No To Plastic| ಬಮೂಲ್ ಪ್ರಯೋಗ ಯಶಸ್ವಿ: ಸಸ್ಯಾಧರಿತ ನಂದಿನಿ ಹಾಲಿನ ಪಾಕೆಟ್
ಬಯೋ ಡಿಗ್ರೇಡೇಬಲ್ ಪಾಕೆಟ್‌ಗಳನ್ನು ಮೆಕ್ಕೆಜೋಳ ಹಾಗೂ ಕಬ್ಬಿನ ತ್ಯಾಜ್ಯ ಪದಾರ್ಥದಿಂದ ತಯಾರಿಸಲಾಗುತ್ತದೆ. ಈ ಸಸ್ಯಾಧರಿತ ಕಚ್ಛಾ ವಸ್ತುಗಳಲ್ಲಿ ಸ್ಟಾರ್ಚ್ ಅಂಶ ಇರಲಿದ್ದು, ಪ್ಲಾಸ್ಟಿಕ್ ಅಂಶದಂತೆಯೇ ಕೆಲಸ ಮಾಡಲಿದೆ.;
ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹೊಸ ಪರಿಸರ ಸ್ನೇಹಿ ಹಾಗೂ ಮಣ್ಣಿನಲ್ಲಿ ಸುಲಭವಾಗಿ ಕರಗುವಂತಹ ಹಾಲಿನ ಪಾಕೆಟ್ ಬಳಕೆಗೆ ನಿರ್ಧರಿಸಿದೆ.
ದೇಶದಲ್ಲೇ ಮೊದಲ ಬಾರಿಗೆ ಶೇ 100 ರಷ್ಟು ಬಯೋ ಡಿಗ್ರೇಡಬಲ್ ಹಾಲಿನ ಪ್ಯಾಕೆಟ್ ಬಳಸುವ ಪ್ರಯತ್ನಕ್ಕೆ ಕೆಎಂಎಫ್ ಮುಂದಾಗಿರುವುದು ಕರ್ನಾಟಕದ ಹೆಗ್ಗಳಿಕೆ ಎನಿಸಿದೆ. ಮೆಕ್ಕೆಜೋಳ, ಕಬ್ಬು ಮತ್ತು ಇತರ ಸಸ್ಯಾಧಾರಿತ ವಸ್ತುಗಳಿಂದ ತಯಾರಿಸುವ ಹೊಸ ಪ್ಯಾಕೆಟ್‌ಗಳು ಪರಿಸರ ಸಂರಕ್ಷಣೆಗೂ ಕೊಡುಗೆ ನೀಡಲಿವೆ.
ಇಲ್ಲಿಯವರೆಗೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದರಿಂದ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ಹೆಚ್ಚಾಗಿತ್ತು. ರಾಜ್ಯ ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೂ ಹಾಲು ಒಕ್ಕೂಟಗಳಲ್ಲಿ ನಿಯಂತ್ರಣ ಸಾಧ್ಯವಾಗಿರಲಿಲ್ಲ.
ಇದೀಗ ಸ್ಥಳೀಯವಾಗಿಯೇ ಸಿಗುವ ಕಚ್ಛಾ ಪದಾರ್ಥಗಳನ್ನು ಬಳಸಿಕೊಂಡು ವಿದೇಶಿ ತಂತ್ರಜ್ಞಾನದ ನೆರವಿನೊಂದಿಗೆ ಪರಿಸರ ಸ್ನೇಹಿ ಹಾಲಿನ ಪಾಕೆಟ್ ತಯಾರಿಸಲು ಕೆಎಂಎಫ್ ಉದ್ದೇಶಿಸಿದೆ. ಪ್ರಾಯೋಗಿಕ ಹಂತವಾಗಿ ಬಮೂಲ್ ಹಾಲು ಒಕ್ಕೂಟ ಡಿಕಂಪೋಸಿಂಗ್ ಪಾಕೆಟ್‌ಗಳನ್ನು ತಯಾರಿಸುವ ಹೊಣೆ ಹೊತ್ತಿದೆ.
ಹೊಸ ಪ್ಯಾಕೆಟ್ ವಿಶೇಷತೆ ಏನು?
ಪ್ರಸ್ತುತ, ಬಳಸಲಾಗುತ್ತಿರುವ ಪಾಲಿಥಿನ್ ಹಾಲಿನ ಪಾಕೆಟ್‌ಗಳು ಮಣ್ಣಿನಲ್ಲಿ ಕೊಳೆಯಲು ವರ್ಷಗಳೇ ಬೇಕಾಗುತ್ತದೆ. ಆದರೆ, ಈಗ ಕೆಎಂಎಫ್ ಪರಿಚಯಿಸಲು ಉದ್ದೇಶಿಸಿರುವ ಹೊಸ ಪರಿಸರ ಸ್ನೇಹಿ ಪ್ಯಾಕೆಟ್‌ಗಳು 90 ದಿನ, ಇಲ್ಲವೇ 6 ತಿಂಗಳಲ್ಲಿ ಮಣ್ಣಿನಲ್ಲಿ ಕರಗುವಂತಹ ಪರಿಸರ ಸ್ನೇಹಿಯಾಗಿರಲಿದೆ.
