MK Pranesh VS Gayitri shantegowda | ವಿಧಾನ ಪರಿಷತ್‌ ಚುನಾವಣೆ ಮರು ಮತ ಎಣಿಕೆ ಪೂರ್ಣ; ಮಾ.4ರಂದು ತೀರ್ಪು?

ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ವಿಧಾನ ಪರಿಷತ್ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಅವರು ಎಂ.ಕೆ. ಪ್ರಾಣೇಶ್ ಅವರ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮರು ಮತ ಎಣಿಕೆ ನಡೆಸಿತ್ತು.;

Update: 2025-03-01 09:40 GMT
ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್‌ ಚುನಾವಣೆಯ ಮರು ಮತ ಎಣಿಕೆ ಕಾರ್ಯ ಕಾರ್ಯಕ್ಕೆ ಬಿಗಿ ಬಂದೋಬಸ್ತ್‌ ನಿಯೋಜಿಸಲಾಗಿತ್ತು

ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್ ಆಯ್ಕೆ ಪ್ರಶ್ನಿಸಿದ್ದ ಪ್ರಕರಣ ಸಂಬಂಧ ಶುಕ್ರವಾರ ಚಿಕ್ಕಮಗಳೂರು ಜಿಲ್ಲಾಡಳಿತವು ಮೂರು ವರ್ಷಗಳ ಹಿಂದೆ ನಡೆದಿದ್ದ ವಿಧಾನ ಪರಿಷತ್‌ ಚುನಾವಣೆಯ ಮತಗಳ ಮರು ಎಣಿಕೆಯನ್ನು ಬಿಗಿ ಭದ್ರತೆಯಲ್ಲಿ ನಡೆಸಿತು.

ಮರು ಮತ ಎಣಿಕೆಯ ವರದಿಯನ್ನು ಚುನಾವಣಾ ಆಯೋಗದ ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಮಾ.4 ರಂದು ಹೈಕೋರ್ಟ್‌ ತೀರ್ಪು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. 

2021 ಡಿ.14ರಂದು ನಡೆದಿದ್ದ ಚುನಾವಣೆ ಮತ ಎಣಿಕೆ ಹಾಗೂ ಪ್ರಾಣೇಶ್‌ ಅವರ ಆಯ್ಕೆ ಪ್ರಶ್ನಿಸಿ ಕಾಂಗ್ರೆಸ್‌ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಫೆ.28 ರಂದು ಮರು ಮತ ಎಣಿಕೆಗೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ನಡೆದಿದ್ದ ಪರಿಷತ್‌ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಚಲಾಯಿಸಿದ್ದ ಮತಗಳನ್ನು ಶುಕ್ರವಾರ ಮರು ಎಣಿಕೆ ಮಾಡಲಾಯಿತು.

ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂ.ಕೆ.ಪ್ರಾಣೇಶ್‌, ಕಾಂಗ್ರೆಸ್ ಅಭ್ಯರ್ಥಿಯಾಗಿ ಗಾಯಿತ್ರಿ ಶಾಂತೇಗೌಡ ಅವರು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು ಮತದಾನ ಮಾಡಿದ್ದರು.

ವಿವಾದಕ್ಕೆ ಕಾರಣವೇನು?

ವಿಧಾನ ಪರಿಷತ್ ಚುನಾವಣೆಯಲ್ಲಿ ಪುರಸಭೆ, ಪಟ್ಟಣ ಪಂಚಾಯಿತಿಯ 12 ಮಂದಿ ನಾಮ ನಿರ್ದೇಶಿತ ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು. ಈ ಚುನಾವಣೆಯಲ್ಲಿ ಎಂ.ಕೆ. ಪ್ರಾಣೇಶ್‌ ಅವರು ಆರು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಆದರೆ, ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿದ ಕುರಿತು ಪರಾಜಿತ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡ ಅವರು ಚುನಾವಣಾ ಆಯೋಗದ ಮುಂದೆ ಆಕ್ಷೇಪ ಸಲ್ಲಿಸಿದ್ದರು. ಆದರೆ, ಅಂದಿನ ಜಿಲ್ಲಾ ಚುನಾವಣಾಧಿಕಾರಿಯಾದ ಕೆ.ಎನ್‌.ರಮೇಶ್‌ ಅವರು ಆಕ್ಷೇಪಕ್ಕೆ ಮಣೆ ಹಾಕದೇ ಪ್ರಾಣೇಶ್ ಅವರ ಗೆಲುವನ್ನು ಘೋಷಿಸಿದ್ದರು. ಇದನ್ನು ಪ್ರಶ್ನಿಸಿ ಗಾಯಿತ್ರಿ ಶಾಂತೇಗೌಡ ಹೈಕೋರ್ಟ್‌ ಮೊರೆ ಹೋಗಿದ್ದರು.

