ಬೆಂಗಳೂರಿನಲ್ಲಿ ಅಕ್ರಮ ವಾಸ: ನೈಜೀರಿಯಾ, ಸುಡಾನ್ ಪ್ರಜೆಗಳು ಸೇರಿ 9 ವಿದೇಶಿಗರನ್ನು ಬಂಧಿಸಿದ ಸಿಸಿಬಿ
ಬೆಂಗಳೂರು ನಗರದಲ್ಲಿ ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಗರ ಸಂಖ್ಯೆ ಹೆಚ್ಚಾಗಿದ್ದು, ಇವರಲ್ಲಿ ಕೆಲವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.;
ಸಾಂದರ್ಭಿಕ ಚಿತ್ರ
ನಗರದಲ್ಲಿ ವೀಸಾ ಮತ್ತು ಪಾಸ್‌ಪೋರ್ಟ್ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ ಒಂಬತ್ತು ವಿದೇಶಿ ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ನೈಜೀರಿಯಾದ ನಾಲ್ವರು, ಘಾನಾದ ಇಬ್ಬರು ಮತ್ತು ಸುಡಾನ್ ದೇಶದ ಒಬ್ಬ ಪ್ರಜೆ ಸೇರಿದ್ದಾರೆ.
ಬಂಧಿತರನ್ನು ಸದ್ಯ ಡಿಟೆನ್ಷನ್ ಸೆಂಟರ್ (ಬಂಧಿಖಾನೆ) ನಲ್ಲಿ ಇರಿಸಲಾಗಿದ್ದು, ಅವರನ್ನು ತಮ್ಮ ಸ್ವದೇಶಗಳಿಗೆ ವಾಪಸ್ ಕಳುಹಿಸುವ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಗರ ಸಂಖ್ಯೆ ಹೆಚ್ಚಾಗಿದ್ದು, ಇವರಲ್ಲಿ ಕೆಲವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯು ಇಂತಹ ವ್ಯಕ್ತಿಗಳ ಮೇಲೆ ಕಠಿಣ ನಿಗಾ ಇರಿಸಿದೆ. ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಿ, ಅವರ ದೇಶದ ವಿದೇಶಾಂಗ ಸಚಿವಾಲಯದ ಮೂಲಕ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅಕ್ರಮವಾಗಿ ನೆಲೆಸಿರುವವರಲ್ಲಿ ನೈಜೀರಿಯಾ, ಸುಡಾನ್, ಯೆಮೆನ್ ಮತ್ತು ಕಾಂಗೋ ದೇಶದ ಪ್ರಜೆಗಳು ಹೆಚ್ಚಾಗಿ ಕಂಡುಬರುತ್ತಾರೆ. ಅದರಲ್ಲೂ, ನೈಜೀರಿಯಾದ ಪ್ರಜೆಗಳು ಮಾದಕ ವಸ್ತುಗಳ ಮಾರಾಟ ಪ್ರಕರಣಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಇಂತಹ ಆರೋಪಿಗಳಿಗೆ ಮಾದಕ ವಸ್ತುಗಳು ಯಾವ ಮೂಲದಿಂದ ಸರಬರಾಜಾಗುತ್ತಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರನ್ನು ದಸ್ತಗಿರಿ ಮಾಡಿ ಗಡಿಪಾರು ಮಾಡಲು ಕ್ರಮ ಕೈಗೊಳ್ಳುತ್ತಿದ್ದಾರೆ.