ಬಿಬಿಎಂಪಿ | 2.75 ಲಕ್ಷ ಆಸ್ತಿ ಮಾಲೀಕರಿಂದ ತೆರಿಗೆ ಬಾಕಿ : ಗಡುವಿನಲ್ಲಿ ತೆರಿಗೆ ಪಾವತಿಸದಿದ್ದರೆ ಆಸ್ತಿ ಮುಟ್ಟುಗೋಲು ಎಚ್ಚರಿಕೆ
ಬೆಂಗಳೂರಿನ ಆಸ್ತಿ ಮಾಲೀಕರು ಒಟ್ಟು 786.86 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ತಕ್ಷಣವೇ ತೆರಿಗೆ ಪಾವತಿಸುವಂತೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ.;
ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಡಿ ಇಟ್ಟಿದೆ.
ಬೆಂಗಳೂರು ನಗರದ ಐದೂ ವಲಯಗಳಲ್ಲಿ ಒಟ್ಟು 2.75 ಲಕ್ಷ ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದು, ಶೀಘ್ರ ತೆರಿಗೆ ಪಾವತಿಸುವಂತೆ ಸೂಚಿಸಿ ನೋಟಿಸ್ ನೀಡಿದೆ.
ನಿಗದಿತ ಅವಧಿಯಲ್ಲಿ ಬಾಕಿ ತೆರಿಗೆ ಪಾವತಿಸದಿದ್ದರೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಚರ ಮತ್ತು ಸ್ಥಿರ ಆಸ್ತಿಗಳ ತುರ್ತು ಮಾರಾಟ ನಡೆಸುವುದು ಸೇರಿದಂತೆ ಹಲವು ಕಠಿಣ ವಸೂಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಬೆಂಗಳೂರಿನ ಆಸ್ತಿ ಮಾಲೀಕರು ಒಟ್ಟು 786.86 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ತಕ್ಷಣವೇ ತೆರಿಗೆ ಪಾವತಿಸುವಂತೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ. BBMPtax.karnataka.gov.in ವೆಬ್ ಸೈಟ್ ಮೂಲಕವೂ ಬಾಕಿ ತೆರಿಗೆ ಪಾವತಿಗೆ ಅವಕಾಶ ಒದಗಿಸಲಾಗಿದೆ.
ಯಾವ ವಲಯದಲ್ಲಿ ಎಷ್ಟು ಬಾಕಿ?
ಮಹದೇವಪುರ ವಲಯ : ಈ ವಲಯದಲ್ಲಿ 65,040 ಆಸ್ತಿದಾರರು ಒಟ್ಟು 197.90 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ದಕ್ಷಿಣ ವಲಯ : ಈ ವಲಯದಲ್ಲಿ ಒಟ್ಟು 25,162 ಆಸ್ತಿದಾರರು 116.81 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಪಾವತಿಸಬೇಕಾಗಿದೆ.
ಪೂರ್ವ ಮತ್ತು ಬೊಮ್ಮನಹಳ್ಳಿ ವಲಯ, ಯಲಹಂಕ ಮತ್ತು ಪಶ್ಚಿಮ ವಲಯ ಹಾಗೂ ರಾಜರಾಜೇಶ್ವರಿ ನಗರ ಮತ್ತು ದಾಸರಹಳ್ಳಿ ವಲಯದಲ್ಲಿ ಉಳಿದ 472 ಕೋಟಿ ರೂ. ತೆರಿಗೆ ಬಾಕಿ ಇದೆ.
ಆಸ್ತಿ ಮುಟ್ಟುಗೋಲು ಎಚ್ಚರಿಕೆ
ಬಾಕಿ ತೆರಿಗೆ ತಕ್ಷಣ ಪಾವತಿಸಲು ವಿಫಲವಾದರೆ ಆಸ್ತಿ ಮುಟ್ಟುಗೋಲು, ಚರ ಮತ್ತು ಸ್ಥಿರ ಆಸ್ತಿಗಳ ತುರ್ತು ಹರಾಜು ಮಾರಾಟ ಪ್ರಕ್ರಿಯೆ ನಡೆಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಇ-ಖಾತಾ ಖಾತೆ ನಿರ್ಬಂಧವೂ ಕಠಿಣ ಕ್ರಮಗಳಲ್ಲಿ ಒಂದಾಗಿದೆ. ಹಾಗಾಗಿ, ಆಸ್ತಿ ತೆರಿಗೆ ಪಾವರಿಸಬೇಕು. ಅಲ್ಲದೇ ನಿಮ್ಮ ತೆರಿಗೆ ಬಾಕಿಯ ವಿವರ, ವ್ಯತ್ಯಾಸ ಹಾಗೂಕುಂದುಕೊರತೆ ಸಲ್ಲಿಸಲು ಆನ್‌ಲೈನ್ ಪೋರ್ಟಲ್,ಸಹಾಯವಾಣಿ ಸಂಪರ್ಕಿಸಬೇಕು. ಕಾನೂನು ಕ್ರಮಗಳಿಗೆ ಆಸ್ಪದ ನೀಡದೇ ತ್ವರಿತವಾಗಿ ಬಾಕಿ ತೆರಿಗೆ ಪಾವತಿಸುವಂತೆ ಆಸ್ತಿದಾರರಿಗೆ ಮನವಿ ಮಾಡಿದೆ.