2021 ಡಿಸೆಂಬರ್ 14 ರಂದು ನಡೆದಿದ್ದ ಮತ ಎಣಿಕೆಯಲ್ಲಿ ಒಟ್ಟು 2410 ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 39 ಅಸಿಂಧುವಾಗಿ ಉಳಿದ 2371 ಮತಗಳು ಸಿಂಧುವಾಗಿದ್ದವು. ಎಂ.ಕೆ.ಪ್ರಾಣೇಶ್ ಅವರು 1188 ಮತ ಪಡೆದರೆ, ಗಾಯತ್ರಿ ಶಾಂತೇಗೌಡ 1182 ಮತಗಳನ್ನು ಪಡೆದಿದ್ದರು.

ಗಾಯಿತ್ರಿ ಶಾಂತೇಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ನ್ಯಾಯಪೀಠ, ನಾಮನಿರ್ದೇಶಿತ ಸದಸ್ಯರ 12 ಮತಗಳನ್ನು ಪ್ರತ್ಯೇಕವಾಗಿರಿಸಿ 30 ದಿನದೊಳಗೆ ಮರುಮತ ಎಣಿಕೆ ನಡೆಸುವಂತೆ ಆದೇಶಿಸಿತ್ತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಎಂ.ಕೆ. ಪ್ರಾಣೇಶ್‌ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್‌ ಕೂಡ ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸೂಚನೆಯಂತೆ ಮರು ಮತ ಎಣಿಕೆ ನಡೆಯಿತು.

ಮರು ಮತ ಎಣಿಕೆಗೆ ಬಿಗಿ ಬಂದೋಬಸ್ತ್

‌ಸುಪ್ರೀಂಕೋರ್ಟ್‌ ಸೂಚನೆಯಂತೆ ನಡೆದ ಮರು ಮತ ಎಣಿಕೆಗೆ ಭಾರೀ ಪೊಲೀಸ್‌ ಬಿಗಿ ಬಂದೋಬಸ್ತ್‌ ಒದಗಿಸಲಾಗಿತ್ತು. ವೀಕ್ಷಕರನ್ನಾಗಿ ಚುನಾವಣಾ ಆಯೋಗ ಉಜ್ವಲ್ ಕುಮಾರ್ ಘೋಷ್ ಸೇರಿದಂತೆ ಮೂವರನ್ನು ನೇಮಕ ಮಾಡಿತ್ತು. ಬೆಳಿಗ್ಗೆ 6.30ಕ್ಕೆ ಜಿಲ್ಲಾ ಖಜಾನೆಯಿಂದ ಬ್ಯಾಲೆಟ್‌ ಪೇಪರ್‌ ಇರಿಸಿದ್ದ ಟ್ರಂಕ್ ಅನ್ನು ನಗರದ ಐಡಿಎಸ್‌ಜಿ ಕಾಲೇಜಿಗೆ ತಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ಎಣಿಕೆ ಮಾಡಲಾಯಿತು. ಮರು ಮತ ಎಣಿಕೆಯ ಕಾರ್ಯವನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು.

ಮುಂಜಾಗ್ರತಾ ಕ್ರಮವಾಗಿ ಮರು ಮತ ಎಣಿಕಾ ಕೇಂದ್ರದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಮಾ.4 ರಂದು ಘೋಷಣೆ ಸಾಧ್ಯತೆ

ಮರು ಮತ ಎಣಿಕೆ ನಡೆಸಿದ ಚುನಾವಣಾ ಆಯೋಗ, ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಮತ ಎಣಿಕೆಯ ಕುರಿತ ವರದಿ ಸಲ್ಲಿಸಿದೆ. ಮಾ.4 ರಂದು ನ್ಯಾಯಾಲಯ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮರು ಮತ ಎಣಿಕೆಗೆ ನಿರ್ದೇಶನ ನೀಡಿದ್ದ ಸುಪ್ರೀಂಕೋರ್ಟ್, ಫಲಿತಾಂಶ ಪ್ರಕಟಿಸದಂತೆ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಮತ ಎಣಿಕೆ ಮಾಡಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

Tags:    

Similar News