ಜ್ವರ, ಉಸಿರಾಟದ ಸಮಸ್ಯೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ತಜ್ಞ ವೈದ್ಯರ ತಂಡವು ಖರ್ಗೆ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದೆ.

Update: 2025-10-01 03:56 GMT

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮತ್ತು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರನ್ನು ಮಂಗಳವಾರ ತಡರಾತ್ರಿ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ತಜ್ಞ ವೈದ್ಯರ ತಂಡವು ಖರ್ಗೆ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದ್ದು, ಚಿಕಿತ್ಸೆ ಮುಂದುವರಿಸಿದೆ. ಕಳೆದ ಕೆಲವು ದಿನಗಳಿಂದ ನಿರಂತರ ರಾಜಕೀಯ ಚಟುವಟಿಕೆಗಳು ಮತ್ತು ಸಭೆಗಳಲ್ಲಿ ಭಾಗವಹಿಸಿದ್ದರಿಂದ ಬಳಲಿದ್ದ ಅವರು, ಅಸ್ವಸ್ಥರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಇಂದು (ಬುಧವಾರ) ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಯಾರೂ ಗಾಬರಿಪಡಬೇಕಾಗಿಲ್ಲ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿರುವ ಅವರು ಈಗ ಸಂಪೂರ್ಣವಾಗಿ ಆರಾಮಾಗಿದ್ದು, ವೈದ್ಯರ ಸಲಹೆಯ ಮೇರೆಗೆ ಅವರನ್ನು ಇಂದು ಡಿಸ್ಚಾರ್ಜ್ ಮಾಡಲಾಗುತ್ತಿದೆ. ನಿನ್ನೆ ತಡರಾತ್ರಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತವಾಗಿತ್ತು, ಆದರೆ ಇದೀಗ ಅವರು ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆಯೂ ಕಾಡಿತ್ತು ಅನಾರೋಗ್ಯ

80 ವರ್ಷ ದಾಟಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಬಿಡುವಿಲ್ಲದ ರಾಜಕೀಯ ಕಾರ್ಯಕ್ರಮಗಳ ನಡುವೆ ಈ ಹಿಂದೆಯೂ ಅಸ್ವಸ್ಥರಾಗಿದ್ದ ನಿದರ್ಶನಗಳಿವೆ. ಕೆಲವು ತಿಂಗಳ ಹಿಂದೆ ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡುತ್ತಿದ್ದಾಗಲೇ ಅವರಿಗೆ ತಲೆಸುತ್ತು ಬಂದಿತ್ತು. ಆಯಾಸದಿಂದಾಗಿ ವೇದಿಕೆಯಲ್ಲೇ ಕುಸಿದು ಕುಳಿತಿದ್ದ ಅವರನ್ನು ತಕ್ಷಣವೇ ಉಪಚರಿಸಲಾಗಿತ್ತು. ಆ ಘಟನೆಯು ಅವರ ಆರೋಗ್ಯದ ಬಗ್ಗೆ ಕಳವಳ ಮೂಡಿಸಿತ್ತು.

ದೇಶಾದ್ಯಂತ ನಿರಂತರವಾಗಿ ಪ್ರವಾಸ ಮಾಡುವ ಮತ್ತು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿರುವ ಖರ್ಗೆ ಅವರ ಆರೋಗ್ಯದಲ್ಲಿ ಇದೀಗ ಮತ್ತೆ ಏರುಪೇರಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಶೀಘ್ರ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹಲವು ಕಾಂಗ್ರೆಸ್ ನಾಯಕರು ಹಾಗೂ ಗಣ್ಯರು ಖರ್ಗೆಯವರ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

Tags:    

Similar News