Ragini Dwivedi | ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ನಿರ್ದೋಷಿ ಎಂದ ನ್ಯಾಯಾಲಯ
Ragini Dwivedi| ಡ್ರಗ್ ಪ್ರಕರಣದಲ್ಲಿ 2ನೇ ಆರೋಪಿ ಆಗಿದ್ದ ನಟಿ ರಾಗಿಣಿ ದ್ವಿವೇದಿ ಹಾಗೂ 4ನೇ ಆರೋಪಿ ಪ್ರಶಾಂತ್ ರಂಕ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ.ಹೇಮಂತ್ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.;
ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ (Ragini Dwivedi) ಮೇಲಿದ್ದ ಡ್ರಗ್ಸ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಭೌತಿಕ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಎಲ್ಲ ಪ್ರಕ್ರಿಯೆ ರದ್ದುಪಡಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ.
ಡ್ರಗ್ ಪ್ರಕರಣದಲ್ಲಿ 2ನೇ ಆರೋಪಿ ಆಗಿದ್ದ ನಟಿ ರಾಗಿಣಿ ದ್ವಿವೇದಿ ಅಲಿಯಾಸ್ ಗಿಣಿ ಅಲಿಯಾಸ್ ರಾಗ್ಸ್ ಹಾಗೂ 4ನೇ ಆರೋಪಿ ಪ್ರಶಾಂತ್ ರಂಕ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ.ಹೇಮಂತ್ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಪ್ರಶಾಂತ್ ರಂಕ ವಿರುದ್ಧದ ಪ್ರಕರಣವನ್ನೂ ನ್ಯಾಯಾಲಯ ರದ್ದುಪಡಿಸಿದೆ. ಕಳೆದ ಜೂನ್‌ನಲ್ಲಿ ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿತ್ತು.
ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಜಿ.ವೀರಣ್ಣ ತಿಗಡಿ ಮತ್ತು ಅರ್ಜಿದಾರರ ಪರವಾಗಿ ವಕೀಲ ಎ.ಮಹಮ್ಮದ್ ತಾಹೀರ್ ಮತ್ತು ವಿ.ಭರತ್ ಕುಮಾರ್ ವಾದಿಸಿದ್ದರು. 'ಸಹ ಆರೋಪಿಗಳ ಹೇಳಿಕೆ ಮತ್ತು ಆರೋಪ ಪಟ್ಟಿಯಲ್ಲಿನ ಸಾಕ್ಷಿಗಳನ್ನು ಹೊರತುಪಡಿಸಿ, ನಟಿ ರಾಗಿಣಿ ದ್ವಿವೇದಿ ಮತ್ತು ಪ್ರಶಾಂತ್ ರಂಕ ಮೋಜು ಕೂಟಗಳನ್ನು ಆಯೋಜಿಸಿದ್ದರು ಅಥವಾ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದರು ಎಂಬ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಯಾವುದೇ ಭೌತಿಕ ಸಾಕ್ಷ್ಯಗಳನ್ನು ಸಲ್ಲಿಸಿಲ್ಲ' ಎಂದು ಹೈಕೋರ್ಟ್ ತಿಳಿಸಿದೆ. ಹೀಗಾಗಿ 'ಸ್ಯಾಂಡಲ್‌ವುಡ್ ಡ್ರಗ್' ಪ್ರಕರಣದಿಂದ ಉದ್ಭವಿಸಿದ್ದ ಎಲ್ಲ ಪ್ರಕ್ರಿಯೆಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
'ಪ್ರಕರಣಕ್ಕೆ ಸಂಬಂಧಿಸಿ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಭೌತಿಕ ಸಾಕ್ಷ್ಯಾಧಾರ ಸಲ್ಲಿಸಿಲ್ಲ. ಸಹ ಆರೋಪಿಯ ಸ್ವಯಂ ಹೇಳಿಕೆ ಮತ್ತು ಆರೋಪ ಪಟ್ಟಿಯಲ್ಲಿನ ಸಾಕ್ಷಿಯನ್ನು ಪ್ರಾಸಿಕ್ಯೂಷನ್ ಆಧರಿಸಿದೆ. ಹೀಗಾಗಿ, ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗುತ್ತದೆ' ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಏನಿದು ನಟಿ ರಾಗಿಣಿ ವಿರುದ್ಧದ ಪ್ರಕರಣ?
ನಟಿ ರಾಗಿಣಿ ಹಾಗೂ ಇತರರು ಬೆಂಗಳೂರಿನ ವಿವಿಧ ಕಡೆಗಳಲ್ಲಿ ಪಾರ್ಟಿ ಆಯೋಜಿಸಿ, ಡ್ರಗ್ ಪೆಡ್ಲರ್‌ಗಳ ಮೂಲಕ ಅಲ್ಲಿಗೆ ಬರುವ ಉದ್ಯಮಿಗಳು, ನಟ-ನಟಿಯರು, ಸಾಫ್ಟ್‌ವೇರ್ ಉದ್ಯೋಗಿಗಳು ಸೇರಿ ಇತರರಿಗೆ ಮಾದಕ ವಸ್ತುಗಳನ್ನು ಪೂರೈಸಿದ್ದಾರೆ. ಈ ಮೂಲಕ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ ಎಂದು ಸಿಸಿಬಿಯ ಎಸಿಪಿ ಕೆ.ಸಿ.ಗೌತಮ್ ಅವರು ಕಾಟನ್ ಪೇಟೆ ಠಾಣೆಯಲ್ಲಿ 2020ರ ಸೆ.4ರಂದು ಪ್ರಕರಣ ದಾಖಲಿಸಿದ್ದರು. ಶಿವಪ್ರಕಾಶ್, ರಾಗಿಣಿ ದ್ವಿವೇದಿ, ವೀರೇನ್ ಖನ್ನಾ, ಪ್ರಶಾಂತ್ ರಂಕ, ವೈಭವ್ ಜೈನ್, ಆದಿತ್ಯ ಆಳ್ವ, ಲೂಮ್ ಪೆಪ್ಪರ್, ಪ್ರಶಾಂತ್ ರಾಜು, ಅಶ್ವಿನ್, ಅಭಿಸ್ವಾಮಿ, ರಾಹುಲ್ ತೋನ್ಸೆ ಮತ್ತು ವಿನಯ್ ವಿರುದ್ಧ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಷೇಧ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.