ನಿಜ್ಜಾರ್ ಹತ್ಯೆ ಪ್ರಕರಣ | ಭಾರತ-ಕೆನಡಾ ರಾಜತಾಂತ್ರಿಕ ಸಂಬಂಧ ಬಿರುಕು: ರಾಜತಾಂತ್ರಿಕರ ಉಚ್ಛಾಟನೆ
ನವದೆಹಲಿಯಲ್ಲಿರುವ ಕೆನಡಾದ ಆರು ಜನ ರಾಜತಾಂತ್ರಿಕರನ್ನು ಉಚ್ಛಾಟಿಸಿದ್ದು, ದೇಶ ಬಿಟ್ಟು ಹೋಗುವಂತೆ ಭಾರತ ತಾಕೀತು ಮಾಡಿದೆ. ಇದಕ್ಕೆ ಪ್ರತಿಕಾರವಾಗಿ ಕೆನಡಾ ಕೂಡ ಟೊರೆಂಟೊದಲ್ಲಿರುವ ಹೈಕಮಿಷನರ್ ಸಂಜಯ್ ವರ್ಮಾ ಸೇರಿ ಆರು ಮಂದಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು ಉಚ್ಛಾಟಿಸಿದೆ
ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣ ಭಾರತ ಹಾಗೂ ಕೆನಡಾದ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಗಂಭೀರ ಪರಿಸ್ಥಿತಿಗೆ ತಳ್ಳಿದೆ.
ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಕೈವಾಡದ ಕುರಿತ ಕೆನಡಾ ಪ್ರಧಾನಿಯ ಆರೋಪ ತಳ್ಳಿಹಾಕಿರುವ ಭಾರತ, ನವದೆಹಲಿಯಲ್ಲಿರುವ ಕೆನಡಾದ ಆರು ಜನ ರಾಜತಾಂತ್ರಿಕರನ್ನು ಉಚ್ಛಾಟಿಸಿದ್ದು, ದೇಶ ಬಿಟ್ಟು ಹೋಗುವಂತೆ ಗಡುವು ನೀಡಿದೆ. ಅಲ್ಲದೇ ಕೆನಡಾದಲ್ಲಿದ್ದ ಹೈಕಮಿಷನರ್ ಸಂಜಯ್ ವರ್ಮಾ ಹಾಗೂ ಕಚೇರಿ ಸಿಬ್ಬಂದಿಯನ್ನು ವಾಪಸ್ ಕರೆಸಲು ನಿರ್ಧರಿಸಿದೆ.
ಸೋಮವಾರ ಕೆನಡಾ ರಾಜತಾಂತ್ರಿಕ ಅಧಿಕಾರಿ ಸ್ಟೀವರ್ಟ್ ವೀಲರ್ಸ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (MEA) ಕರೆಸಿಕೊಂಡು, ತಮ್ಮ ರಾಜತಾಂತ್ರಿಕ ಸಿಬ್ಬಂದಿ ವಿರುದ್ಧದ ಆರೋಪಗಳು ಆಧಾರರಹಿತ ಹಾಗೂ ಸ್ವೀಕಾರಾರ್ಹವಲ್ಲ ಎಂದು ಹೇಳಿ ಎಚ್ಚರಿಕೆ ಸಹ ನೀಡಿದೆ.
ಇನ್ನು ಭಾರತದ ಕ್ರಮಕ್ಕೆ ಪ್ರತಿಕಾರವಾಗಿ ಕೆನಡಾ ಕೂಡ ಟೊರೆಂಟೊದಲ್ಲಿರುವ ಹೈಕಮಿಷನರ್ ಸಂಜಯ್ ವರ್ಮಾ ಸೇರಿ ಆರು ಮಂದಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು ಉಚ್ಛಾಟಿಸಿದೆ ಎಂದ ಕೆನಡಾ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ʼವಾಷಿಂಗ್ಟನ್ ಪೋಸ್ಟ್ʼ ವರದಿ ಮಾಡಿದೆ.
ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಟ್ರುಡೊ
ಭಾರತವು ಸೋಮವಾರ ಕೆನಡಾ ರಾಜತಾಂತ್ರಿಕರಿಗೆ ದೇಶಬಿಟ್ಟು ಹೋಗುವಂತೆ ಸೂಚಿಸಿದ ಕೆಲ ನಿಮಿಷಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ಅಧಿಕಾರಿಗಳ ಕೈವಾಡವಿರುವ ಮಾಹಿತಿ ಹಂಚಿಕೊಂಡರು. ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ಏಜೆಂಟರ ಕೈವಾಡವಿರುವ ವಿಷಯವನ್ನು ಅಮೆರಿಕ ಸೇರಿದಂತೆ ತನ್ನ ಐದು ಪರಮಾಪ್ತ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರಂಭದಿಂದಲೂ ನಿಜ್ಜಾರ್ ಹತ್ಯೆ ಪ್ರಕರಣ ಸಂಬಂಧ ಐದೂ ರಾಷ್ಟ್ರಗಳ ತನಿಖಾ ಸಂಸ್ಥೆಗಳೊಟ್ಟಿಗೆ ಕೆಲಸ ಮಾಡಿದ್ದೇವೆ. ಹತ್ಯೆಗೆ ಸಂಬಂಧಿಸಿದ ವಿಷಯದಲ್ಲಿ ಭಾರತದ ನಡವಳಿಕೆಯನ್ನೂ ಗಮನಿಸಿದ್ದೇವೆ. ನಮ್ಮ ನೆಲದ ಕಾನೂನು ಪಾಲನೆ ವಿಚಾರವಾಗಿ ಐದು ಪರಮಾಪ್ತ ರಾಷ್ಟ್ರಗಳೊಂದಿಗೆ ಕೆಲಸ ಮುಂದುವರಿಸುವುದಾಗಿ ಹೇಳಿದ್ದಾರೆ. ಆದರೆ, ಅಮೆರಿಕದ ವಿದೇಶಾಂಗ ಸಚಿವಾಲಯವು ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಕುರಿತಾಗಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಭಾರತ ಬಹುದೊಡ್ಡ ತಪ್ಪು ಮಾಡಿದೆ; ಟ್ರುಡೊ
ಕೆನಡಿಯನ್ನರು ಅವರ ಸಮುದಾಯವಾಗಲಿ, ಮನೆಗಳಲ್ಲಾಗಲಿ ಹಿಂಸೆ ಒಪ್ಪುವುದಿಲ್ಲ. ಅಂತೆಯೇ ಭಾರತದ ಜೊತೆಗಿನ ಸಂಬಂಧದಲ್ಲಿ ಉದ್ವಿಗ್ನ ಪರಿಸ್ಥಿತಿ ಹೊಂದಲು ನಾವು ಬಯಸುವುದಿಲ್ಲ. ಕೆನಡಾದ ತನಿಖಾ ಸಂಸ್ಥೆಗಳು, ರಾಜತಾಂತ್ರಿಕರು ಮತ್ತು ಪೊಲೀಸರು ಪ್ರಕರಣದ ತನಿಖೆ ಸಂಬಂಧ ಭಾರತ ಸರ್ಕಾರವನ್ನು ಸಂಪರ್ಕಿಸಿದ್ದರು. ದುರದೃಷ್ಟವಶಾತ್ ಭಾರತ ನಮ್ಮೊಂದಿಗೆ ಸಹಕರಿಸಲಿಲ್ಲ. ಬದಲಾಗಿ ನಮ್ಮ ಸರ್ಕಾರದ ವಿರುದ್ಧ ವೈಯಕ್ತಿಕ ದಾಳಿ ಮಾಡಿತು. ಕೆನಡಾದ ತನಿಖಾ ಸಂಸ್ಥೆಗಳ ಸಮಗ್ರತೆ ಪ್ರಶ್ನಿಸಿತು. ಹಾಗಾಗಿ ನಮ್ಮತನ ರಕ್ಷಿಸಿಕೊಳ್ಳಲು ಈ ದುಸ್ಸಾಹಕ್ಕೆ ಕೈ ಹಾಕಬೇಕಾಯಿತು ಎಂದು ಹೇಳಿದ್ದಾರೆ.