ರಾಜ್ಯದಲ್ಲಿ ಪ್ರತಿದಿನ 40 ರಿಂದ 50 ಲಕ್ಷದಷ್ಟು ಹಾಲಿನ ಪ್ಯಾಕೆಟ್‌ಗಳನ್ನು ಬಳಸಲಾಗುತ್ತಿದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ಹೆಚ್ಚಾಗಿದೆ. ಪ್ಲಾಸ್ಟಿಕ್ ಅನಾನುಕೂಲತೆ ತಪ್ಪಿಸುವ ಸಲುವಾಗಿ ಪರಿಸರ ಸ್ನೇಹಿ ಪಾಕೆಟ್ ಬಳಸಲು ಕೆಎಂಎಫ್ ತೀರ್ಮಾನಿಸಿದೆ.
ಬಮೂಲ್‌ನಲ್ಲಿ ಪ್ರಾಯೋಗಿಕ ಜಾರಿ
ಬಮೂಲ್ ವ್ಯಾಪ್ತಿಗೆ ಬರುವ ಕನಪುರ ತಾಲೂಕಿನ ಶಿವನಹಳ್ಳಿ ಮೆಗಾ ಡೇರಿ ಘಟಕದಲ್ಲಿ ಬಯೋಡಿಗ್ರೇಡಬಲ್ ಹಾಲಿನ ಪಾಕೆಟ್‌ಗಳನ್ನು ತಯಾರಿಸಿ , ಬಳಕೆಗೆ ತರಲು ನಿರ್ಧರಿಸಿದೆ. ಪ್ರಾಯೋಗಿಕ ಹಂತದಲ್ಲಿ ನಿತ್ಯ ಸುಮಾರು 2 ಲಕ್ಷ ಹಾಲಿನ ಪ್ಯಾಕೆಟ್ ತಯಾರಿಸಲಾಗುವುದು. ಹಾಲಿನ ಸೋರಿಕೆ, ಗುಣಮಟ್ಟ, ಇತ್ಯಾದಿ ಅಂಶಗಳ ಅಧ್ಯಯನ ಮಾಡಿ, ರಾಜ್ಯವ್ಯಾಪಿ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಬಯೋ ಡಿಗ್ರೇಡೆಬಲ್ ಪಾಕೆಟ್ ಬಳಕೆಯ ಕುರಿತು ಗ್ರಾಹಕರ ಪ್ರತಿಕ್ರಿಯೆಯನ್ನೂ ಪರಿಗಣಿಸಲಾಗುವುದು. ಪ್ರಾಯೋಗಿಕ ಹಂತ ಯಶಸ್ವಿಯಾದರೆ ದೇಶದಲ್ಲೇ ಮೊದಲ ಬಾರಿಗೆ ಪರಿಸರ ಸ್ನೇಹಿ ಹಾಲಿನ ಪಾಕೆಟ್ ಬಳಸಿದ ಹೆಗ್ಗಳಿಕೆ ಕೆಎಂಎಫ್‌ಗೆ ಸಲ್ಲಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಬೆಂಗಳೂರು ಒಂದರಲ್ಲೇ ಪ್ರತಿದಿನ 25 ಲಕ್ಷ ಪ್ಲಾಸ್ಟಿಕ್ ಹಾಲಿನ ಪ್ಯಾಕೆಟ್ ಬಳಸಲಾಗುತ್ತಿದೆ. ಜೈವಿಕ ವಿಘಟನೆಯ ಹಾಲಿನ ಪಾಕೆಟ್ ಬಳಕೆಯಿಂದ ತ್ಯಾಜ್ಯದ ಪ್ರಮಾಣ ಕಡಿಮೆಯಾಗಲಿದೆ. ಹೊಸ ಪ್ಯಾಕೆಟ್‌ಗಳ ತಯಾರಿಕೆ ಕೊಂಚ ದುಬಾರಿಯಾದರೂ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾದರೆ ವೆಚ್ಚವನ್ನು ಸರಿದೂಗಿಸಬಹುದು. ಪರಿಸರ ಸಂರಕ್ಷಣೆ ದೃಷ್ಟಿಯಿಂದ ವೆಚ್ಚ ನಗಣ್ಯವಾಗಲಿದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಸಾಮಾನ್ಯವಾದ ಪ್ಲಾಸ್ಟಿಕ್ ಹಾಲಿನ ಪ್ಯಾಕೆಟ್‌ಗಳಿಗಿಂತ ಶೇ 5ರಷ್ಟು ವೆಚ್ಚದ ಹೆಚ್ಚಿರಲಿದೆ. ಬಮೂಲ್ ಮತ್ತು ಕೆಎಂಎಫ್ ಕರ್ನಾಟಕದ ಎಲ್ಲ ನಂದಿನಿ ಔಟ್‌ಲೆಟ್‌ಗಳಲ್ಲಿ ಪ್ಯಾಕೆಟ್‌ಗಳನ್ನು ಬಳಕೆ ಮಾಡುವ ಉದ್ದೇಶ ಹೊಂದಿವೆ. ಇದೇ ತಿಂಗಳು ಬೆಂಗಳೂರಿನಲ್ಲಿ ಪ್ರಯೋಗಿಕವಾಗಿ ಹೊಸ ಪರಿಸರ ಸ್ನೇಹಿ ಪಾಕೆಟ್‌ಗಳನ್ನು ಬಿಡುಗಡೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಭಾರತದಲ್ಲಿ ಇದೇ ಮೊದಲು
