಾಗಿ ಬೆಳೆಯಬೇಕೇ ಹೊರತು, ಈ ರೀತಿ ಏಕಾಏಕಿ ನಿರ್ಬಂಧ ವಿಧಿಸುವುದು ಸಲ್ಲದು. ಕಾಡಂಚಿನ ರೈತರು ತಮ್ಮ ಜೀವನೋಪಾಯಕ್ಕಾಗಿ ಕುರಿ, ಮೇಕೆ, ದನಗಳನ್ನು ಸಾಕಿಕೊಂಡಿದ್ದಾರೆ. ತಮ್ಮ ತುಂಡು ಭೂಮಿಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸಲಾಗದೆ, ಅನಿವಾರ್ಯವಾಗಿ ಕಾಡಿನೊಳಗೆ ಮೇಯಿಸುವುದು ರೂಢಿಯಾಗಿದೆ. ಈಗ ಅರಣ್ಯದೊಳಗೆ ಜಾನುವಾರುಗಳ ಪ್ರವೇಶವನ್ನು ನಿರ್ಬಂಧಿಸಿದರೆ, ನಮ್ಮ ದನ-ಕರುಗಳು ಮೇವಿಲ್ಲದೆ ಸಾಯಬೇಕಾಗುತ್ತದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

"ಸರ್ಕಾರಕ್ಕೆ ನಿಜವಾಗಿಯೂ ಅರಣ್ಯ ಉಳಿಸುವ ಕಾಳಜಿ ಇದ್ದರೆ, ಮೊದಲು ಪ್ರಾಣಿ ಬೇಟೆ ಮತ್ತು ಮರಗಳ ಕಳ್ಳಸಾಗಾಟವನ್ನು ತಡೆಯಲಿ. 'ಪರಿಸರವಾದಿ'ಗಳ ಮುಖವಾಡ ಹಾಕಿಕೊಂಡವರ ಒತ್ತಡಕ್ಕೆ ಮಣಿದು, ಬಡ ರೈತರ ಜೀವನದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ," ಎಂದು ಅವರು ಎಚ್ಚರಿಸಿದ್ದಾರೆ.

ರೈತ ಮಾದೇಶ್ ಅವರು ಸರ್ಕಾರದ ವಿರುದ್ಧ ನೇರ ಆರೋಪ ಮಾಡಿದ್ದು, "ಹೂಗ್ಯಂ ವಲಯದಲ್ಲಿ ಇತ್ತೀಚೆಗೆ ಐದು ಹುಲಿಗಳು ಸಾವನ್ನಪ್ಪಲು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಚಿವ ಈಶ್ವರ ಖಂಡ್ರೆ ಅವರೇ ನೇರ ಹೊಣೆಗಾರರು. ಈಗ ಸರ್ಕಾರವು ತನ್ನ ತಪ್ಪನ್ನು ಮುಚ್ಚಿಕೊಳ್ಳಲು, ಸ್ಥಳೀಯ ರೈತರ ಮೇಲೆ ಗದಾಪ್ರಹಾರ ಮಾಡಲು ಹೊರಟಿದೆ," ಎಂದು ಕಿಡಿಕಾರಿದರು.

"ಒಂದುವೇಳೆ ತಮಿಳುನಾಡಿನಿಂದ ಅಕ್ರಮವಾಗಿ ಜಾನುವಾರುಗಳು ರಾಜ್ಯದ ಕಾಡಿನೊಳಗೆ ಪ್ರವೇಶಿಸುತ್ತಿದ್ದರೆ, ಅದಕ್ಕೆ ಕಡಿವಾಣ ಹಾಕಲಿ. ಗಡಿ ಭಾಗದಲ್ಲಿ ಬೇಲಿ ನಿರ್ಮಿಸಲಿ. ಅದನ್ನು ಬಿಟ್ಟು, ಸ್ಥಳೀಯರ ಜಾನುವಾರುಗಳ ಪ್ರವೇಶಕ್ಕೆ ನಿರ್ಬಂಧ ಹೇರುವುದು ಅನ್ಯಾಯ," ಎಂದು ಮತ್ತೊಬ್ಬ ರೈತ ರಂಗೇಗೌಡ ಒತ್ತಾಯಿಸಿದ್ದಾರೆ. 

Tags:    

Similar News