ಕೆನಡಿಯನ್ನರ ಮೇಲೆ ದಾಳಿ ಮಾಡಿ, ಅಸುರಕ್ಷಿತ ವಾತಾವರಣ ಸೃಷ್ಟಿಸುವ ಕೆಲಸವನ್ನು ಭಾರತ ಮಾಡಿದೆ. ಹಿಂಸಾಚಾರ ಹಾಗೂ ಹತ್ಯೆಗಾಗಿ ಸಂಘಟಿತ ಅಪರಾಧಕ್ಕೆ ರಾಜತಾಂತ್ರಿಕರನ್ನು ಬಳಸಿಕೊಂಡಿದೆ. ಆ ಮೂಲಕ ಭಾರತ ಬಹು ದೊಡ್ಡ ತಪ್ಪು ಮಾಡಿದೆ ಎಂದು ಹೇಳಲು ಬಯಸುತ್ತೇನೆ ಎಂದು ಟ್ರುಡೊ ಆರೋಪಿಸಿದ್ದಾರೆ.
RCMP ಬಳಿ ಬಲವಾದ ಪುರಾವೆ
ಕೆನಡಾದಲ್ಲಿ ನಿಜ್ಜಾರ್ ಹತ್ಯೆ ಸೇರಿ 12 ಹಿಂಸಾತ್ಮಕ ಕೃತ್ಯಗಳಲ್ಲಿ ಭಾರತದ ರಾಜತಾಂತ್ರಿಕ ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ಆರ್‌ಸಿಎಂಪಿ ಕಮಿಷನ್ ಕಚೇರಿಯಲ್ಲಿ ಬಲವಾದ ಸಾಕ್ಷ್ಯ, ಪುರಾವೆಗಳಿವೆ. ಕಳೆದ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ವೇಳೆ ಈ ಕುರಿತು ಪ್ರಸ್ತಾಪಿಸಿದ್ದೆ. ಸಹಭಾಗಿತ್ವದ ತನಿಖೆಗೆ ಸಮನ್ವಯ ಸಾಧಿಸಲು RCMP ಮತ್ತು ಕೆನಡಾದ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ಪ್ರಯತ್ನಿಸಿದರೂ, ನಮ್ಮ ಪ್ರಸ್ತಾವವನ್ನು ಭಾರತೀಯ ತನಿಖಾ ಸಂಸ್ಥೆಗಳು ತಿರಸ್ಕರಿಸಿವೆ. ಹಾಗಾಗಿ ಅನಿವಾರ್ಯವಾಗಿ ರಾಜತಾಂತ್ರಿಕ ಸಂಬಂಧದಲ್ಲಿ ಅಸಾಧಾರಣ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಅ.19 ರೊಳಗೆ ದೇಶ ಬಿಟ್ಟು ಹೊರಡಿ
ಕೆನಡಾ ಪ್ರಧಾನಿ ಆರೋಪಗಳನ್ನು ತಳ್ಳಿಹಾಕಿರುವ ಭಾರತ, ಕೆನಡಾದ ಹೈಕಮಿಷನರ್ ಪ್ಯಾಟ್ರಿಕ್ ಹೆಬರ್ಟ್, ವಿದೇಶಾಂಗ ವ್ಯವಹಾರಗಳ ಉಸ್ತುವಾರಿ ವೀಲರ್ಸ್ ಸೇರಿದಂತೆ ಆರು ಮಂದಿ ಕೆನಡಾದ ರಾಜತಾಂತ್ರಿಕರನ್ನು ಅ. 19 ರಂದು ರಾತ್ರಿ 11.59 ಕ್ಕೆ ಅಥವಾ ಮೊದಲು ಭಾರತ ತೊರೆಯುವಂತೆ ವಿದೇಶಾಂಗ ವ್ಯವಹಾರಗಳ ಇಲಾಖೆ ಮೂಲಕ ಸೂಚಿಸಿದೆ.
