ಕುಮಾರಸ್ವಾಮಿ, ನಿನಗೆ ಉಪಕಾರ ಸ್ಮರಣೆ ಇಲ್ಲ: ಡಿಕೆಶಿ ಏಕವಚನದಲ್ಲಿ ವಾಗ್ದಾಳಿ
ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರಿಗಳಿಗೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ.
“ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರಿಗಳಿಗೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ, ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ಹಿನ್ನೆಲೆಯಲ್ಲಿ ಬಿಡದಿಯಲ್ಲಿ ಶುಕ್ರವಾರ ಆರಂಭವಾದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಶಿವಕುಮಾರ್ ಅವರು, ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
“ಈ ಪಾದಯಾತ್ರೆ ಮೂಲಕ ನಮಗೆ ಈ ಪವಿತ್ರವಾದ ಜನಾಂದೋಲನವನ್ನು ಹಮ್ಮಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಈ ಪಾದಯಾತ್ರೆ ಹಮ್ಮಿಕೊಳ್ಳದಿದ್ದರೆ, ಜನತಾ ದಳವನ್ನು ಬಿಜೆಪಿ ಜತೆ ವಿಲೀನ ಮಾಡದಿದ್ದರೆ, ನಾವು ಈ ಹೋರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ” ಎಂದು ಲೇವಡಿ ಮಾಡಿದರು.
“ಬಿಜೆಪಿ ಹಾಗೂ ಜೆಡಿಎಸ್ ನವರು ಪಾದಯಾತ್ರೆ ಮೂಲಕ ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿಗೆ ಬಂದಾಗ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಬಿಜೆಪಿ ಅವಧಿಯಲ್ಲಿ ಬೋವಿ ನಿಗಮದಲ್ಲಿ 87 ಕೋಟಿ, ಕೃಷಿ ಮಾರುಕಟ್ಟೆಗಳಲ್ಲಿ 47 ಕೋಟಿ ಅಕ್ರಮ ನಡೆದಿದೆ. ಈ ಹಗರಣ ನಡೆದಾಗ ಯಾರು ಮುಖ್ಯಮಂತ್ರಿ, ಯಾರು ಮಂತ್ರಿ, ಯಾರು ನಿಗಮದ ಅಧ್ಯಕ್ಷರಾಗಿದ್ದರು? ಈ ಬಗ್ಗೆ ನೀವು ಉತ್ತರ ನೀಡಬೇಕು. ನೀವು ಹೇಳದಿದ್ದರೆ ನಾವು ಹೇಳುತ್ತೇವೆ. ನಾವು ಹೇಳಲು ಇನ್ನು ಒಂದು ವಾರಗಳ ಕಾಲಾವಕಾಶವಿದೆ” ಎಂದು ಹೇಳಿದರು.
“ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ಬಿಜೆಪಿಯ ವೀರಯ್ಯ ಅವರು 47 ಕೋಟಿ ರೂ. ನುಂಗಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಆತ ಜೈಲು ಸೇರಿದ್ದಾನೆ. ಬಿಜೆಪಿ ಹಾಗೂ ಜೆಡಿಎಸ್ ನವರು ಈ ಅಕ್ರಮದ ಬಗ್ಗೆ ಯಾಕೆ ಹೋರಾಟ ಮಾಡುತ್ತಿಲ್ಲ? ಈ ಅಕ್ರಮದ ತನಿಖೆಯನ್ನು ಅವರೇ ಯಾಕೆ ತನಿಖೆ ಮಾಡಿಸಲಿಲ್ಲ? ಹೀಗೆ ಅವರ ಕಾಲದಲ್ಲಿ ಆಗಿರುವ ಅಕ್ರಮಗಳ ದೊಡ್ಡ ಪಟ್ಟಿಯೇ ನಮ್ಮ ಬಳಿ ಇವೆ” ಎಂದು ತಿಳಿಸಿದರು.
"ಕುಮಾರಣ್ಣ, ಅಶೋಕಣ್ಣಾ, ವಿಜಯೇಂದ್ರ, ಅಶ್ವತ್ಥ್ ನಾರಾಯಣ, ಸಿ.ಟಿ ರವಿ ನೀವುಗಳು ನಮ್ಮ ಈ ಪ್ರಶ್ನೆಗಳಿಗೆ ಪಾದಯಾತ್ರೆ ವೇಳೆ ಉತ್ತರ ನೀಡಬೇಕು" ಎಂದು ಆಗ್ರಹಿಸಿದರು.
