ಒಳ ಮೀಸಲಾತಿ| ಗೊಂದಲ ನಿವಾರಿಸಿ ಜಾತಿ ಪ್ರಮಾಣ ಪತ್ರ ವಿತರಿಸಲು ʼಅಕ್ಸರಾʼ ಸಂಘಟನೆ ಆಗ್ರಹ

ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಮೂರು ಪ್ರವರ್ಗಗಳಾಗಿ ರಚಿಸಿ ಆದೇಶಿಸಿದೆ. ಆದರೆ ಇದುವರೆಗೂ ಕಂದಾಯ ಇಲಾಖೆ ಹೊಸ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಿಲ್ಲ. ಸರ್ಕಾರ ಕೂಡಲೇ ತಹಶೀಲ್ದಾರ್‌ಗಳಿಗೆ ಈ ಕುರಿತು ಆದೇಶಿಸಬೇಕು ಎಂದು ಸಂತೋಷ್‌ ಮರೂರ್‌ ಆಗ್ರಹಿಸಿದ್ದಾರೆ.

Update: 2025-09-29 11:46 GMT
Click the Play button to listen to article

ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದರೂ ಇಲ್ಲಿಯವರೆಗೂ ಹೊಸ ಪ್ರವರ್ಗದಡಿಯಲ್ಲಿ ಜಾತಿ ಪ್ರಮಾಣ ಪತ್ರವನ್ನು ವಿತರಿಸಿಲ್ಲ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿಗಳು ಮತ್ತು ಸಂಶೋಧಕರ ಸಂಘ ʼಅಕ್ಸರಾʼ ರಾಜ್ಯಾಧ್ಯಕ್ಷ ಸಂತೋಷ್‌ ಮರೂರು ಆರೋಪ ಮಾಡಿದ್ದಾರೆ.

ಈ ಕುರಿತು ಸಮಾಜಕಲ್ಯಾಣ ಇಲಾಖೆ ಸಚಿವ ಎಚ್‌.ಸಿ. ಮಹದೇವಪ್ಪ ಅವರಿಗೆ ಪತ್ರ ಬರೆದಿರುವ ಅವರು, ಸರ್ಕಾರ ಒಳ ಮೀಸಲಾತಿ ನೀಡಿ ಆದೇಶಿಸಿರುವುದಕ್ಕೆ ವಿದ್ಯಾರ್ಥಿಗಳ ಪರವಾಗಿ ಸ್ವಾಗತಿಸುತ್ತೇವೆ. ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಮೂರು ಪ್ರವರ್ಗಗಳಾಗಿ ರಚಿಸಿ ಆದೇಶಿಸಿದೆ. ಆದರೆ ಇದುವರೆಗೂ ಕಂದಾಯ ಇಲಾಖೆ ಹೊಸ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ತಹಶೀಲ್ದಾರ್‌ಗಳಿಗೆ ಈ ಕುರಿತು ಆದೇಶಿಸಬೇಕು ಎಂದಿದ್ದಾರೆ.

ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ), ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ), ಶಿಕ್ಷಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆಗಳು ನೇಮಕಾತಿ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿವೆ. ಆದರೆ, ಇದುವರೆಗೂ ಕಂದಾಯ ಇಲಾಖೆಯ ನಾಡಕಚೇರಿಗಳಲ್ಲಿ ಇದಕ್ಕಾಗಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿಲ್ಲ ಹಾಗೂ ಉನ್ನತಿಕರಿಸಿಲ್ಲ. ಆದ್ದರಿಂದ ಶೀಘ್ರದಲ್ಲೇ ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಗೊಂದಲಕ್ಕೆ ಅವಕಾಶ ಕೊಡದಂತೆ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದ್ದಾರೆ.

ಕೆಇಎ ಅಧಿಸೂಚನೆ ಹೊರಡಿಸಲಿರುವ ಹುದ್ದೆಗಳು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಥಮ ದರ್ಜೆ ಲೆಕ್ಕಸಹಾಯಕರು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು 25 ಹುದ್ದೆ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್‌)ನಲ್ಲಿ 38 ಹುದ್ದೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಸಹಾಯಕ ಲೆಕ್ಕಿಗ ಹಾಗೂ ನಿರ್ವಾಹಕರ ಹುದ್ದೆಗೆ 315 ಹುದ್ದೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 52 ಹುದ್ದೆ, ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ 44 ಹುದ್ದೆ, ಕೃಷಿ ಮಾರುಕಟ್ಟೆಯಲ್ಲಿ 180 ಹುದ್ದೆ, ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಎಫ್‌ಡಿಎ ಹಾಗೂ ಎಸ್‌ಡಿಎ 93 ಹುದ್ದೆ, ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು 247 ಹುದ್ದೆ ಸೇರಿದಂತೆ ಒಟ್ಟು 994 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿದೆ.