ವಿದೇಶಗಳಲ್ಲಿ ಬಳಕೆಯಲ್ಲಿರುವ ಈ ತಂತ್ರಜ್ಞಾನವನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ನೂತನ ತಂತ್ರಜ್ಞಾನದಡಿ ತಯಾರಿಸಲಾಗುವ ಬಯೋ ಡಿಗ್ರೇಡೇಬಲ್ ಪಾಕೆಟ್‌ಗಳನ್ನು ಮೆಕ್ಕೆಜೋಳ ಹಾಗೂ ಕಬ್ಬಿನ ತ್ಯಾಜ್ಯ ಪದಾರ್ಥದಿಂದ ತಯಾರಿಸಲಾಗುತ್ತದೆ. ಈ ಸಸ್ಯಾಧರಿತ ಕಚ್ಛಾ ವಸ್ತುಗಳಲ್ಲಿ ಸ್ಟಾರ್ಚ್ ಅಂಶ ಇರಲಿದ್ದು, ಪ್ಲಾಸ್ಟಿಕ್ ಅಂಶದಂತೆಯೇ ಕೆಲಸ ಮಾಡಲಿದೆ. ಜತೆಗೆ ಮಣ್ಣಿನಲ್ಲಿ ಕರಗುವ ಗುಣ ಹೊಂದಿರಲಿದೆ.
ಬಮೂಲ್ ನಿತ್ಯ 14 ಲಕ್ಷ ಲೀಟರ್ ಹಾಲು ಹಾಗೂ ಮೊಸರು ಮಾರಾಟ ಮಾಡುತ್ತಿದೆ. ಬಯೋಡಿಗ್ರೇಡೆಬಲ್ ಪ್ಯಾಕೆಟ್ ಅಳವಡಿಸಿಕೊಂಡರೆ ಪರಿಸರ ಹಾಗೂ ಗ್ರಾಹಕರ ಆರೋಗ್ಯಕ್ಕೂ ಸಹಕಾರಿಯಾಗಲಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಕನಕಪುರದ ಗ್ರಾಮದಲ್ಲಿ ಪ್ರಯೋಗ
ಪರಿಸರ ಸ್ನೇಹಿ ಹಾಲಿನ ಪಾಕೆಟ್‌ಗಳನ್ನು ಕನಕಪುರ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಪಾಯೋಗಿಕವಾಗಿ ಬಳಸಲಾಯಿತು. ಸುಮಾರು 50 ಲೀಟರ್ ಹಾಲನ್ನು ಪರಿಸರ ಸ್ನೇಹಿ ಪಾಕೆಟ್‌ಗಳಲ್ಲಿ ಸಂಗ್ರಹಿಸಿ ಹಂಚಿಕೆ ಮಾಡಲಾಗಿದೆ. ಪ್ರಯೋಗ ಯಶಸ್ವಿಯಾಗಿದೆ. ಬಯೋ ಡಿಗ್ರೇಡೆಬಲ್ ಪಾಕೆಟ್ ಬಳಕೆಯಿಂದ ಆಗುವ ಅನುಕೂಲಗಳು ಹಾಗೂ ಅನಾನುಕೂಲಗಳ ಅಧ್ಯಯನ ನಡೆಸುತ್ತಿದ್ದು, ಮುಂದಿನ ಹಂತದಲ್ಲಿ ಬೆಂಗಳೂರಿನ ಒಂದು ನಿರ್ದಿಷ್ಟ ಪ್ರದೇಶದಲ್ಲಿ ೨ ಲಕ್ಷ ಪಾಕೆಟ್‌ಗಳನ್ನು ಮಾರುಕಟ್ಟೆಗೆ ಬಿಡಲಾಗುವುದು. ಬಮೂಲ್ ಈ ಪ್ರಾಯೋಗಿಕ ಹಂತದಲ್ಲಿ ಕೆಲಸ ಮಾಡುತ್ತಿದೆ. ಇದರ ಸಾಧಕ-ಬಾಧಕ ಪರಿಶೀಲಿಸಿ ರಾಜ್ಯವ್ಯಾಪಿ ವಿಸ್ತರಿಸಲಾಗುವುದು. ಎಲ್ಲವೂ ಅಂದುಕೊಂಡಂತೆ ಆದರೆ ಎರಡು ಮೂರು ತಿಂಗಳಲ್ಲಿ ಯೋಜನೆ ಅನುಷ್ಠಾನದ ಕುರಿತು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಕೆಎಂಎಫ್ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.