ಹೇ ವಿಜಯೇಂದ್ರ ನಿನಗೆ ಧೈರ್ಯ, ತಾಕತ್ತಿದ್ದರೆ ಪಾದಯಾತ್ರೆಗೆ ಯಾವ ಕಾಂಗ್ರೆಸಿಗ ಕುಮ್ಮಕ್ಕು ಕೊಟ್ಟಿದ್ದಾನೆ ಹೇಳು:
“ಇನ್ನು ವಿಜಯೇಂದ್ರ ನನ್ನ ಮೇಲೆ ಆರೋಪ ಮಾಡುತ್ತಾ, ಈ ಪಾದಯಾತ್ರೆ ಹಿಂದೆ ಕಾಂಗ್ರೆಸ್ಸಿಗರ ಕೈವಾಡವಿದೆ ಎಂದು ಹೇಳಿದ್ದಾನೆ. ಹೇ.. ವಿಜಯೇಂದ್ರ ನಿನಗೆ ತಾಕತ್ತಿದ್ದರೆ, ಧೈರ್ಯವಿದ್ದರೆ ನೀವು ಹೇಳಿದಂತೆ ಕಾಂಗ್ರೆಸ್ ಪಕ್ಷದ ಯಾವನು ಪಾದಯಾತ್ರೆಗೆ ಕುಮ್ಮಕ್ಕು ನೀಡಿದ್ದಾನೆ ಅವನ ಹೆಸರು ಹೇಳು” ಎಂದು ಅಬ್ಬರಿಸಿದರು.
ತನ್ನೊಬ್ಬನ ಅಧಿಕಾರಕ್ಕಾಗಿ ಜೆಡಿಎಸ್ ಪಕ್ಷವನ್ನೇ ತ್ಯಾಗ ಮಾಡಿದ ಕುಮಾರಣ್ಣನಿಗೆ ಸಾಷ್ಟಾಂಗ ನಮಸ್ಕಾರ
“ಕುಮಾರಸ್ವಾಮಿ, ನಿಮ್ಮ ತಂದೆ ಈ ಜಿಲ್ಲೆಗೆ ಬಂದು ನನ್ನ ಕರ್ಮಭೂಮಿ, ಪುಣ್ಯ ಭೂಮಿ ಎಂದು ಹೇಳಿ ಇಡೀ ಕುಟುಂಬ ಅಧಿಕಾರ ಅನುಭವಿಸುವಂತೆ ಮಾಡಿದರು. ನಿಮ್ಮ ತಂದೆ ಈ ಜಿಲ್ಲೆಯಿಂದ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದರು. ನಿಮ್ಮ ಧರ್ಮಪತ್ನಿ ಇದೇ ಜಿಲ್ಲೆಯಲ್ಲಿ ಶಾಸಕರಾದರು. ನೀನು ಈ ಭಾಗದಿಂದ ಸಂಸದನಾಗಿ, ಶಾಸಕನಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದೆ. ಆದರೂ ನಿಮ್ಮ ಪಕ್ಷದ ಬಾವುಟ ಇಲ್ಲದೇ ಈ ಪಾದಯಾತ್ರೆ ಮಾಡುತ್ತಿದ್ದೀರಲ್ಲಾ, ನಿಮಗೆ ಸ್ವಾಭಿಮಾನವೇನಾದರೂ ಇದೆಯೇ” ಎಂದು ಲೇವಡಿ ಮಾಡಿದರು.
