ಶಿವಮೊಗ್ಗದಲ್ಲೂ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ; ಪೋಷಕರಲ್ಲಿ ಹೆಚ್ಚಿದ ಆತಂಕ

ಏಳು ತಿಂಗಳಲ್ಲೇ ಮಗು ಜನಿಸಿರುವುದರಿಂದ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.;

Update: 2025-08-31 12:14 GMT

ಯಾದಗಿರಿ ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ  ಪ್ರಕರಣ ಮಾಸುವ ಮುನ್ನವೇ ಇದೀಗ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೂ 9ನೇ ಬಾಲಕಿಗೆ ಹೆರಿಗೆಯಾಗಿರುವ ಘಟನೆ ನಡೆದಿದೆ. 

ಆ.29ರಂದು ಸಂಜೆ ಮನೆಯಲ್ಲೇ ಬಾಲಕಿಗೆ ಹೆರಿಗೆಯಾಗಿದೆ. ಬಾಲಕಿ ಏಳು ತಿಂಗಳ ಗರ್ಭವತಿಯಾಗಿದ್ದಳು. ಗ್ರಾಮದ ವೃದ್ಧೆಯೊಬ್ಬರು ಬಾಲಕಿಗೆ ಹೆರಿಗೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಮಗುವಿನ ತೂಕ 1.8 ಕೆ.ಜಿ ಇದ್ದು, ತಾಯಿ-ಮಗು ಇಬ್ಬರನ್ನೂ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಏಳು ತಿಂಗಳಲ್ಲೇ ಮಗು ಜನಿಸಿರುವುದರಿಂದ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಾಲಕಿಯು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿಯವರು ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಗರ್ಭ ಧರಿಸಲು ಕಾರಣರಾದವರ ಕುರಿತು ಬಾಲಕಿಯು  ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸರ ಎದುರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದು, ಆಕೆಯನ್ನು ಕೌನ್ಸೆಲಿಂಗ್‌ಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ಬಾಲಕಿ ಹಾಗೂ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ನಿಗಾದಲ್ಲಿ ಇರಿಸಲಾಗಿದೆ.   

9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ14 ವರ್ಷದ ಬಾಲಕಿಯು ಹೊಟ್ಟೆ ನೋವಿನ ಕಾರಣ ಎರಡು ದಿನ ಶಾಲೆಗೆ ರಜೆ ಹಾಕಿದ್ದಳು. ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಬಾಲಕಿ ಗರ್ಭವತಿ ಎಂದು ತಿಳಿದ ಕೂಡಲೇ ವಾಪಸ್‌ ಬಂದು ವೃದ್ಧೆಯೊಬ್ಬರ ಬಳಿ ಹೆರಿಗೆ ಮಾಡಿಸಿದ್ದರು. 

ಬಾಲಕಿಯ ಪೋಷಕರು ಕೂಲಿ ಕೆಲಸ ಮಾಡಿಕೊಂಡಿದ್ದು, ಒಬ್ಬ ಮಗ, ಮೂವರು ಹೆಣ್ಣು ಮಕ್ಕಳಿದ್ದಾರೆ. ಈಗ 9 ನೇ ತರಗತಿ ಬಾಲಕಿಗೆ ಹೆರಿಗೆಯಾಗಿರುವುದು ಕಂಡು ಪೋಷಕರು ದಿಗ್ಬ್ರಾಂತರಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಯಾದಗಿರಿಯ ಜಿಲ್ಲೆಯ ವಸತಿ ಶಾಲೆಯಲ್ಲಿ 9 ನೇ ತರಗತಿ ವಿದ್ಯಾರ್ಥಿನಿ ಶೌಚಾಲಯದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಪ್ರಕರಣ ಸಂಬಂಧ ಶಾಲೆಯ ಪ್ರಾಂಶುಪಾಲರು ಸೇರಿ ನಾಲ್ವರನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ ಘಟನೆಗೆ ಕಾರಣನಾದ ಪ್ರಮುಖ ಆರೋಪಿ ಸುರಪುರ ತಾಲೂಕಿನ ಕಕ್ಕೇರ ಗ್ರಾಮದ ಪರಮಣ್ಣ ಎಂಬಾತನನ್ನು ಶಹಾಪುರ ಪೊಲೀಸರು ಬಂಧಿಸಿದ್ದರು.

Tags:    

Similar News