ಗ್ರಾಮೀಣ ಮಕ್ಕಳಿಗಾಗಿ ಕನ್ನಡದ ಯುವ ಬರಹಗಾರನ ʻಭೀಮಶಾಲೆʼ ಪ್ರಯೋಗ …

ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಪಠ್ಯ – ಪುಸ್ತಕದ ಹೊರತಾದ ಕಲೆಗಳಿಂದ ಇಂದಿಗೂ ವಂಚಿತರಾಗಿದ್ದಾರೆ. ಅವಕಾಶ ವಂಚಿತ ಮಕ್ಕಳಿಗಾಗಿಯೇ ಭೀಮಶಾಲೆ ಎನ್ನುವ ಪರಿಕಲ್ಪನೆ ಶುರುವಾಗಿದೆ. ಇಷ್ಟಕ್ಕೂ ಈ ಭೀಮಶಾಲೆ ಎಂದರೇನು, ಗ್ರಾಮೀಣ ಮಕ್ಕಳು ಇದರಿಂದ ಕಲಿಯುತ್ತಿರುವುದೇನು ಎನ್ನುವ ವಿವರ ಈ ಲೇಖನದಲ್ಲಿದೆ.

By :  Hitesh Y
Update: 2024-06-11 11:24 GMT
ನವೀನ್‌ ತೇಜಸ್ವಿ ಅವರ ಭೀಮಶಾಲೆ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ಶಿವಮೊಗ್ಗದ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದ  ಕನ್ನಡದ ಯುವ ಬರಹಗಾರ ನವೀನ್ ತೇಜಸ್ವಿ ಅವರು ತಮಟೆ ಸೇರಿದಂತೆ ವಿವಿಧ ಕಲೆಗಳ ಕ್ರಾಂತಿ ಪ್ರಾರಂಭಿಸಿದ್ದಾರೆ.

ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುವಾಗ ನವೀನ್‌ಗೆ ಹಲವು ಸಮಸ್ಯೆಗಳು ಎದುರಾಗಿದ್ದವಂತೆ ಅದರಲ್ಲಿ ಪಠ್ಯ – ಪುಸ್ತಕದ ಹೊರತಾದ ಕಲೆಗಳು ಹಾಗೂ ಇಂಗ್ಲಿಷ್ ಸೇರಿದಂತೆ ಹಲವು ವಿಷಯಗಳು ಇದ್ದವು. ಅದೇ ಸಮಸ್ಯೆ ನನ್ನ ಹಳ್ಳಿಯ ಮಕ್ಕಳಿಗೂ ಬರಬಾರದು ಎನ್ನುವ ಉದ್ದೇಶದಿಂದ ನವೀನ್ ತೇಜಸ್ವಿ ಅವರು, ಭೀಮಶಾಲೆ ಎನ್ನುವ ಪರಿಕಲ್ಪನೆಯೊಂದಿಗೆ ಹಳ್ಳಿ ಮಕ್ಕಳಿಗೆ ತಮಟೆ ಬಾರಿಸುವುದು ಸೇರಿದಂತೆ ವಿವಿಧ ಕಲೆಗಳನ್ನು ಉಚಿತವಾಗಿ ಹೇಳಿಕೊಡುತ್ತಿದ್ದಾರೆ. 

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಠ್ಯ – ಪುಸ್ತಕದ ಹೊರತಾದ ಕಲೆಗಳಿಂದ ಇಂದಿಗೂ ವಂಚಿತರಾಗಿದ್ದಾರೆ. ಅವಕಾಶ ವಂಚಿತ ಮಕ್ಕಳಿಗಾಗಿಯೇ ಭೀಮಶಾಲೆ ಎನ್ನುವ ಪರಿಕಲ್ಪನೆ ಶುರುವಾಗಿದೆ. ಇಷ್ಟಕ್ಕೂ ಈ ಭೀಮಶಾಲೆ ಎಂದರೇನು, ಗ್ರಾಮೀಣ ಮಕ್ಕಳು ಇದರಿಂದ ಕಲಿಯುತ್ತಿರುವುದೇನು ಎನ್ನುವ ವಿವರ ಈ ಲೇಖನದಲ್ಲಿದೆ.