ಅಧಿಸೂಚನೆಗೆ ಸಿದ್ಧವಿರುವ ಹುದ್ದೆಗಳು

ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಹಲವು ಇಲಾಖೆಗಳು ಸಿದ್ದತೆ ನಡೆಸಿವೆ. ಪದವಿ ಪೂರ್ವ ಕಾಲೇಜಿನ 804 ಉಪನ್ಯಾಸಕ ಹುದ್ದೆಗಳು, 2,000 ತಾಂತ್ರಿಕ ಕಾಲೇಜಿನ ಉಪನ್ಯಾಸಕ ಹುದ್ದೆಗಳು, ವಸತಿ ಶಾಲೆಯಲ್ಲಿ 875 ಹುದ್ದೆಗಳು, ಅಬಕಾರಿ ಇಲಾಖೆಯ 268 ಉಪ ನಿರೀಕ್ಷಕರು, 677 ಅಬಕಾರಿ ಪೇದೆ, 16,000 ಶಿಕ್ಷಕರು, 600 ಪೊಲೀಸ್ ಇನ್​ಸ್ಪೆಕ್ಟರ್, 4,000ಕ್ಕೂ ಹೆಚ್ಚು ಪೊಲೀಸ್ ಪೇದೆ, ವಿವಿಧ ಇಲಾಖೆಗಳಲ್ಲಿ 1,000ಕ್ಕೂ ಹೆಚ್ಚು ಎಫ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದು ಅಧಿಸೂಚನೆಗೆ ಸಿದ್ದವಾಗಿದ್ದು, ಅಧಿಸೂಚನೆ ಹೊರಡಿಸುವುದು ಮಾತ್ರ ಬಾಕಿ ಇದೆ.

ಖಾಲಿ ಇರುವ ಹುದ್ದೆಗಳು

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 7,69,981 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 5,11,272 ಹುದ್ದೆಗಳು ಭರ್ತಿಯಾಗಿವೆ. ಉಳಿದ 2,58,709 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಪ್ರಮುಖವಾಗಿ ಶಿಕ್ಷಣ ಇಲಾಖೆಯಲ್ಲಿ 58,298, ಒಳಾಡಳಿತ ಇಲಾಖೆಯಲ್ಲಿ 26,168, ಕಂದಾಯ ಇಲಾಖೆಯಲ್ಲಿ 11,145, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 10,898, ಸಹಕಾರ ಇಲಾಖೆಯಲ್ಲಿ 4,855 , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,334 , ಉನ್ನತ ಶಿಕ್ಷಣ ಇಲಾಖೆಯಲ್ಲಿ13,227, ಗೃಹ ಇಲಾಖೆಯಲ್ಲಿ 20,000 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ 6,191 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರವೇ ಬಜೆಟ್‌ ಅಧಿವೇಶನದಲ್ಲಿ ತಿಳಿಸಿತ್ತು.

ಸರ್ಕಾರಕ್ಕೆ ʼಅಕ್ಸರಾʼ ಒಕ್ಕೂಟದ ಬೇಡಿಕೆಗಳು

1.ಶೀಘ್ರವೇ ಪರಿಷ್ಕೃತ ಜಾತಿ ಪ್ರಮಾಣಪತ್ರಗಳನ್ನು ನೀಡುವಂತೆ ರಾಜ್ಯ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಸ್ಪಷ್ಟವಾದ ಆದೇಶವನ್ನು ನೀಡಬೇಕು.

2.ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಗಳ ಒಳ ಪಂಗಡಗಳಲ್ಲಿ ಗೊಂದಲವಿದೆ. ಆದ್ದರಿಂದ ರಾಜ್ಯ ಸರ್ಕಾರ ಪ್ರವರ್ಗಗಳಲ್ಲಿ ಯಾವುದೇ ಗೊಂದಲವಿಲ್ಲದಂತೆ ಸೂಕ್ತ ಮಾರ್ಗಸೂಚಿ ಹೊರಡಿಸಬೇಕು.

3.ಜಾತಿ ಪ್ರಮಾಣ ಪತ್ರ ವಿತರಿಸಲು ವಿಳಂಬವಾಗುತ್ತಿದ್ದು, ವಿದ್ಯಾರ್ಥಿಗಳಿಂದ ಬರುವ ದೂರುಗಳಿಗೆ ಸ್ಪಂದಿಸಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯವಾಣಿ ಅಥವಾ ವಿಶೇಷ ಕೋಶವನ್ನು ರಚಿಸಬೇಕು

4.ಜಾತಿ ಪ್ರಮಾಣಪತ್ರಕ್ಕೆ ಸಲ್ಲಿಸಿದ ಅರ್ಜಿಯ ಸ್ವೀಕೃತಿ ರಶೀದಿಯನ್ನು ತಾತ್ಕಾಲಿಕ ದಾಖಲೆಯಾಗಿ ಪರಿಗಣಿಸಲು ಕೆಇಎ, ಕೆಪಿಎಸ್‌ಸಿ ಮತ್ತು ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವಂತೆ ನಾವು ವಿನಂತಿಸುತ್ತೇವೆ, ಅಂತಿಮವಾಗಿ ದಾಖಲೆ ಪರಿಶೀಲನೆ ಹಂತದಲ್ಲಿ ಮೂಲ ಪ್ರಮಾಣಪತ್ರವನ್ನು ಹಾಜರುಪಡಿಸಲಾಗುವುದಕ್ಕೆ ಅವಕಾಶ ನೀಡಬೇಕು.

Tags:    

Similar News