ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ಬೆಟ್ಟ, ಕಾಫಿ ಇತಿಹಾಸ ಮೆಚ್ಚಿ ಬರೆದ ಉದ್ಯಮಿ ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಚಿತ್ರವು, ಚಿಕ್ಕಮಗಳೂರಿನ ಪ್ರಕೃತಿ ರಮಣೀಯ ದೃಶ್ಯವನ್ನು ಹೊಂದಿದೆ. ಹಸಿರಿನಿಂದ ಕೂಡಿದ ದಟ್ಟವಾದ ಕಾಡು, ಮರಗಳಿಂದ ಆವೃತವಾದ ಬೆಟ್ಟಗಳು ಮತ್ತು ಮಧ್ಯದಲ್ಲಿ ಸಾಗುವ ಒಂದು ಸಣ್ಣ ರಸ್ತೆ ಕಾಣಿಸುತ್ತದೆ.;
ಭಾರತದ ಪ್ರಮುಖ ವಾಣಿಜ್ಯೋದ್ಯಮಿ ಮತ್ತು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಚಿಕ್ಕಮಗಳೂರಿನ ಪ್ರಕೃತಿಯ ಸೌಂದರ್ಯವನ್ನು ಒಳಗೊಂಡ ಒಂದು ಸುಂದರ ಚಿತ್ರವನ್ನು ಹಂಚಿಕೊಂಡು, ಅಲ್ಲಿನ ಪ್ರಾಕೃತಿಕ ಸೌಂದರ್ಯ ಹಾಗೂ ಕಾಫಿಯ ಇತಿಹಾಸವನ್ನು ಹೊಗಳಿದ್ದಾರೆ. ಮಾರ್ಚ್ 30, 2025 ರಂದು ಅವರು ಈ ಪೋಸ್ಟ್ ಮಾಡಿದ್ದು ವಿಶ್ವದ ಗಮನ ಸೆಳೆದಿದೆ.
ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಚಿತ್ರವು, ಚಿಕ್ಕಮಗಳೂರಿನ ಪ್ರಕೃತಿ ರಮಣೀಯ ದೃಶ್ಯವನ್ನು ಹೊಂದಿದೆ. ಹಸಿರಿನಿಂದ ಕೂಡಿದ ದಟ್ಟವಾದ ಕಾಡು, ಮರಗಳಿಂದ ಆವೃತವಾದ ಬೆಟ್ಟಗಳು ಮತ್ತು ಮಧ್ಯದಲ್ಲಿ ಸಾಗುವ ಒಂದು ಸಣ್ಣ ರಸ್ತೆ ಕಾಣಿಸುತ್ತದೆ. ಈ ರಸ್ತೆಯಲ್ಲಿ ಕೆಲವರು ತಮ್ಮ ಜಾನುವಾರುಗಳೊಂದಿಗೆ ನಡೆಯುತ್ತಿದ್ದು ಗ್ರಾಮೀಣ ಸೊಗಡನ್ನು ಅಭಿವ್ಯಕ್ತಿಸುತ್ತದೆ. ಈ ಚಿತ್ರವು ಪ್ರಕೃತಿಯ ಸೌಂದರ್ಯದ ಜೊತೆಗೆ ಒಂದು ರಹಸ್ಯಮಯ ಭಾವನೆ ಸೃಜಿಸುತ್ತದೆ ಎಂದು ಮಹೀಂದ್ರಾ ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆನಂದ್ ಅವರು ಚಿಕ್ಕಮಗಳೂರಿಗೆ ಇತ್ತೀಚೆಗೆ ಬಂದಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಕಾಫಿಯ ಇತಿಹಾಸದ ಸ್ಮರಣೆ
ಆನಂದ್ ಮಹೀಂದ್ರಾ ಅವರು ತಮ್ಮ ಪೋಸ್ಟ್‌ನಲ್ಲಿ ಚಿಕ್ಕಮಗಳೂರಿನ ಐತಿಹಾಸಿಕ ಮಹತ್ವ ಪ್ರಸ್ತಾಪಿಸಿದ್ದು, ಭಾರತದಲ್ಲಿ ಮೊದಲ ಬಾರಿಗೆ ಕಾಫಿ ಬೆಳೆ ಪರಿಚಯಿಸಿದ ಸ್ಥಳ ಎಂದಿದ್ದಾರೆ. 1670 ರ ಸುಮಾರಿಗೆ, ಬಾಬಾ ಬುಡನ್ ಎಂಬ ಸೂಫಿ ಸಂತ, ಯೆಮೆನ್‌ನ ಮೊಕಾ ಬಂದರಿನಿಂದ ಏಳು ಕಾಫಿ ಬೀಜಗಳನ್ನು ಭಾರತಕ್ಕೆ ತಂದು ನೆಟ್ಟರು ಎಂದು ಬರೆದುಕೊಂಡಿದ್ದಾರೆ. ಇತಿಹಾಸದ ಪ್ರಕಾರ ಬಾಬಾ ಬುಡನ್, ಚಿಕ್ಕಮಗಳೂರಿನ ಚಂದ್ರದ್ರೋಣ ಬೆಟ್ಟದ ಇಳಿಜಾರುಗಳಲ್ಲಿ ಕಾಫಿ ಬೀಜ ನೆಟ್ಟ ಬಳಿಕ ಭಾರತದಲ್ಲಿ ಕಾಫಿ ಬೆಳೆ ಆರಂಭವಾಯಿತು. ಈ ಬೆಟ್ಟದ ಶ್ರೇಣಿಯನ್ನು ನಂತರ ಬಾಬಾ ಬುಡನ್‌ಗಿರಿ ಎಂದು ಕರೆಯಲಾಯಿತು. ಅಲ್ಲಿ ಬಾಬಾ ಬುಡನ್ ಅವರ ಸಮಾಧಿಯೂ ಇದೆ.
ಪೋಸ್ಟ್‌ಗೆ ಉತ್ತಮ ಪ್ರತಿಕ್ರಿಯೆ
ಆನಂದ್ ಮಹೀಂದ್ರಾ ಅವರ ಈ ಪೋಸ್ಟ್‌ಗೆ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಬಳಕೆದಾರರೊಬ್ಬರು "ವಾಹ್, ತುಂಬಾ ಸುಂದರವಾದ ಸ್ಥಳ" ಎಂದು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು "ಚಿಕ್ಕಮಗಳೂರಿಗೆ ಮಳೆಗಾಲದಲ್ಲಿ ಭೇಟಿ ನೀಡುವುದೇ ಸ್ವರ್ಗದ ಅನುಭವ" ಎಂದು ಬರೆದಿದ್ದಾರೆ. ಇನ್ನೊಬ್ಬರು "ಶಾಂತಿಯ ಧಾಮ " ಎಂದು ವರ್ಣಿಸಿದ್ದಾರೆ.
ಆನಂದ್ ಮಹೀಂದ್ರಾ ಅವರ ಸಂಡೇ ವಂಡರರ್
ಆನಂದ್ ಮಹೀಂದ್ರಾ ಅವರು ತಮ್ಮ ಪೋಸ್ಟ್‌ನಲ್ಲಿ #SundayWanderer ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ. ಇದು ಅವರ ಪ್ರಯಾಣ ಮತ್ತು ಪ್ರಕೃತಿ ಪ್ರೀತಿಯನ್ನು ಸೂಚಿಸುತ್ತದೆ. ಅವರು ಚಿತ್ರವನ್ನು @TAdventurousoul ಎಂಬ ಖಾತೆಯಿಂದ ಪಡೆಯಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಅಂದ ಹಾಗೆ, ಮಹೀಂದ್ರಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಆಗಾಗ್ಗೆ ಪ್ರಕೃತಿಯ ಸೌಂದರ್ಯ, ಇತಿಹಾಸ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಪೋಸ್ಟ್ ಮಾಡುತ್ತಾರೆ.