“ಕುದುರೆ ಎಷ್ಟೇ ಚೆನ್ನಾಗಿ ರಥ ಓಡಿಸಿದರೂ ಚಾಟಿ ಏಟು ತಪ್ಪುವುದಿಲ್ಲ. ಚುನಾವಣೆಯಲ್ಲಿ ಮೈಸೂರಿನಿಂದ ಕೆಂಗೇರಿವರೆಗೂ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ, ನಿಮ್ಮ ಹೋರಾಟ ನಡೆಯುತ್ತದೆ. ಕೆಲವೆಡೆ ನಾವು ಗೆದ್ದಿದ್ದೇವೆ, ಕೆಲವೆಡೆ ನೀವು ಗೆದ್ದಿದ್ದೀರ. ಲೋಕಸಭೆ ಚುನಾವಣೆಯಲ್ಲಿ ನಾನು ಯಾಮಾರಿದೆ, ನನ್ನ ಲೆಕ್ಕಾಚಾರ ವಿಫಲವಾಗಿ ನೀವು ಗೆದ್ದಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ. ಅವರು ಹೇಳಿರುವ ಪಾಠ ಕಲಿಯುತ್ತೇನೆ. ಕುಮಾರಸ್ವಾಮಿ ಮೊನ್ನೆಯಷ್ಟೇ ಮಾಧ್ಯಮಗಳ ಮುಂದೆ ನೀನು ಏನು ಹೇಳಿದ್ದೆ? ಪಾದಯಾತ್ರೆಗೆ ಬೆಂಬಲವಿಲ್ಲ ಎಂದಿದ್ದೆ. ಆದರೆ ಇಲ್ಲಿಯವರೆಗೂ ಇದು ನನ್ನ ಭೂಮಿ, ಇಲ್ಲಿ ನಾನು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇನೆ, ಬಿಜೆಪಿ ಅಲ್ಲ ಎಂದು ಹೇಳಲು ನಿನಗೆ ಧೈರ್ಯ ಸಾಲುತ್ತಿಲ್ಲ ಅಲ್ಲವೇ ” ಎಂದು ಕಿಡಿ ಕಾರಿದರು.
ನನ್ನ ಕುಟುಂಬದ ಆಸ್ತಿ ಪಟ್ಟಿ ಮಾಡಿರುವ ಕುಮಾರಣ್ಣ, ನಿಮ್ಮ ಕುಟುಂಬದ ಆಸ್ತಿ ಬಗ್ಗೆ ಮಾತಾಡಿ
“ಕುಮಾರಸ್ವಾಮಿ ಅವರೇ, ನೀವು ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ನನ್ನ ಕುಟುಂಬದ ಆಸ್ತಿಯ ಪಟ್ಟಿ ಕೊಟ್ಟಿರುವುದು ನನಗೆ ಗೊತ್ತಿದೆ. ನನ್ನ ಆಸ್ತಿ ಎಷ್ಟಿದೆ, ಸಿದ್ದರಾಮಯ್ಯ ಅವರ ಆಸ್ತಿ ಎಷ್ಟಿದೆ ಅಂತ ಪಟ್ಟಿ ಕೊಟ್ಟಿದ್ದೀರಿ. ಬಹಳ ಸಂತೋಷ, ಇದಕ್ಕೆಲ್ಲಾ ನಾನು ಸಿದ್ಧನಾಗಿದ್ದೇನೆ, ಉತ್ತರ ಕೊಡುತ್ತೇನೆ” ಎಂದು ತಿಳಿಸಿದರು.
“ಕುಮಾರಸ್ವಾಮಿ ಅವರಿಗೆ ಒಂದು ಮಾತು ಕೇಳುತ್ತೇನೆ. ನಿಮ್ಮ ತಂದೆ ಈ ಜಾಗಕ್ಕೆ ಬಂದಾಗ ನಿಮ್ಮ ತಂದೆ ಬಳಿ ಎಷ್ಟು ಆಸ್ತಿ ಇತ್ತು, ಇಲ್ಲಿ ಬಂದ ನಂತರ ಎಷ್ಟು ಜಮೀನು ಪಡೆದುಕೊಂಡಿರಿ? ಯಾರ ಜಮೀನನ್ನು ಪಡೆದುಕೊಂಡಿರಿ? ಈಗ ಎಷ್ಟು ಎಕರೆ ಅಸ್ತಿಯಾಗಿದೆ? ಆ ಆಸ್ತಿಗಳು ಯಾರ ಹೆಸರಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಮತ್ತೆ ಮರಳಿ ನಿಮ್ಮ ಹೆಸರಿಗೆ ಬಂದಿದ್ದು ಹೇಗೆ? ನಿಮ್ಮ ಹಾಗೂ ನಿಮ್ಮ ಕುಟುಂಬದವರದ್ದು ಇಲ್ಲಿ ನೂರಾರು ಎಕರೆ, ಕುಂಬಳಗೋಡು ಬಳಿ 200-250 ಎಕರೆ, ದೊಡ್ಡ ಗುಬ್ಬಿ ಹಾಗೂ ಚಿಕ್ಕ ಗುಬ್ಬಿ, ಬೆಂಗಳೂರು ಉತ್ತರದ ಯಲಹಂಕ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ, ಹಾಸನ, ನೆಲಮಂಗಲದಲ್ಲಿ ಎಷ್ಟು ಆಸ್ತಿ ಇದೆ? ಇವುಗಳ ಮೌಲ್ಯ ಎಷ್ಟು?” ಎಂದು ಪ್ರಶ್ನೆ ಮಾಡಿದರು.
“ನಿಮ್ಮ ಸಹೋದರ ಬಾಲಕೃಷ್ಣ ಗೌಡ ಒಬ್ಬ ಸರ್ಕಾರಿ ಅಧಿಕಾರಿ, ನೀವು ಸಿನಿಮಾ ಪ್ರದರ್ಶಕರು, ಗುತ್ತಿಗೆದಾರರು. ನಿಮ್ಮ ತಂದೆ ಬಳಿ ಜಮೀನು ಇರಲಿಲ್ಲ. ಆದರೂ ಇಷ್ಟು ಆಸ್ತಿ ಎಲ್ಲಿಂದ ಬಂತು? ಹೇಗೆ ಬಂತು ಎಂದು ಹೇಳಿ. ನೀವು ಹೊಲ ಉಳುಮೆ ಮಾಡುತ್ತಿರುವುದು, ವ್ಯಾಪಾರ ಮಾಡುತ್ತಿರುವುದರ ಬಗ್ಗೆ ಮಾತನಾಡಿ. ರಾಜ್ಯದ ಜನರ ಮುಂದೆ ನಿಮ್ಮ ಪ್ರಾಮಾಣಿಕತೆಯನ್ನು ಪ್ರದರ್ಶಿಸಿ” ಎಂದು ಸೆಡ್ಡು ಹೊಡೆದರು.
ನಿಮ್ಮ ಸಹೋದರ, ಶಾಸಕರಿಂದ ಸದನದಲ್ಲಿ ಚರ್ಚೆ ಮಾಡಿಸಿ
“ನನಗೆ ಲುಲುಕುಮಾರ, ಬೇರೆ ತರಹದ ಚಿತ್ರ ತೋರಿಸಿದ್ದೆ ಎಂದು ಟೀಕೆ ಮಾಡುತ್ತೀರಲ್ಲಾ ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಆಹ್ವಾನ ನೀಡಿದೆ. ಆದರೂ ನೀವು ಬರಲಿಲ್ಲ. ಕಳೆದ ಎರಡು ಅಧಿವೇಶನಗಳಲ್ಲೂ ನೀವು ಚರ್ಚೆಗೆ ಬರಲಿಲ್ಲ. ಈಗಲೂ ನಿಮ್ಮ ಸಹೋದರ, ಶಾಸಕರುಗಳ ಬಳಿ ದಾಖಲೆಗಳನ್ನು ಕೊಟ್ಟು ಸದನದಲ್ಲಿ ಚರ್ಚೆ ಮಾಡಲು ಹೇಳಿ. ಎಲ್ಲಾ ಅಂಶಗಳು ಸದನದಲ್ಲಿ ದಾಖಲೆಯಾಗಿ ಉಳಿಯಲಿ” ಎಂದು ಸವಾಲು ಹಾಕಿದರು.
ನಾನು ಮರೆತಿದ್ದ ಹಳೇ ವಿಚಾರ ಮತ್ತೆ ನೆನಪಿಸಿದ್ದೀರಿ
“ನಾನು, ನೀವು ಒಂದಾಗಿ ಸರ್ಕಾರ ಮಾಡಿದಾಗ, ನೀವು ಈ ಹಿಂದೆ ನಿಮ್ಮ ಅಣ್ಣ ಬಾಲಕೃಷ್ಣಗೌಡ ಎಂಬ ಅಧಿಕಾರಿ ಮೂಲಕ ನನ್ನ ತಂಗಿ, ಮಡದಿ, ಸಹೋದರ, ರವಿ ಅವರ ಮೇಲೆ ಕೇಸು ದಾಖಲಿಸಿದ್ದನ್ನು ಮರೆತಿದ್ದೆ. ಚಂದ್ರಪ್ಪ ಅವರಿಂದ ಬಾಲಗಂಗಾಧರನಾಥ ಸ್ವಾಮೀಜಿ ಮೇಲೆ ಯಾವ ರೀತಿ ಕೇಸು ದಾಖಲಿಸಿದ್ದಿರಿ ಎಂಬುದನ್ನು ನಾನು ಮರೆತಿದ್ದೆ. ಆದರೆ ಕಳೆದ ಒಂದು ವರ್ಷದಲ್ಲಿ ಅವುಗಳನ್ನು ನೆನೆಸಿಕೊಳ್ಳುವಂತೆ ಮಾಡಿದ್ದೀರಿ. ಇದಕ್ಕೆಲ್ಲಾ ಉತ್ತರ ಕೊಡಲು, ಚರ್ಚೆ ಮಾಡಲು ಸಿದ್ಧನಾಗಿದ್ದೇನೆ. ಮುಂದಿನ ಅಧಿವೇಶನದಲ್ಲಾದರೂ ಚರ್ಚೆಗೆ ಕಳಿಸಿ. ನಿಮ್ಮ ಅನಿಷ್ಟಗಳು, ನಿಮ್ಮ ಸಹೋದರ ಬಾಲಕೃಷ್ಣಗೌಡನ ಆಸ್ತಿಗಳ ಬಗ್ಗೆ ಚರ್ಚೆ ಮಾಡೋಣ. ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾನೆ ಎಂದು ಬಯಲು ಮಾಡಲು ಸಿದ್ಧನಿದ್ದೇನೆ” ಎಂದು ಗುಡುಗಿದರು.
ಈ ಜಿಲ್ಲೆಯ ಸ್ವಾಭಿಮಾನ ಬಿಟ್ಟುಕೊಡುವುದಿಲ್ಲ
“ಈ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ನಮ್ಮ ಜಿಲ್ಲೆ. ಕೆಂಪೇಗೌಡರು ಹುಟ್ಟಿದ, ಕಟ್ಟಿದ ನಾಡಿನವರು ನಾವು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು, ಬಾಲಗಂಗಾಧರನಾಥ ಸ್ವಾಮಿಗಳು ಇಲ್ಲಿ ಜನಿಸಿದ್ದಾರೆ. ಇಲ್ಲಿನ ಜನ ನಾವುಗಳು ಬೆಂಗಳೂರಿನವರು. ಈ ಭಾಗ ಬೆಂಗಳೂರಿನಿಂದ ಬೆಂಗಳೂರು ಗ್ರಾಮಾಂತರವಾಯಿತು. ಮತ್ತೆ ಬೆಂಗಳೂರು ವಿಭಾಗವಾಗಿದೆ. ನಮ್ಮ ಸ್ವಾಭಿಮಾನ ಬಿಟ್ಟುಕೊಡಲು ಸಾಧ್ಯವಿಲ್ಲ. ನೀವು ಇಲ್ಲಿ ಬಂದು ಜನರ ಮತಗಳ ಆಧಾರದ ಮೇಲೆ ಅಧಿಕಾರ ಮಾಡಿದ್ದೀರಿ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ದೇವೇಗೌಡರು ಪ್ರಧಾನಿಯಾದ ಜಾಗದಲ್ಲೇ ಸಿಎಂ. ಲಿಂಗಪ್ಪನವರು ಗೆದ್ದಿರುವ ಇತಿಹಾಸವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಜನ ಏನುಬೇಕಾದರೂ ತೀರ್ಮಾನ ಮಾಡಲು ಅವಕಾಶವಿದೆ” ಎಂದು ತಿಳಿಸಿದರು.
ಒಂದೇ ದಿನದಲ್ಲಿ ಮೇಕೆದಾಟು ಅನುಮತಿ ಕೊಡಿಸುವುದಾಗಿ ಹೇಳಿದ್ದಲ್ಲ, ಏನಾಯ್ತು?
