'ಆಪರೇಷನ್ ಸಿಂಧೂರ'ದ ಬಗ್ಗೆ ಅಪಸ್ವರ ಎತ್ತಿದ ನಟಿ ಸಂಜನಾ ಗಲ್ರಾನಿ
ಎಲ್ಲವೂ ಶಾಂತ ರೀತಿಯಿಂದ ಶೀಘ್ರವೇ ಅಂತ್ಯವಾಗಲಿದೆ ಎಂಬ ನಿರೀಕ್ಷೆ ನನ್ನದು, ಜೈ ಹಿಂದ್’ ಎಂದು ನಟಿ ಸಂಜನಾ ಗಲ್ರಾನಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.;
ಸಂಜನಾ ಗಲ್ರಾಣಿ
ಆಪರೇಷನ್ ಸಿಂಧೂರ' ಕಾರ್ಯಾಚರಣೆ ಬಗ್ಗೆ ನಟಿ ಸಂಜನಾ ಗಲ್ರಾನಿ ಪೋಸ್ಟ್ ಹಂಚಿಕೊಂಡಿರುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
‘ಯಾವುದೇ ಕ್ರಿಯೆಗೆ ಸಮಾನವಾದ ಅಥವಾ ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ನಾನು ಸಂಪೂರ್ಣ ದೇಶಪ್ರೇಮಿ. ಅದರ ಜೊತೆಗೆ ನಾನು ಶಾಂತಿ ಪ್ರೇಮಿಯೂ ಹೌದು. ಯಾವುದೇ ರೀತಿಯ ಅಂದರೆ ಸಣ್ಣ ಅಥವಾ ಯುದ್ಧ ದೇಶದ ಗೌರವಕ್ಕೆ ಒಳ್ಳೆಯದಲ್ಲ. ಯುದ್ಧವು ಭಾರತದ ಆರ್ಥಿಕತೆಗೆ ಹೊಡೆತ ನೀಡುತ್ತದೆ. ಜನ ಜೀವನ ಸ್ತಬ್ಧಗೊಳ್ಳುತ್ತದೆ. ಯುದ್ಧದಲ್ಲಿ ಪಾಲ್ಗೊಂಡ ದೇಶಗಳಿಗೆ ಆಗುವ ನಷ್ಟ ಅಗಣ್ಯ ಮತ್ತು ಅದರ ಪರಿಹಾರ ಸಾಧ್ಯವೇ ಇಲ್ಲ’. ಎಲ್ಲವೂ ಶಾಂತ ರೀತಿಯಿಂದ ಶೀಘ್ರವೇ ಅಂತ್ಯವಾಗಲಿದೆ ಎಂಬ ನಿರೀಕ್ಷೆ ನನ್ನದು, ಜೈ ಹಿಂದ್’ ಎಂದು ನಟಿ ಸಂಜನಾ ಗಲ್ರಾನಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ನಟಿಯ ಈ ಪೋಸ್ಟ್‌ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಟ್ರೋಲ್ ಕೂಡ ಮಾಡುತ್ತಿದ್ದಾರೆ. "ಶಾಂತಿಯಿಂದ ಇರಬೇಕು ಎಂದು ಹೇಳುವುದು ಸುಲಭ. ಮೊದಲಿಗೆ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದು ಪಾಕ್ ಉಗ್ರರು. ಅದಕ್ಕೆ ಸೇನೆ ತಕ್ಕ ಪ್ರತಿಕ್ರಿಯೆ ನೀಡಿದೆಯಷ್ಟೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಭಾರತ ಸೇನೆ ದಾಳಿ ಮಾಡಿರುವುದು ಉಗ್ರನೆಲೆಗಳ ಮೇಲೆ ಮಾತ್ರ, ಆದರೆ ಅವರು ಅಮಾಯಕ ಜನರನ್ನು ಟಾರ್ಗೆಟ್ ಮಾಡಿದ್ದರು" ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ನಟಿ ಸಂಜನಾ, ತೆಲುಗಿನ 'ಸೊಗ್ಗಾಡು' ಚಿತ್ರದ ಮೂಲಕ ಎಂಟ್ರಿ ಪಡೆದುಕೊಂಡಿದ್ದರು. ಬಳಿಕ 'ಗಂಡ-ಹೆಂಡತಿ' ಮೂಲಕ ಕನ್ನಡದಲ್ಲಿ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದರು. ಬಳಿಕ 'ಅರ್ಜುನ್', 'ಮಹಾನದಿ', 'ಅಗ್ರಜ', 'ದಂಡುಪಾಳ್ಯ-2' ಸೇರಿ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ಕೂಡ ಸಂಜನಾ ಗರ್ಲಾನಿ ನಟಿಸಿದ್ದಾರೆ. 2021ರಲ್ಲಿ ವೈದ್ಯ ಅಜೀಜ್ ಪಾಷಾ ಅವರನ್ನು ಸಂಜನಾ ಮದುವೆ ಆಗಿದ್ದರು. sಒಂದು ಗಂಡು ಮಗುವಿನ ತಾಯಿಯಾಗಿರುವ ಆಕೆ ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.