ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದು ಯುವಕನ ಆತ್ಮಹತ್ಯೆ ಯತ್ನ
ಮೆಟ್ರೋ ಸಿಬ್ಬಂದಿ ಹಳಿಯಲ್ಲಿ ಬಿದ್ದಿದ್ದ ಜಯಂತನನ್ನು ಸುರಕ್ಷಿತವಾಗಿ ಎತ್ತಿ ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು.
ನಮ್ಮ ಮೆಟ್ರೋ
ನಗರದ ಹೃದಯಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ಮೆಟ್ರೋ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಯುವಕನೊಬ್ಬ ಚಲಿಸುತ್ತಿದ್ದ ರೈಲಿನ ಮುಂದೆ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರೈಲು ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ಮಧ್ಯಾಹ್ನ 3:19ರ ಸುಮಾರಿಗೆ, ಹಸಿರು ಮಾರ್ಗದ (ಮಾದಾವರ-ರೇಷ್ಮೆ ಸಂಸ್ಥೆ) ಪ್ಲಾಟ್‌ಫಾರ್ಮ್ 3ರಲ್ಲಿ ಈ ಘಟನೆ ಸಂಭವಿಸಿದೆ. ಜಯಂತ್ ಎಂಬ ಯುವಕ, ರೈಲು ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆಯೇ ಏಕಾಏಕಿ ಹಳಿಗಳ ಮೇಲೆ ಜಿಗಿದಿದ್ದಾನೆ. ಇದನ್ನು ಗಮನಿಸಿದ ಮೆಟ್ರೋ ರೈಲು ಚಾಲಕ (ಆಪರೇಟರ್) ತಕ್ಷಣವೇ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಮೆಟ್ರೋ ಸಿಬ್ಬಂದಿ, ಹಳಿಯಲ್ಲಿ ಬಿದ್ದಿದ್ದ ಜಯಂತನನ್ನು ಸುರಕ್ಷಿತವಾಗಿ ಮೇಲೆತ್ತಿ, ಪ್ರಥಮ ಚಿಕಿತ್ಸೆ ನೀಡಿ, ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಈ ಕೃತ್ಯಕ್ಕೆ ಮುಂದಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಘಟನೆಯಿಂದಾಗಿ ಮೆಜೆಸ್ಟಿಕ್ ನಿಲ್ದಾಣದ ಮೂರನೇ ಪ್ಲಾಟ್‌ಫಾರ್ಮ್‌ನಲ್ಲಿ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಹಸಿರು ಮಾರ್ಗದಲ್ಲಿ ಸ್ವಲ್ಪ ಸಮಯದವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.