ಕಾಂಗ್ರೆಸ್ ಒಬಿಸಿ ಸಲಹಾಮಂಡಳಿ ಸಭೆ ಅರಂಭ: ಸಿದ್ದರಾಮಯ್ಯ ಆತಿಥ್ಯ; ರಾಷ್ಟ್ರ ನಾಯಕರು ಭಾಗಿ
ದೇಶದಲ್ಲಿ ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಲಂಕಷವಾಗಿ ಚರ್ಚಿಸಿ, ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ರಚಿಸಿರುವ ಕಾಂಗ್ರೆಸ್‌ನ ರಾಷ್ಟ್ರೀಯ ಮಟ್ಟದ ಹಿಂದುಳಿದ ವರ್ಗಗಳ (ಒಬಿಸಿ) ಸಲಹಾ ಮಂಡಳಿಯ ಮೊದಲ ಸಭೆ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಆರಂಭವಾಗಿದೆ.;
ದೇಶದಲ್ಲಿ ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಲಂಕಷವಾಗಿ ಚರ್ಚಿಸಿ, ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ರಚಿಸಿರುವ ಕಾಂಗ್ರೆಸ್‌ನ ರಾಷ್ಟ್ರೀಯ ಮಟ್ಟದ ಹಿಂದುಳಿದ ವರ್ಗಗಳ (ಓಬಿಸಿ) ಸಲಹಾ ಮಂಡಳಿಯ ಮೊದಲ ಸಭೆ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಆರಂಭವಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಅರಂಭವಾಗಿರುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಸಭೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಗೆ ರಾಜ್ಯದ ಪ್ರಮುಖ ಹಿಂದುಳಿದ ವರ್ಗಗಳ ನಾಯಕರಾದ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್, ಎಐಸಿಸಿ ಓಬಿಸಿ ಘಟಕದ ಅಧ್ಯಕ್ಷ ಅನಿಲ್ ಜೈಹಿಂದ್, ಅಶೋಕ್ ಗೆಹ್ಲೋಟ್ ಮತ್ತಿತರ ಪ್ರಮುಖ ನಾಯಕರು ಆಗಮಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ನ ಪ್ರಮುಖ ನೆಲೆಗಟ್ಟಾಗಿರುವ ಹಿಂದುಳಿದ ವರ್ಗಗಳನ್ನು ಬಿಜೆಪಿ ಪಾಳಯ ನಿಧಾನವಾಗಿ ಆವರಿಸುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಸಭೆ ಆಯೋಜನೆಯನ್ನು ಕಾಂಗ್ರೆಸ್‌ನ ಮೂರು ಅಧಿಕಾರಸ್ಥ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ನಡೆಸಲಾಗುತ್ತಿದೆ. ಅಧಿಕಾರಸ್ಥ ಕಾಂಗ್ರೆಸ್ ಮುಖ್ಯಮಂತ್ರಿಗಳಲ್ಲಿ ಒಬಿಸಿ ನಾಯಕರಾಗಿರುವ ಸಿದ್ದರಾಮಯ್ಯ ಅವರೇ ಈ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದಾರೆ.
ಒಬಿಸಿ ಸಲಹಾಮಂಡಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 24 ಮಂದಿ ಸದಸ್ಯರು ಹಾಗೂ 30 ಮಂದಿ ವಿಶೇಷ ಆಹ್ವಾನಿತರಿದ್ದು, ಅವರೆಲ್ಲರೂ ಬೆಂಗಳೂರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 50ಕ್ಕಿಂತ ಹೆಚ್ಚು ನಾಯಕರು ಭಾಗವಹಿಸುತ್ತಿದ್ದಾರೆ. ಮಂಗಳವಾರ ಸಂಜೆಯ ಸಭೆಯ ಬಳಿಕ ಬುಧವಾರ ಬೆಳಗ್ಗೆ ಹೊಟೇಲ್ ಶಾಂಗ್ರಿಲಾದಲ್ಲಿ 10 ಗಂಟೆಗೆ ಸಭೆ ಜರುಗಲಿದೆ.
ಒಬಿಸಿ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಕೇಂದ್ರದ ಜನ ಗಣತಿ ವೇಳೆ ಜಾತಿ ಗಣತಿಯನ್ನು ಹೆಚ್ಚು ಪರಿಣಾಮಕಾರಿಯಾಗುವಂತೆ ಒತ್ತಡ ತರುವ ಬಗ್ಗೆ ಬುಧವಾರದವರೆಗೆ ನಡೆಯಲಿರುವ ಸಲಹಾ ಮಂಡಳಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ಆಗಲಿದೆ. ರಾಷ್ಟ್ರ ಮಟ್ಟದಲ್ಲಿ ಒಬಿಸಿ ವರ್ಗಗಳನ್ನು ತನ್ನ ತೆಕ್ಕೆಯಿಂದ ಜಾರದಂತೆ ನೋಡಿಕೊಳ್ಳುವ ಸಂಬಂಧವೂ ಚರ್ಚೆಗಳಾಗಲಿವೆ. ಜತೆಗೆ ಬಿಜೆಪಿಯ ಒಬಿಸಿ ವರ್ಗಗಳನ್ನು ಓಲೈಸಿ ಕಾಂಗ್ರೆಸ್ ಮತಬ್ಯಾಂಕ್ ಒಡೆಯುವ ಪ್ರಯತ್ನವನ್ನು ಹೇಗೆ ಎದುರಿಸುವುದು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ.
