ಚಲಿಸುತ್ತಿದ್ದ ರೈಲಿನಿಂದ ಕಾರಿನ ಮೇಲೆ ಬಿದ್ದು ಯುವಕ ಸಾವು: ಕಾರು ಚಾಲಕಿ ಪಾರು
ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಸೇತುವೆಯ ಬಳಿ ಮಂಗಳವಾರ ಮಧ್ಯಾಹ್ನ ಚಲಿಸುತ್ತಿರುವ ರೈಲಿನಿಂದ ಬಿದ್ದು ತಮಿಳುನಾಡು 21 ವರ್ಷದ ಯುವಕ ಸಾವನ್ನಪ್ಪಿದ್ದಾನೆ.
ಬೆಂಗಳೂರಿನ ವಸಂತನಗರದ ವಿಂಡ್ಸರ್ ಮ್ಯಾನರ್ ಸೇತುವೆಯ ಬಳಿ ಮಂಗಳವಾರ ಮಧ್ಯಾಹ್ನ 3.15 ರಿಂದ 3.20 ರ ನಡುವೆ ಚಲಿಸುತ್ತಿರುವ ರೈಲಿನಿಂದ ಕಾರಿನ ಮೇಲೆ 21 ವರ್ಷದ ಯುವಕ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾನೆ. ತಮಿಳುನಾಡಿನ ವೆಲ್ಲೂರು ಮೂಲದ ಯುವಕ ಎಕ್ಸ್‌ಪ್ರೆಸ್ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದು, ಆತ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದ ಎಂದು ಶಂಕಿಸಲಾಗಿದೆ.
ಆಕಸ್ಮಿಕವಾಗಿ ಸುಮಾರು 35 ಅಡಿ ಎತ್ತರದಿಂದ ಕಿಯಾ ಸೋನೆಟ್ ಕಾರಿನ ಮೇಲೆ ಯುವಕ ಬಿದ್ದಿದ್ದು, ಕಾರು ಚಲಾಯಿಸುತ್ತಿದ್ದ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ನಗರ ರೈಲ್ವೆ ಪೊಲೀಸರು ಮೃತ ಯುವಕನನ್ನು ಗೌರಿಶ್ ಅಲಿಯಾಸ್ ಗೌರಿ ಶಂಕರ್ ಎಂದು ಗುರುತಿಸಿದ್ದಾರೆ. ಆತ ಕುಣಿಗಲ್‌ನ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಎಂದು ಆಟೋ ಚಾಲಕನಾಗಿ ಕೆಲಸ ಮಾಡುತ್ತಿರುವ ಆತನ ತಂದೆ ಭಾಸ್ಕರ್ ತಿಳಿಸಿದ್ದಾರೆ.
"ಮಧ್ಯಾಹ್ನ 2.30 ರ ಸುಮಾರಿಗೆ ಆತ ತನ್ನ ಸಹೋದರನಿಗೆ ಕರೆ ಮಾಡಿ ಮಾತನಾಡಿದ್ದಾನೆ. ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದಿರಬೇಕು ಎಂದು ಮೇಲ್ನೋಟಕ್ಕೆ ತೋರುತ್ತದೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ" ಎಂದು ಬೆಂಗಳೂರು ರೈಲ್ವೇ ಪೊಲೀಸ್ ಅಧೀಕ್ಷಕರಾದ ಡಾ.ಕೆ.ಎಸ್.ಸೌಮ್ಯ ಲತಾ ಅವರು ತಿಳಿಸಿದ್ದಾರೆ.
ಅದಾಗ್ಯೂ, ರೈಲಿನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಆಕಸ್ಮಿಕ ಘಟನೆಯೇ ಎಂದು ರೈಲ್ವೆ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಹೆಚ್ಚಿನ ತನಿಖೆಗಳು ನಡೆಯುತ್ತಿವೆ.