ಬಾಣಂತಿಯರ ಸಾವು ಸರಣಿ | ಬೆಳಗಾವಿ ಬಿಮ್ಸ್​ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು

ಭಾನುವಾರ ಬೆಳಿಗ್ಗೆ ವೈಶಾಲಿಗೆ ಎದೆನೋವು ಕಾಣಿಸಿಕೊಂಡಿದ್ದು, ಐಸಿಯುಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವೈಶಾಲಿ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ವೈಶಾಲಿ ಸಾವಿಗೆ ಕಾರಣ ಎಂದು ಕುಟುಂಬದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Update: 2024-12-23 05:19 GMT
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿಯ ಸಾವಾಗಿದೆ.
Click the Play button to listen to article

ಬಳ್ಳಾರಿಯಲ್ಲಿ ಸರಣಿ ಬಾಣಂತಿರ ಸಾವು ಪ್ರಕರಣ ಮಾಸುವ ಮುನ್ನವೇ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ.

ಬೆಳಗಾವಿಯ ಹುಕ್ಕೇರಿ ತಾಲೂಕಿನ ಗೌಡವಾಡದ ವೈಶಾಲಿ ಕೊಟಬಾಗಿ ಮೃತ ಮಹಿಳೆ. ವೈಶಾಲಿಗೆ ನಾಲ್ಕು ದಿನಗಳ ಹಿಂದಷ್ಟೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ವೈದ್ಯರಿಲ್ಲ ಎಂದು ಬೆಳಗಾವಿ ಬಿಮ್ಸ್​ಗೆ ಸ್ಥಳಾಂತರ ಮಾಡಿದ್ದರು. ಶನಿವಾರ ಬೆಳಿಗ್ಗೆ ಬಿಮ್ಸ್​ನಲ್ಲಿ ವೈಶಾಲಿಗೆ ಸಿಜೇರಿಯನ್ ಆಗಿದ್ದು, ಹೆಣ್ಣು ಮಗುವಿಗೆ ಜನ್ಮಕೊಟ್ಟಿದ್ದಾರೆ.

ಬಳಿಕ ವೈಶಾಲಿ ಆರೋಗ್ಯವಾಗಿ ಇದ್ದರು ಎನ್ನಲಾಗಿದೆ. ಆದರೆ ಭಾನುವಾರ ಬೆಳಿಗ್ಗೆ ವೈಶಾಲಿಗೆ ಎದೆನೋವು ಕಾಣಿಸಿಕೊಂಡಿದ್ದು, ಐಸಿಯುಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವೈಶಾಲಿ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ವೈಶಾಲಿ ಸಾವಿಗೆ ಕಾರಣ ಎಂದು ಕುಟುಂಬದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತ ಬಾಣಂತಿ ಶವವನ್ನು ಪೋಸ್ಟ್​​ಮಾರ್ಟಂಗೆ ಕೊಟ್ಟಿರಲಿಲ್ಲ. ನಂತರ ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ಎಂಎಲ್‌ಸಿ ಮಾಡಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಬಾಣಂತಿ ಶವ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದಲ್ಲಿ ವೈಶಾಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೋಸ್ಟ್ ಮಾರ್ಟಮ್ ರಿಪೋರ್ಟ್​ನಲ್ಲಿ ಸಾವಿನ ಸತ್ಯ ಬಯಲಾಗಲಿದೆ. ಯಾವುದೋ ಮಾತ್ರೆಗಳನ್ನು ನೀಡಿದ್ದಕ್ಕೆ ಈ ರೀತಿ ಆಗಿದೆ ಎಂದು ಕುಟುಂಬದರು ಆರೋಪಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಬಳ್ಳಾರಿ, ಸಿಂಧನೂರು ಸೇರಿದಂತೆ ರಾಜ್ಯದ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ.

ಎರಡನೇ ಸಾವು

ಡಿ.17ರಂದು ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವಾಗೀಡಾದ ಆರೋಪ ಕೇಳಿಬಂದಿತ್ತು. ರಾಮದುರ್ಗ ತಾಲೂಕಿನ ನಾಗನೂರ ತಾಂಡಾದ ಬಾಣಂತಿ ಕಲ್ಪನಾ ಅನಿಲ ಲಮಾಣಿ (26) ಮೃತಪಟ್ಟಿದ್ದರು. ಅಂದು ಮಧ್ಯರಾತ್ರಿ 2.30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗುವಿಗೆ ಕಲ್ಪನಾ ಜನ್ಮ ನೀಡಿದ್ದರು. ಈ ವೇಳೆ ಮಗು ಮತ್ತು ತಾಯಿ ಆರೋಗ್ಯದಿಂದ ಇರುವುದಾಗಿ ವೈದ್ಯರು ಹೇಳಿದ್ದು, ಬೆಳಿಗ್ಗೆ 8.30ರವರೆಗೂ ಆರೋಗ್ಯವಾಗಿದ್ದ ಕಲ್ಪನಾ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವಾಗಿದೆ. ಎರಡು ಬಾರಿ ಸಿಜೇರಿಯನ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ತರಾತುರಿಯಲ್ಲಿ ಸಿಜೇರಿಯನ್ ಮಾಡಿದ್ದಾರೆ. ಆರೋಗ್ಯದಲ್ಲಿ ಏರುಪೇರು ಆದಾಗ ಬೇರೆಡೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಕುಟುಂಬಸ್ಥರು ಮನವಿ ಮಾಡಿದರೂ, ಬೇರೆ ಆಸ್ಪತ್ರೆಗೆ ಕಳುಹಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರನ್ನು ಈ ಕೂಡಲೇ ವಜಾ ಮಾಡಬೇಕು ಎಂದು ಕಲ್ಪನಾ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.

Tags:    

Similar News