ಸಿದ್ದರಾಮಯ್ಯ ವಿಷಯ ಚರ್ಚೆಗೆ?
ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹಿನ್ನೆಲೆಯಲ್ಲಿ ಸಭೆಯು ಮಹತ್ವ ಪಡೆದುಕೊಂಡಿದೆ. ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಪ್ರಮೇಯವೇ ಇಲ್ಲ ಎಂಬ ಸಂದೇಶವನ್ನು ಇದೇ ಸಭೆಯಲ್ಲಿ ರವಾನಿಸುವ ಕುರಿತು ಪ್ರಮುಖ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಮುಖ್ಯಮಂತ್ರಿ ಗಾದಿಗೆ ಕಾಂಗ್ರೆಸ್‌ನಲ್ಲಿಯೇ ತಿಕ್ಕಾಟ ನಡೆಯುತ್ತಿದೆ. ಇದು ಶಾಸಕರಲ್ಲಿಯೂ ಹಲವು ಗೊಂದಲಗಳಿಗೆ ಕಾರಣವಾಗಿದೆ. ಇದು ಪಕ್ಷದ ಸಂಘಟನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ.
ಕೆಲವು ಪ್ರಮುಖರ ಹೇಳಿಕೆಗಳು ಪಕ್ಷದ ಶಾಸಕರಲ್ಲಿ, ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿಯೂ ಮುಖ್ಯಮಂತ್ರಿ ಬದಲಾವಣೆಯಾಗಲಿದೆಯೇ ಎಂಬ ಗೊಂದಲಗಳಿವೆ. ಇವುಗಳಿಗೆ ತೆರೆ ಎಳೆದು ಪೂರ್ಣ ಅವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ಈ ವಿಚಾರದಲ್ಲಿ ಯಾವುದೇ ಗೊಂದಲಗಳು ಇರಬಾರದು ಎಂಬ ಸಂದೇಶವನ್ನು ಡಿ.ಕೆ.ಶಿವಕುಮಾರ್ ಬಣಕ್ಕೆ ರವಾನಿಸುವ ಪ್ರಮುಖ ಸಭೆಯಾಗಿ ಇದು ಪರಿಣಮಿಸಲಿದೆ ಎನ್ನಲಾಗಿದೆ.
ದೇಶದಲ್ಲಿನ ಹಿಂದುಳಿದ ವರ್ಗಗಳ ಸಮುದಾಯದ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಕಾಂಗ್ರೆಸ್‌ನ ರಾಷ್ಟ್ರಮಟ್ಟದ ಈ ಸಭೆಯನ್ನು ಕರೆಯಲಾಗಿದೆ. ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಕೇವಲ ಮೂರು ರಾಜ್ಯದಲ್ಲಿ ಮಾತ್ರ ಇದೆ. ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಇದೆ. ಅದರಲ್ಲಿಯೂ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಹಿಂದುಳಿದ ನಾಯಕರಿದ್ದಾರೆ. ಸಿದ್ದರಾಮಯ್ಯ ಅವರನ್ನು ಬದಲಿಸಿದರೆ ಹಿಂದುಳಿದ ವರ್ಗಗಳ ಕೆಂಗಣ್ಣಿಗೆ ಕಾಂಗ್ರೆಸ್ ಪಕ್ಷ ತುತ್ತಾಗಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ನಿರ್ದೇಶನ ಮೇರೆಗೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬುದರ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಸಿದ್ದರಾಮಯ್ಯ ಅವರ ವರ್ಚಸ್ಸಿನ ಬಳಕೆಗೆ ಪ್ರಯತ್ನ
ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕರಾಗಿರುವ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಬಳಸಿಕೊಂಡು ದೇಶದಾದ್ಯಂತ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಈ ಮಂಡಳಿ ರಚಿಸಿದೆ. ದೇಶದಾದ್ಯಂತ ಹಿಂದುಳಿದ ವರ್ಗಗಳ ಸಮಸ್ಯೆ, ಸವಾಲುಗಳನ್ನು ಅರಿತು ಸಲಹೆ ನೀಡುವುದರ ಜೊತೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಮಂಡಳಿ ಸಲಹೆಗಳನ್ನು ನೀಡಲಿದೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ರಚನೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಅನುಮೋದಿಸಿದ್ದರು.