ನವೀನ್ ತೇಜಸ್ವಿ ಅವರು ಮೂಲತಃ ಶಿವಮೊಗ್ಗದ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದವರು. ಭೀಮಶಾಲೆ ಎನ್ನುವುದು ನವೀನ್ ತೇಜಸ್ವಿ ಅವರ ಕಲ್ಪನೆಯ ಕೂಸು. ಇದಕ್ಕೆ ನವೀನ್ ಅವರ ಗೆಳೆಯರು ಸಹ ಕೈಜೋಡಿಸಿದ್ದು, ಮಕ್ಕಳಿಗೆ ಸಾಮಾನ್ಯ ಇಂಗ್ಲಿಷ್, ಚಿತ್ರಕಲೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ತಮಟೆ, ನೃತ್ಯ ಸೇರಿದಂತೆ ವಿವಿಧ ಕಲೆಗಳನ್ನು ಸಹ ಪರಿಚಯಿಸುವ ಉದ್ದೇಶದಿಂದ ಪ್ರಾರಂಭಿಸಿರುವ ಕಲಾಶಾಲೆಯಾಗಿದ್ದು, ಇದಕ್ಕೆ ಭೀಮಶಾಲೆ ಎಂದು ಹೆಸರಿಡಲಾಗಿದೆ. 

ಅವಕಾಶ ವಂಚಿತ ಹಾಗೂ ಕಲೆಗಳಿಂದ ದೂರು ಉಳಿದಿರುವ ಮಕ್ಕಳಿಗೆ ಕರ್ನಾಟಕದ ಕಲೆಗಳನ್ನು ಪರಿಚಯಿಸಬೇಕು ಎಂದು ಚಿಂತಿಸುವಾಗ ಮೂಡಿದ್ದೇ ಭೀಮಶಾಲೆ ಎನ್ನುವ ಪರಿಕಲ್ಪನೆ. ಏಕೆಂದರೆ ಭೀಮ ಎನ್ನುವ ಹೆಸರಿನಲ್ಲೇ ಶಕ್ತಿ ಇದೆ. ನಗರ ಭಾಗದ ಮಕ್ಕಳಿಗೆ ಹೋಲಿಸಿದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂದಿಗೂ ಅವಕಾಶಗಳಿಂದ ವಂಚಿತರಾಗಿದ್ದಾರೆ. ನನ್ನಹಳ್ಳಿಯ ಮಕ್ಕಳಿಗೆ ಕಲೆಗಳನ್ನು ಪರಿಚಯಿಸಬೇಕು ಎಂದು ನಿರ್ಧರಿಸಿದೆ ಎನ್ನುತ್ತಾರೆ ನವೀನ್.

ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಮೊದಲು ಹೊಸಬಾಳೆ ಗ್ರಾಮದ 25 ಜನ ಮಕ್ಕಳಿಗೆ ತಮಟೆ ಶಿಬಿರವನ್ನು ಆಯೋಜಿಸಲಾಗಿತ್ತು.  ಈ ಮಕ್ಕಳು ತಮಟೆ ಶಿಬಿರದಲ್ಲಿ ಭಾಗವಹಿಸಿ ತಮಟೆ ಬಾರಿಸುವುದನ್ನು ಕಲಿತಿದ್ದಾರೆ. ಊರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿಬಿರದಲ್ಲಿ ತರಬೇತಿ ಪಡೆದ ಮಕ್ಕಳು ತಮಟೆ ಬಾರಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಪ್ರದರ್ಶನ, ಸಿನಿಮಾ ತಯಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಹ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ಇದೀಗ ಹಳ್ಳಿಯಲ್ಲಿ ಗ್ರಂಥಾಲಯ ಪ್ರಾರಂಭಿಸುವುದಕ್ಕೂ ಸಿದ್ಧತೆ ನಡೆದಿದೆ. ವರ್ಷ ಪೂರ್ತಿಯೂ ಮಕ್ಕಳಿಗೆ ವಿವಿಧ ಕಲೆಗಳನ್ನು ಹೇಳಿಕೊಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ.

10ರಿಂದ 15 ವರ್ಷದ 25 ಜನ ಮಕ್ಕಳಿಗೆ ತಮಟೆ ಶಿಬಿರವನ್ನು ಮೊದಲು ಪ್ರಾರಂಭಿಸಲಾಗಿತ್ತು. ಇದರಲ್ಲಿ 8 ಜನ ಹೆಣ್ಣು ಮಕ್ಕಳು ಸಹ ಇದ್ದರು. ತಮಟೆ ಶಿಬಿರಕ್ಕೆ ಗ್ರಾಮದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಾದ ನಂತರ 60 ಜನ ಮಕ್ಕಳಿಗೆ ಕರಕುಶಲ ಕಲೆ ಶಿಬಿರವನ್ನು ಸಹ ಆಯೋಜಿಸಲಾಗಿತ್ತು. 20 ದಿನಗಳ ಕಾಲ ಸ್ಪೋಕನ್ ಇಂಗ್ಲಿಷ್ ಕ್ಲಸ್ ಸಹ ನಡೆಸಲಾಗಿದೆʼ ಎಂದರು. 

