ಮೈಸೂರಲ್ಲಿ ಮುಂಬೈ ಪೊಲೀಸರಿಂದ ಡ್ರಗ್ಸ್ ತಯಾರಿಕೆ ಕಾರ್ಖಾನೆ ಪತ್ತೆ; ರಾಜ್ಯ ಪೊಲೀಸರ ಲೋಪ ಒಪ್ಪಿಕೊಂಡ ಗೃಹ ಸಚಿವ
ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮುಂಬೈ ಪೊಲೀಸರು ದಾಳಿ ಮಾಡಿದ್ದಾರೆ. ಇದು ನಮ್ಮ ಪೊಲೀಸರ ಲೋಪವಾಗಿದ್ದು, ಪ್ರಕರಣದ ಬಗ್ಗೆ ಎಸ್‌ಪಿಗಳಿಗೂ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.;
ಗೃಹ ಸಚಿವ ಡಾ.ಜಿ. ಪರಮೇಶ್ವರ್
ಇಷ್ಟು ದಿನ ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಮಾದಕವಸ್ತು ಜಾಲ ಇದೀಗ ಮೈಸೂರಿನಲ್ಲೂ ತಲೆ ಎತ್ತಿದೆ. ಸಾಂಸ್ಕೃತಿಕ ನಗರಿಯಲ್ಲಿ ಮಾದಕ ವಸ್ತು ತಯಾರಿಕೆ ಕಾರ್ಖಾನೆಯನ್ನು ಮುಂಬೈ ಪೊಲೀಸರು ಬೇಧಿಸಿರುವುದು ಆತಂಕ ಮೂಡಿಸಿದೆ. ಆದರೆ, ಈ ಕಾರ್ಖಾನೆ ಕುರಿತು ರಾಜ್ಯ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲದಿದ್ದ ಸಂಗತಿ ಪೊಲೀಸರ ಲೋಪವನ್ನು ಎತ್ತಿ ತೋರಿಸಿದೆ. ಅಲ್ಲದೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರೇ ಪೊಲೀಸರ ಲೋಪವನ್ನು ಒಪ್ಪಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮುಂಬೈ ಪೊಲೀಸರು ದಾಳಿ ಮಾಡಿದ್ದಾರೆ. ರಾಜ್ಯ ಪೊಲೀಸರ ಲೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಜಿಲ್ಲಾ ಎಸ್‌ಪಿಗಳಿಗೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಮಾದಕವಸ್ತುಗಳನ್ನು ತಯಾರಿಸುತ್ತಿದ್ದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.
ಕಲಾಸಿಪಾಳ್ಯದ ಶೌಚಾಲಯದಲ್ಲಿ ಇತ್ತೀಚೆಗೆ ದೊರೆತ ಸ್ಫೋಟಕಗಳನ್ನು ಕಲ್ಲು ಕ್ವಾರಿಗಳಿಗೆ ಬಳಸಲು ಕೊಂಡೊಯ್ಯುತ್ತಿದ್ದಾಗ ಪೊಲೀಸರನ್ನು ಕಂಡು ಹೆದರಿ ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಅಧಿಕಾರ ಹಂಚಿಕೆ ಮಾತು ಅಪ್ರಸ್ತುತ
ಪ್ರಸ್ತುತ ಸಂದರ್ಭದಲ್ಲಿ ಸಿಎಂ, ಡಿಸಿಎಂ ಹುದ್ದೆಗಳ ಅಧಿಕಾರ ಹಂಚಿಕೆ ವಿಚಾರ, ಸರ್ಕಾರ ಪತನದ ಬಗ್ಗೆ ಮಾತಾನಾಡದಿರುವುದು ಉತ್ತಮ. ಪರಮೇಶ್ವರ್ ಸಿಎಂ ಆಗಲಿ ಎಂಬುದು ಶಾಸಕ ದೇವೇಂದ್ರಪ್ಪ ಅವರ ವೈಯಕ್ತಿಕ ಅಭಿಪ್ರಾಯ. ತಮ್ಮ ಶ್ರಮ ವ್ಯರ್ಥವಾಯಿತು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬಗ್ಗೆ ನಾನು ಮಾತನಾಡುವುದಿಲ್ಲ. ಸಿಎಂ ಸಿದ್ದರಾಮಯ್ಯ ಮಂಗಳವಾರ(ಜು.29) ಸಚಿವರು ಹಾಗೂ ಶಾಸಕರ ಜತೆ ಸಭೆ ನಡೆಸಲಿದ್ದು ಜಿಲ್ಲೆಗಳಲ್ಲಿ ಸಹಕಾರ ಹಾಗೂ ಹೊಂದಾಣಿಕೆ ಕುರಿತು ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈಗಾಗಲೇ ಪಕ್ಷದ ಶಾಸಕರಿಗೆ 50 ಕೋಟಿ ರೂ. ಅನುದಾನ ಕೊಡುವುದಾಗಿ ಸಿಎಂ ಹೇಳಿದ್ದು ಇದರಲ್ಲಿ ಯಾವುದೇ ತಪ್ಪು ಕಾಣಿಸುತ್ತಿಲ್ಲ ಎಂದು ತಿಳಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಸಗೊಬ್ಬರ ಅಭಾವ
ಕೇಂದ್ರ ಸರ್ಕಾರ ಸರಿಯಾದ ಸಮಯಕ್ಕೆ ರಸಗೊಬ್ಬರ ಕೊಟ್ಟರೆ ರಾಜ್ಯದಲ್ಲಿ ಸಮಸ್ಯೆ ಇರುವುದಿಲ್ಲ. ರಾಜ್ಯಕ್ಕೆ ಹಂಚಿಕೆಯಾಗಿರುವ ರಸಗೊಬ್ಬರ ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಅಭಾವ ಆಗಿತ್ತು. ಈ ಸಮಯದಲ್ಲಿ ನಾವು ಹೋಲಿಕೆ ಮಾಡಿ ಮಾತನಾಡುವುದಿಲ್ಲ. ಬಿಜೆಪಿಯವರಿಗೂ ಸಮಸ್ಯೆ ಏನು ಎಂದು ಗೊತ್ತಿದೆ. ತುಮಕೂರು ಜಿಲ್ಲೆಯಲ್ಲಿ ರಸಗೊಬ್ಬರದ ಸಮಸ್ಯೆ ಆಗಿಲ್ಲ ಎಂದು ಹೇಳಿದರು.
ಮಹಾರಾಜರಿಗೆ ಹೋಲಿಕೆ ಸರಿಯಲ್ಲ
ವಿಧಾನಪರಿಷತ್ ಸದಸ್ಯ ಯತೀಂದ್ರ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಹೋಲಿಕೆ ಮಾಡಿದ್ದಾರೆ ಎಂದು ಅನಿಸುತ್ತಿಲ್ಲ. ಸ್ವತಂತ್ರ ಪೂರ್ವದಲ್ಲೇ ಮಹಾರಾಜರು ಅಭಿವೃದ್ಧಿ ಕಡೆ ಗಮನ ಕೊಟ್ಟಿದ್ದರು. ಬಹಳಷ್ಟು ಅಭಿವೃದ್ಧಿ ಮಾಡಿದ್ದ ಅವರು, ಮೀಸಲಾತಿಯನ್ನು ಆಗಿನ ಕಾಲದಲ್ಲೇ ಕೊಟ್ಟಿದ್ದರು. ಮಹಾರಾಜರ ಕೆಲಸಗಳನ್ನು ನಾವು ಬೇರೆ ಯಾರಿಗೂ ಹೋಲಿಕೆ ಮಾಡಲು ಆಗವುದಿಲ್ಲ. ಈ ಕಾಲಘಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಅವರೂ ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ಆದರೆ ಒಂದಕ್ಕೊಂದು ಹೋಲಿಕೆ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅನುದಾನದಲ್ಲಿ ಒಂದಷ್ಟು ಹಣವನ್ನು ಜನಸಮುದಾಯಕ್ಕೆ ಖರ್ಚು ಮಾಡಲು ಹೊರಟರೆ ಅದನ್ನು ನಿಲ್ಲಿಸಲು ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಲೇ ಇರುತ್ತಾರೆ ಎಂದು ಆರೋಪಿಸಿದರು.
ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದಿವೆ ಎನ್ನಲಾದ ಕೊಲೆ ಪ್ರಕರಣಗಳ ವಿಶೇಷ ತನಿಖೆ ನಡೆಸಲು ಎಸ್ಐಟಿ ತಂಡ ಭಾನುವಾರ(ಜು.27) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಧಿಕಾರಿಗಳು ತನಿಖೆ ಮಾಡಿ ವರದಿ ಕೊಡುವವರೆಗೂ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿದರು.