Bangalore Stampede| ಅಧಿಕಾರಿಗಳ ತಲೆದಂಡಕ್ಕೆ ನಟಿ ರಮ್ಯಾ ತೀವ್ರ ಅಸಮಾಧಾನ

[ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿದ ನಿರ್ಧಾರವು ಯೋಚಿಸದೇ ತೆಗೆದುಕೊಂಡ ಕ್ರಮದಂತೆ ಕಾಣುತ್ತಿದೆ. ಮೊದಲು ತನಿಖಾ ವರದಿಗಾಗಿ ಕಾಯಬೇಕಿತ್ತು ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.;

Update: 2025-06-07 06:32 GMT

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ನಟಿ ರಮ್ಯಾ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಅಧಿಕಾರಿಗಳನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್‌ನ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು ಘಟನೆಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. 

ನಟಿ ರಮ್ಯಾ ಹೇಳಿದ್ದೇನು?

‘ಆರ್‌ಸಿಬಿ ಗೆಲುವು ಸಾಧಿಸಿದ ರಾತ್ರಿ ರಾಜ್ಯಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಮಾಲ್‌ಗಳು ಹಾಗೂ ಬೀದಿಗಳಲ್ಲಿ ಜನರು ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಆಗ ಒಂದೇ ಒಂದು ಅಹಿತಕರ ಘಟನೆಯೂ ನಡೆದಿರಲಿಲ್ಲ. ಕಾಲ್ತುಳಿತ ಸುಮ್ಮನೆ ಸಂಭವಿಸಿಲ್ಲ. ಅದನ್ನು ಸೃಷ್ಟಿ ಮಾಡಲಾಗುತ್ತದೆ. ರಾಜ್ಯ ಸರ್ಕಾರ, ಅಧಿಕಾರಿಗಳು, ಆರ್​ಸಿಬಿ, ಪೊಲೀಸರು, ಕೆಎಸ್‌ಸಿಎ ಮತ್ತು ಸಾರ್ವಜನಿಕರ ಸಾಮೂಹಿಕ ವೈಫಲ್ಯದಿಂದ ಕಾಲ್ತುಳಿತ ದುರಂತ ಸಂಭವಿಸಿದೆʼ ಎಂದು ರಮ್ಯಾ ಹೇಳಿದ್ದಾರೆ.

‘ಗೆಲುವನ್ನು ಸಂಭ್ರಮಿಸಲು ಬಂದ ಮುಗ್ಧರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಈ ಸಾವಿಗೆ ಕಾರಣ ಪತ್ತೆ ಮಾಡಿ, ನ್ಯಾಯ ಒದಗಿಸಲು ಪ್ರಾಮಾಣಿಕ ಆತ್ಮಾವಲೋಕನ ಅಗತ್ಯವಿದೆ. ಇಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಿದ ನಿರ್ಧಾರವು ಯೋಚಿಸದೇ ತೆಗೆದುಕೊಂಡ ಕ್ರಮದಂತೆ ಕಾಣುತ್ತದೆ. ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವ ಮೊದಲು ತನಿಖಾ ವರದಿಗಾಗಿ ಕಾಯಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ. 

‘ಸಂಭ್ರಮಾಚರಣೆಗೆ ಬಂದ ಎಲ್ಲರಿಗೂ ಒಳ್ಳೆಯ ಉದ್ದೇಶವೇ ಇತ್ತು. ಆದರೆ, ಯೋಜನೆ ಇಲ್ಲದೆ, ಸಮನ್ವಯದ ಕೊರತೆಯಿಂದ ಇಂತಹ ದುರ್ಘಟನೆ ಸಂಭವಿಸಿದೆ. ಆಟಗಾರನ್ನು ಒಂದೇ ಸ್ಥಳದಲ್ಲಿ ಸೇರಿಸುವ ಬದಲು ತೆರೆದ ವಾಹನದಲ್ಲಿ ರ‍್ಯಾಲಿ ಮಾಡಿದ್ದರೆ ಕಾಲ್ತುಳಿತ ತಪ್ಪಿಸಬಹುದಿತ್ತು’ ಎಂದು ರಮ್ಯಾ ಹೇಳಿದ್ದಾರೆ.

Tags:    

Similar News