ಬೆಂಗಳೂರಿನ ಕೋರಮಂಗಲದಲ್ಲಿ ಮರದ ಕೊಂಬೆ ಬಿದ್ದು ದ್ವಿಚಕ್ರ ವಾಹನ ಸವಾರ ಸಾವು
ಮೃತನನ್ನು ಮೂಡಲ ಗಿರಿಯಪ್ಪ (48) ಎಂದು ಗುರುತಿಸಲಾಗಿದ್ದು, ಗಾಯಗೊಂಡ ವ್ಯಕ್ತಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಇಬ್ಬರೂ ಆಡುಗೋಡಿಯ ನಿವಾಸಿಗಳಾಗಿದ್ದು, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.;
ಸಾಂದರ್ಭಿಕ ಚಿತ್ರ
ರಾಜಧಾನಿ ಬೆಂಗಳೂರಿನ ಕೋರಮಂಗಲದ ಪ್ರಿಂಟೋ ಜಂಕ್ಷನ್ ಬಳಿಯ 60 ಅಡಿ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ದುರಂತದಲ್ಲಿ ದ್ವಿಚಕ್ರ ವಾಹನ ಸವಾರರ ಮೇಲೆ ಮರದ ಕೊಂಬೆ ಬಿದ್ದು, ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಮೃತರನ್ನು ಮೂಡಲ ಗಿರಿಯಪ್ಪ (48) ಎಂದು ಗುರುತಿಸಲಾಗಿದೆ. ಗಾಯಗೊಂಡವರು ರಮೇಶ್ ಎಂದು ತಿಳಿದುಬಂದಿದೆ. ಇವರಿಬ್ಬರೂ ಆಡುಗೋಡಿಯ ನಿವಾಸಿಗಳಾಗಿದ್ದು, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಮಧ್ಯಾಹ್ನ 2.45ರ ಸುಮಾರಿಗೆ ಗಿರಿಯಪ್ಪ ಮತ್ತು ರಮೇಶ್ ಕೋರಮಂಗಲ 5ನೇ ಬ್ಲಾಕ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮರದ ಕೊಂಬೆ ಗಿರಿಯಪ್ಪ ಅವರ ತಲೆಯ ಮೇಲೆ ಬಿದ್ದ ಪರಿಣಾಮ, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಕ್ಷಣವೇ ಸ್ಥಳೀಯರು ಗಾಯಾಳು ರಮೇಶ್ ಅವರನ್ನು ರಕ್ಷಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಮೇಶ್ ನೀಡಿರುವ ದೂರಿನ ಆಧಾರದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.