ಬಿ-ಖಾತಾ ಅವಧಿ ಮೂರು ತಿಂಗಳವರೆಗೆ ವಿಸ್ತರಣೆ : ಸಚಿವ ಬಿ.ಎಸ್.ಸುರೇಶ್‌

ಯಾವುದೇ ಪರವಾನಗಿ, ಭೂಪರಿವರ್ತನೆ, ನಕ್ಷೆ ಮಂಜೂರಾತಿ ಮಾಡಿಕೊಳ್ಳದೇ ಕಂದಾಯ ನಿವೇಶನಗಳಲ್ಲಿ ಕಟ್ಟಡಗಳನ್ನು ಕಟ್ಟಿಕೊಂಡಿರುವವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಬಿ-ಖಾತಾ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.;

Update: 2025-05-14 13:21 GMT

ನಗರಾಭಿವೃದ್ಧಿ ಸಚಿವ ಬಿ.ಎಸ್‌. ಸುರೇಶ್‌.

ರಾಜ್ಯದ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ ಬಿ-ಖಾತಾ ನೀಡುವ ಅವಧಿಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರಯೋಜನೆ ಸಚಿವ ಬಿ.ಎಸ್.ಸುರೇಶ್ ತಿಳಿಸಿದ್ದಾರೆ.

ಬುಧವಾರ (ಮೇ14) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯಾವುದೇ ಪರವಾನಗಿ, ಭೂಪರಿವರ್ತನೆ, ನಕ್ಷೆ ಮಂಜೂರಾತಿ ಮಾಡಿಕೊಳ್ಳದೇ ಕಂದಾಯ ನಿವೇಶನಗಳಲ್ಲಿ ಕಟ್ಟಡಗಳನ್ನು ಕಟ್ಟಿಕೊಂಡಿರುವವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬಿ-ಖಾತ ನೀಡಿ ಸಕ್ರಮಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.

ಈ ಹಿಂದೆ ನಾಗರಿಕರು ನಿಗದಿತ ಶುಲ್ಕಗಳನ್ನು ಪಾವತಿಸಿ ತಮ್ಮ ಕಟ್ಟಡಗಳಿಗೆ ಬಿ-ಖಾತಾ ಪಡೆದುಕೊಳ್ಳಬಹುದಾಗಿತ್ತು. ಈ ಅವಕಾಶವನ್ನು ಮೇ10 ರವರೆಗೆ ಮಾತ್ರ ನೀಡಲಾಗಿತ್ತು. ರಾಜ್ಯದ ಮಹಾನಗರಪಾಲಿಕೆಗಳು ಮತ್ತು ನಗರ ಪ್ರದೇಶಗಳಲ್ಲಿ ಇಂತಹ 30 ಲಕ್ಷಕ್ಕೂ ಅಧಿಕ ಅನಧಿಕೃತ ಕಟ್ಟಡಗಳು, ಮನೆಗಳು, ನಿವೇಶನಗಳಿವೆ ಎಂದು ಅಂದಾಜಿಸಲಾಗಿದೆ. ಸರ್ಕಾರ ಒಂದು ಬಾರಿಯ ಅವಕಾಶ ನೀಡಿದ ನಂತರ ನಾಗರಿಕರು ಉತ್ತಮ ರೀತಿಯಲ್ಲಿ ಸ್ಪಂದಿಸಿ ತಮ್ಮ ಆಸ್ತಿಗಳಿಗೆ ಬಿ-ಖಾತಾ ಪಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. 

2 ಲಕ್ಷ ಬಿ-ಖಾತಾ ವಿತರಣೆ

ಸರ್ಕಾರ ನೀಡಿದ ಅವಕಾಶವನ್ನು ಬಳಸಿಕೊಂಡಿರುವ ಸುಮಾರು 10 ಲಕ್ಷ ಆಸ್ತಿಗಳಿಗೆ ಬಿ-ಖಾತಾ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಈ ಪೈಕಿ 2 ಲಕ್ಷ ಆಸ್ತಿಗಳಿಗೆ ಬಿ-ಖಾತೆಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು ಹಂತ-ಹಂತವಾಗಿ ಬಿ-ಖಾತಾ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನೂ ಮೂರು ತಿಂಗಳು ವಿಸ್ತರಣೆ

ಸರ್ಕಾರದ ಈ ನಾಗರಿಕ ಸ್ನೇಹಿ ಸೌಲಭ್ಯವನ್ನು ಇನ್ನೂ ಹೆಚ್ಚಿನ ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ-ಖಾತಾ ವಿತರಣೆ ಪ್ರಕ್ರಿಯೆಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ, ಎಲ್ಲಾ ಅರ್ಹ ನಾಗರಿಕರು ಮತ್ತು ಅನಧಿಕೃತ ಕಟ್ಟಡಗಳನ್ನು ನಿರ್ಮಾಣಗಳನ್ನು ಹೊಂದಿರುವವರಿಗೆ ಅನುಕೂಲವಾಗಲಿದೆ.  ಜಿಪಿಎ ಹಾಗೂ ಅಗ್ರಿಮೆಂಟ್‌ದಾರರಿಗೂ ಬಿ-ಖಾತಾ ವಿತರಣೆಗೆ ಚಿಂತನೆ ನಡೆದಿದೆ ಎಂದು ಸುರೇಶ್‌ ತಿಳಿಸಿದ್ದಾರೆ.


Tags:    

Similar News