ಕೆನಡಾ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಭಾರತ
ಉಗ್ರವಾದ ಮತ್ತು ಹಿಂಸಾಚಾರದ ವಾತಾವರಣದಲ್ಲಿ ಟ್ರೂಡೊ ಸರ್ಕಾರದ ಕ್ರಮಗಳು ಭಾರತೀಯ ರಾಜತಾಂತ್ರಿಕರು ಮತ್ತು ಇತರ ಅಧಿಕಾರಿಗಳ ಸುರಕ್ಷತೆಗೆ ಅಪಾಯಕಾರಿ ಎನಿಸಿದೆ. ಕೆನಡಾದ ಸರ್ಕಾರದ ಬದ್ಧತೆಯ ಬಗ್ಗೆ ನಮಗೆ ನಂಬಿಕೆಯಿಲ್ಲ. ಆದ್ದರಿಂದ, ಭಾರತವು ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತದ ವಿರುದ್ಧ ಉಗ್ರವಾದ, ಹಿಂಸಾಚಾರ ಮತ್ತು ಪ್ರತ್ಯೇಕತಾವಾದಕ್ಕೆ ಸಹಕಾರ ನೀಡುತ್ತಿರುವ ಟ್ರೂಡೊ ಸರ್ಕಾರದ ವಿರುದ್ಧ ಮುಂದಿನ ಕ್ರಮ ತೆಗೆದುಕೊಳ್ಳುವ ಹಕ್ಕು ನಮಗಿದೆ ಎಂದು ಹೇಳಿದೆ.
ಸಾಕ್ಷ್ಯ ಒದಗಿಸಿದೆ: ಕೆನಡಾ ವಿದೇಶಾಂಗ ಉಸ್ತುವಾರಿ
ಕಳೆದ ಸೆಪ್ಟೆಂಬರ್ನಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ನಿಜ್ಜಾರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್ಗಳ ಸಂಭಾವ್ಯ ಪಾತ್ರದ ಬಗ್ಗೆ ಸಾಕಷ್ಟು ಸಾಕ್ಷ್ಯ ಒದಗಿಸಿದ್ದಾರೆ ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಉಸ್ತುವಾರಿ ತಿಳಿಸಿದ್ದಾರೆ.
ಆದರೆ, ಈ ಹೇಳಿಕೆಯನ್ನು ಭಾರತದ ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. ಸೆಪ್ಟೆಂಬರ್ 2023 ರಲ್ಲಿ ಪ್ರಧಾನಿ ಟ್ರುಡೊ ಅವರ ಆರೋಪ ಹೊರತುಪಡಿಸಿ ಸರ್ಕಾರ ಯಾವುದೇ ಸಾಕ್ಷ್ಯ ಹಂಚಿಕೊಂಡಿಲ್ಲ ಎಂದು ಹೇಳಿದೆ.
ಭಾರತ ವಿರೋಧಿ ಪ್ರತ್ಯೇಕತಾವಾದಿ ಅಜೆಂಡಾ
ಕೆನಡಾ ಪ್ರಧಾನಿ ಜಸ್ಟೀನ್ ಟ್ರೂಡೊ ಸರ್ಕಾರವು ಸಂಕುಚಿತ ರಾಜಕೀಯ ಲಾಭಕ್ಕಾಗಿ ನಿರಂತರವಾಗಿ ಭಾರತ ವಿರೋಧಿ ಪ್ರತ್ಯೇಕತಾವಾದಿ ಕಾರ್ಯಸೂಚಿ ಅನುಸರಿಸುತ್ತಿದೆ ಎಂದು ಭಾರತ ಆರೋಪಿಸಿದೆ.
ಉಗ್ರ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ರಾಜತಾಂತ್ರಿಕರು ಮತ್ತು ಸಮುದಾಯದ ಮುಖಂಡರಿಗೆ ಅನಗತ್ಯ ಕಿರುಕುಳ, ಬೆದರಿಕೆ ಹಾಕುತ್ತಿದೆ. ಅಲ್ಲದೇ ಭಯೋತ್ಪಾದಕರಿಗೆ ಸುರಕ್ಷಿತ ಸ್ಥಳ ಒದಗಿಸಿದೆ. ಭಾರತೀಯ ನಾಯಕರಿಗೆ ಕೊಲೆ ಬೆದರಿಕೆ ಸಹ ಹಾಕುತ್ತಿದೆ ಎಂದು ಎಂಇಎ ಹೇಳಿದೆ.