Internal Reservation | ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಹಂಚಿಕೆ ; ಮಧ್ಯಂತರ ವರದಿ ಸಲ್ಲಿಸಿದ ನ್ಯಾ. ನಾಗಮೋಹನದಾಸ್ ವಿಚಾರಣಾ ಆಯೋಗ

ಸರ್ಕಾರದ ಬಳಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿ ಆಧಾರದ ಮೇಲೆ ಪರಿಶಿಷ್ಟ ಜಾತಿಗಳಲ್ಲಿ ವೈಜ್ಞಾನಿಕ ಮತ್ತು ತರ್ಕಬದ್ಧ ಒಳ ಮೀಸಲಾತಿ ನೀಡುವ ಬಗ್ಗೆ ಆಯೋಗ ಪರಿಶೀಲನೆ ನಡೆಸಿದೆ.;

Update: 2025-03-27 06:59 GMT

ಪರಿಶಿಷ್ಟ ಜಾತಿಯ ಉಪಜಾತಿಗಳಲ್ಲಿ ಒಳ ಮೀಸಲಾತಿ ಹಂಚಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗ ಗುರುವಾರ (ಮಾ. 27) ತನ್ನ ಮಧ್ಯಂತರ ವರದಿ ಸಲ್ಲಿಸಿತು.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿವೃತ್ತ ನ್ಯಾಯಮೂರ್ತಿ ಎಚ್. ಎನ್ ನಾಗಮೋಹನದಾಸ್ ಅವರು ಹಲವು ಶಿಫಾರಸುಗಳನ್ನು ಒಳಗೊಂಡ ಮಧ್ಯಂತರ ವರದಿಯನ್ನು ಸಲ್ಲಿಸಿದರು. 

ವರದಿ ಸಲ್ಲಿಕೆ ನಂತರ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಅವರು, "ಎರಡು ತಿಂಗಳಿಂದ ವಿವಿಧ ಅಂಶಗಳನ್ನು ಅಧ್ಯಯನ ನಡೆಸಿ, ಸುಮಾರು 104 ಪುಟಗಳ ವರದಿ ನೀಡಿದ್ದೇವೆ. ರಾಜ್ಯ ಸರ್ಕಾರ ಮಧ್ಯಂತರ ವರದಿ ಕೇಳಿರಲಿಲ್ಲ. ಆದರೂ, ಕೆಲ ಶಿಫಾರಸುಗಳನ್ನು ಮಾಡಿ ಮಧ್ಯಂತರ ವರದಿ ನೀಡಿದ್ದೇವೆ. ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆಯೋ ನೋಡೋಣ " ಎಂದು ಹೇಳಿದರು.

" ಸರ್ಕಾರಿ ಉದ್ಯೋಗಕಾಂಕ್ಷಿಗಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗಬಾರದು. ಅವರಿಗೆ ಶಾಶ್ವತವಾದ ಪರಿಹಾರ ಒದಗಿಸಬೇಕು. ಈ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕು. ವರದಿ ಬಗ್ಗೆ ಸರ್ಕಾರ ಏನೂ ಉತ್ತರ ನೀಡಿಲ್ಲ. ನಾವೂ ಕೂಡ ನೇಮಕಾತಿ ಬಗ್ಗೆ ಯಾವುದೇ ಸಲಹೆ ನೀಡಿಲ್ಲ" ಎಂದು ತಿಳಿಸಿದರು. 

ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಪ್ರಾತಿನಿಧ್ಯತೆ ಕಲ್ಪಿಸುವ ಕುರಿತು ಪ್ರಾಯೋಗಿಕ ಅಂಕಿಅಂಶ(ಎಂಫರಿಕಲ್ ಡಾಟಾ) ಪಡೆದು ಒಳಮೀಸಲಾತಿ ಜಾರಿಗೆ ಸೂಕ್ತ ಶಿಫಾರಸು ಮಾಡುವಂತೆ 2024 ನ.14ರಂದು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್  ನೇತೃತ್ವದಲ್ಲಿ ಆಯೋಗ ರಚಿಸಿತ್ತು. 

ಸರ್ಕಾರದ ಬಳಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿ ಆಧಾರದ ಮೇಲೆ ಪರಿಶಿಷ್ಟ ಜಾತಿಗಳಲ್ಲಿ ವೈಜ್ಞಾನಿಕ ಮತ್ತು ತರ್ಕಬದ್ಧ ಒಳ ಮೀಸಲಾತಿ ನೀಡುವ ಬಗ್ಗೆ ಆಯೋಗ ಪರಿಶೀಲನೆ ನಡೆಸಿದೆ. 

ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಯ ಉಪ ಜಾತಿಗಳಲ್ಲಿ ಅತೀ ಹಿಂದುಳಿದವರನ್ನು ಗುರುತಿಸಿ, ದತ್ತಾಂಶ ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ಒಳ ಮೀಸಲಾತಿ ಜಾರಿಗೂ ಮುನ್ನ ಮೀಸಲಾತಿ ಪ್ರಮಾಣ ನಿಗದಿಪಡಿಸುವ ಬಗ್ಗೆ ಪರಿಶೀಲನೆ ನಡೆಸಿದೆ. ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂಬ ಹೆಸರಷ್ಟೇ ರಾಜ್ಯದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿದೆ. ಈ ಮೂರೂ ಹೆಸರುಗಳ ಅಡಿ ಇರುವ ಉಪ ಜಾತಿಗಳ ಹೆಸರು ಮತ್ತು ಅವುಗಳ ಜನಸಂಖ್ಯೆಯ ದತ್ತಾಂಶಗಳ ಸಂಗ್ರಹಿಸಿದ್ದು, ಅಂತಿಮ ವರದಿ ಸಲ್ಲಿಸುವವರೆಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಶಿಫಾರಸ್ಸಿನಲ್ಲಿ ತಿಳಿಸಿದೆ.

ವರದಿ ಸಲ್ಲಿಕೆ ಸಂದರ್ಭದಲ್ಲಿ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪ, ಕೆ. ಎಚ್. ಮುನಿಯಪ್ಪ, ಮಾಜಿ ಸಚಿವ ಎಚ್. ಆಂಜನೇಯ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಇತರರು ಇದ್ದರು.

Similar News