ಕುಮಾರಣ್ಣ ಲೋಕಸಭೆ ಚುನಾವಣೆ ಸಮಯದಲ್ಲಿ ಒಂದೇ ದಿನದಲ್ಲಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದಲ್ಲಪ್ಪಾ, ಆದರೂ ಬಜೆಟ್ ನಲ್ಲಿ ಈ ವಿಚಾರ ಪ್ರಸ್ತಾಪ ಆಗಲಿಲ್ಲ ಯಾಕೆ? ಈ ಬಗ್ಗೆ ನಿಮ್ಮ ಮಂತ್ರಿಗಳು ಯಾರೂ ಮಾತನಾಡಲಿಲ್ಲ ಯಾಕೆ? ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಿ, ನ್ಯಾಯ ಕೊಡಿಸಲು ಡಿ.ಕೆ. ಸುರೇಶ್, "ನಮ್ಮ ತೆರಿಗೆ ನಮ್ಮ ಹಕ್ಕು" ಎಂದು ಹೋರಾಟ ಮಾಡಿದರು. ಅದಕ್ಕೆ ಅವರನ್ನು ಷಡ್ಯಂತ್ರ ಮಾಡಿ ಸೋಲಿಸಿದ್ದೀರಿ.
ಕುಮಾರಣ್ಣ ನಿನಗೆ ಉಪಕಾರ ಸ್ಮರಣೆ ಇರಲಿ
"2028ರಲ್ಲಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನಮಗಿದೆ. ಕುಮಾರಣ್ಣ ನಾನು ಪರಮೇಶ್ವರ ಅವರು ನಿಮ್ಮನ್ನು ಮುಖ್ಯಮಂತ್ರಿ ಮಾಡಲು ಮುಂದಾದೆವು. ಆಗ ಸಿದ್ದರಾಮಯ್ಯನವರು ಬಂದು 38 ಶಾಸಕರಿದ್ದ ನಿನ್ನನ್ನು ಮುಖ್ಯಮಂತ್ರಿ ಮಾಡಲು 82 ಶಾಸಕರಿದ್ದ ಕಾಂಗ್ರೆಸ್ ಪಕ್ಷದ ವತಿಯಿಂದ ಬರೆದುಕೊಟ್ಟಿದ್ದೆವು. ನಿನಗೆ ಉಪಕಾರ ಸ್ಮರಣೆ ಇರಬೇಕು. ನಿಮ್ಮ ಆಸ್ತಿ ವಿವರಗಳ ಬಗ್ಗೆ ಸರ್ಕಾರ ಜಮೀನು ಕಬಳಿಕೆ ಬಗ್ಗೆ ನೀನೇ ಮನಬಿಚ್ಚಿ ಮಾತಾನಾಡಬೇಕು ಎಂದು ಮನವಿ ಮಾಡುತ್ತೇನೆ" ಎಂದರು.
“ಈ ಜನಾಂದೋಲನ ಸಭೆಯನ್ನು ನಾಳೆ ರಾಮನಗರ, ನಾಡಿದ್ದು ಚನ್ನಪಟ್ಟಣ, ಆಚೆ ನಾಡಿದ್ದು ಮದ್ದೂರು, ಆನಂತರ ಮಂಡ್ಯ ಹಾಗೂ ಮೈಸೂರಿನಲ್ಲಿ ಮಾಡಿ ಪ್ರಶ್ನೆ ಕೇಳುತ್ತೇವೆ. ನಾಳೆಯಿಂದ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳೂ ಬರುತ್ತಾರೆ. ನೆರೆ ಪೀಡಿತ ಪ್ರದೇಶಗಳ ಬಗ್ಗೆ ಮೇಲ್ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಇಂದಿನ ಕಾರ್ಯಕ್ರಮಕ್ಕೆ ಬಂದಿಲ್ಲ” ಎಂದು ತಿಳಿಸಿದರು.
“ನಾವು ಪಾದಯಾತ್ರೆ ಮಾಡುವುದಿಲ್ಲ. ಈ ರೀತಿ ಸಾರ್ವಜನಿಕ ಸಭೆ ಮಾಡಿ ಬಿಜೆಪಿ ನಾಯಕರನ್ನು ಪ್ರಶ್ನಿಸುತ್ತೇವೆ. ಬಿಜೆಪಿಯವರು ಬರೀ ಗದ್ದಲ ಮಾಡುತ್ತಾರೆ, ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ. ಕುಮಾರಸ್ವಾಮಿ ಅವರಿಗೆ ಸದನದಲ್ಲಿ ಡಿವಿಜಿ ಅವರ ಸಾಲುಗಳನ್ನು ಹೇಳಿದ್ದೆ. ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ, ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನ ಉದ್ಧಾರವೆಷ್ಟಾಯ್ತೊ? ಮಂಕುತಿಮ್ಮ’ ಎಂದು ಹೇಳಿದ್ದೆ” ಎಂದು ತಿಳಿಸಿದರು.