ಹೊಸಬಾಳೆ ಗ್ರಾಮದಲ್ಲಿ ಗ್ರಂಥಾಲಯ

ಶಿವಮೊಗ್ಗದ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದಲ್ಲಿ ಗ್ರಂಥಾಲಯವನ್ನು ಪ್ರಾರಂಭಿಸಲಾಗುತ್ತಿದ್ದು, ಗ್ರಂಥಾಲಯದಲ್ಲಿ ಕಂಪ್ಯೂಟರ್‌ಗಳನ್ನು ಅಳವಡಿಸಲು ಸಿದ್ಧತೆ ನಡೆದಿದೆ. ವಾರಾಂತ್ಯದಲ್ಲಿ ವಿವಿಧ ಕಲೆಗಳ ಶಿಬಿರವನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಶಾಲೆಯ ಹೊರತಾಗಿ ಹಾಗೂ ಕಲೆಗನ್ನು ಕಲಿಯಲು ಒಂದು ವೇದಿಕೆ ಬೇಕು ಎನ್ನುವ ಉದ್ದೇಶದಿಂದ ಭೀಮಶಾಲೆಯನ್ನು ಪ್ರಾರಂಭಿಸಲಾಗಿದೆ. ಈ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಹಾಗೂ ಅವಕಾಶ ವಂಚಿತ ಮಕ್ಕಳಿಗೆ ಕಲೆಗಳನ್ನು ಕಲಿಸುವ ಆಶಯವಿದೆ ಎಂದು ನವೀನ್‌ ಅವರ ಮುಂದಿನ ಯೋಜನೆಯ ವಿವರಿಸಿದರು. 

ನಾನು ಬಿ.ಆರ್ ಅಂಬೇಡ್ಕರ್ ಹಾಗೂ ಕುವೆಂಪು ಅವರಿಂದ ಪ್ರೇರಣೆ ಪಡೆದಿದ್ದೇನೆ. ಮೊದಲು ಭೀಮನ ಶಾಲೆ ಮಕ್ಕಳು ಎಂದು ಹೆಸರಿಡಬೇಕು ಎನ್ನುವ ಉದ್ದೇಶ ಕಲ್ಪನೆ ಇತ್ತು. ಇದೀಗ ಭೀಮಶಾಲೆ ಎಂದಾಗಿ ಎನ್ನುತ್ತಾರೆ ನವೀನ್.

ಯೂಟ್ಯೂಬ್ ನೋಡಿ ಹಲವು ವಿಷಯ ಕಲಿತೆ…

ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುವ ಹಂತದಲ್ಲಿ ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಇಂಗ್ಲಿಷ್ ಕಲಿಯುವುದಕ್ಕೆ ನಿತ್ಯ ಒಂದೊಂದು ಇಂಗ್ಲಿಷ್ ಸಿನಿಮಾ ನೋಡುತ್ತಿದೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡು ಹಾಗೂ ಬರೆಯಲು ಪ್ರಾರಂಭಿಸಿದೆ. ಈ ಎಲ್ಲ ಹೊಸ ಆಲೋಚನೆ ಹಾಗೂ ಕನಸುಗಳಿಗೆ ನನಗೆ ಸಹಕಾರಿಯಾಗಿದ್ದು ಯೂಟ್ಯೂಬ್. ಯೂಟ್ಯೂಬ್ ನೋಡಿಯೇ ನಾನು ಹಲವು ವಿಷಯಗಳನ್ನು ಕಲಿತೆ. ಮುಂದೆ ಕಿರುಚಿತ್ರಗಳನ್ನು ಮಾಡಬೇಕು ಎಂದಾಗಲೂ ನಾನು ಯೂಟ್ಯೂಬ್‌ನ ಮೊರೆ ಹೋದೆ, ಇವೆಲ್ಲವನ್ನೂ ಮಾಡಬೇಕಾದರೆ ನಾನು ಬೆಂಗಳೂರಿಗೆ ಬರಬೇಕಾಯಿತು. ಇದಕ್ಕೆ ಮುಖ್ಯ ಕಾರಣ ಹಳ್ಳಿಗಳಲ್ಲಿ ವ್ಯವಸ್ಥಿತ ಸಂಪನ್ಮೂಲಗಳ ಕೊರತೆ ಇರುವುದು. ನಮ್ಮ ಊರಿನ ಮಕ್ಕಳು ಬೆಂಗಳೂರಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ, ಈ ಶಿಬಿರಗಳನ್ನೇ ನಮ್ಮ ಗ್ರಾಮದಲ್ಲಿ ಹೇಳಿಕೊಡುತ್ತಿದ್ದೇವೆ. ಮುಂದೆ ಇನ್ನಷ್ಟು ಊರುಗಳಿಗೆ ಇದನ್ನು ಪರಿಚಯಿಸುವ ಗುರಿ ಇದೆ ಎನ್ನುವುದು ನವೀನ್ ಮಾತು.Full View

ಹೊಸ ತಲೆಮಾರಿನ ವಿದ್ಯಾರ್ಥಿ

ʻನಾನು ಹೊಸ ತಲೆಮಾರಿನ (ಕುಟುಂಬದಲ್ಲಿ ಮೊದಲು ಪದವಿ ಓದಿರುವ ವಿದ್ಯಾರ್ಥಿ) ವಿದ್ಯಾರ್ಥಿ. ಹೀಗಾಗಿ, ಹೊಸ ತಲೆಮಾರಿನ ಸಮಸ್ಯೆಗಳ ಬಗ್ಗೆ ತಿಳಿದಿದೆ ಎನ್ನುತ್ತಾರೆ ನವೀನ್. ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಕುಟುಂಬದಲ್ಲಿ ಮಾರ್ಗದರ್ಶನ ಮಾಡುವವರು ಕಡಿಮೆ ಇರುತ್ತಾರೆ. ಹೀಗಾಗಿ, ನನ್ನ ಹಳ್ಳಿಯ ವಿದ್ಯಾರ್ಥಿಗಳಿಗೂ ಇದೇ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ನಾನು ಕಲಿತ ವಿದ್ಯೆಗಳನ್ನು ನಮ್ಮ ಹಳ್ಳಿಯ ಮಕ್ಕಳಿಗೂ ಹೇಳಿ ಕೊಡುತ್ತಿದ್ದೇನೆ ಎಂದರು.

ಯಾರು ಈ ನವೀನ್ ತೇಜಸ್ವಿ ?

ನವೀನ್‌ ತೇಜಸ್ವಿ ಕನ್ನಡದ ಯುವ ಬರಹಗಾರರಲ್ಲಿ ಒಬ್ಬರು. ಕನ್ನಡ ಕಿರುಚಿತ್ರ ನಿರ್ದೇಶಕ ಹಾಗೂ ಬರಹಗಾರರಾಗಿ ಇವರು ಗುರುತಿಸಿಕೊಂಡಿದ್ದಾರೆ. ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ, ಹಾಗೂ ಇಮಾನ ಎನ್ನುವುದು ಸೇರಿದಂತೆ ವಿವಿಧ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುರಗಿ ಹಾಗೂ ಬಂಗಾರ ಕಡ್ಡಿ ಡೇರೆ ಹೂವು ಎಂಬ ಸಣ್ಣ ಕಥೆಗಳಿಗೆ ಸೃಜನಶೀಲ ಬರಹಕ್ಕಾಗಿ 2024ನೇ ಸಾಲಿನ ಟೊಟೊ ಪ್ರಶಸ್ತಿ ಸಂದಿದೆ. ಇವರು ಬರೆದ ಇಂಗ್ಲಿಷ್ ಪ್ರಬಂಧ ಟ್ರ್ಯಾಕ್ 01ಕ್ಕೆ 2023ನೇ ಸಾಲಿನ ಬಾರ್ಬ್ರ ನಾಯ್ಡು ಪ್ರಶಸ್ತಿ ಸಂದಿದೆ. ಅಲ್ಲದೇ ಈ ಪ್ರಬಂಧವು ಸಂತ ಜೋಸೆಫ್ ವಿಶ್ವವಿದ್ಯಾಲಯದ ಬಿ.ಎ ಇಂಗ್ಲಿಷ್ ಪಠ್ಯದಲ್ಲಿ ಅಳವಡಿಸಿಕೊಳ್ಳಲಾಗಿದೆ. ನವೀನ್ ಅವರ ಕಿರುಚಿತ್ರಗಳು ಭಾರತ, ಅಮೆರಿಕಾ ಹಾಗೂ ರಷ್ಯಾ ಸೇರಿದಂತೆ ವಿವಿಧ ದೇಶಗಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿವೆ. 

Tags:    

Similar News