ಸಿದ್ದರಾಮಯ್ಯ 2.0 ಗೆ ವರ್ಷ | ಗ್ಯಾರಂಟಿ ಜೊತೆ ಇತರೆ ಅಭಿವೃದ್ಧಿಗೂ ಹಣ ಕೊಟ್ಟಿದ್ದೇವೆ: ಬಿಜೆಪಿ ಆರೋಪಕ್ಕೆ ಸಿಎಂ ತಿರುಗೇಟು

ಬಿಜೆಪಿ ನಾಯಕರಾದ ವಿಜಯೇಂದ್ರ, ಆರ್.ಅಶೋಕ್ ಅವರಿಗೆ ಆರ್ಥಿಕತೆ ಅರ್ಥ ಆಗಲ್ಲ. ಹೀಗಾಗಿ ಖಜಾನೆ ಖಾಲಿ ಆಗಿದೆ ಎಂದು ಪರಮ ಸುಳ್ಳು ಹೇಳುತ್ತಿದ್ದಾರೆ ಎಂದ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆ ಜೊತೆಗೆ ಅಭಿವೃದ್ಧಿ ಯೋಜನೆಗಳಿಗೂ ಅಧಿಕ ಅನುದಾನ ನೀಡಿದ್ದೇವೆ ಎಂದರು.

Update: 2024-05-20 08:58 GMT

ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ಬಿಜೆಪಿ ನಾಯಕರ ಆರೋಪದಲ್ಲಿ ಹುರುಳಿಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯ ನಿರಂತರ ಅಪಪ್ರಚಾರದ ಹೊರತಾಗಿಯೂ ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಜೊತೆಗೆ ಗ್ಯಾರಂಟಿಯೇತರ ಅಭಿವೃದ್ಧಿ ಯೋಜನೆಗಳಿಗೆ ಬಜೆಟ್‌ ಘೋಷಣೆಗೂ ಅಧಿಕ ಹಣ ನೀಡಿದ್ದೇವೆ ಎಂದು ಹೇಳಿದ್ದಾರೆ.

ತಮ್ಮ ಎರಡನೇ ಅವಧಿಯ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸೋಮವಾರ(ಮೇ 20) ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಅವರು, ಬಿಜೆಪಿ ನಾಯಕರ ಟೀಕೆಗೆ ಪ್ರತಿಯಾಗಿ ತಮ್ಮ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಹಣಕಾಸು ಅನುದಾನದ ಅಂಕಿಅಂಶ ಸಹಿತ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಕೊರತೆಯಾಗಿದೆ ಎಂಬುದು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು. 

ಬಿಜೆಪಿ ನಾಯಕರಾದ ವಿಜಯೇಂದ್ರ, ಆರ್.ಅಶೋಕ್ ಅವರಿಗೆ ಆರ್ಥಿಕತೆ ಅರ್ಥ ಆಗಲ್ಲ. ಹೀಗಾಗಿ ಖಜಾನೆ ಖಾಲಿ ಆಗಿದೆ ಎಂದು ಪರಮ ಸುಳ್ಳು ಹೇಳುತ್ತಿದ್ದಾರೆ. ನಾವು ಗ್ಯಾರಂಟಿಯೇತರ ಅಭಿವೃದ್ಧಿ ಕಾರ್ಯಗಳಿಗೆ 54,374 ಕೋಟಿ ರೂ. ಖರ್ಚು ಮಾಡುವುದಾಗಿ ಕಳೆದ ಬಜೆಟ್ ನಲ್ಲಿ ಹೇಳಿದ್ದೆವು. ಆದರೆ, ವಾಸ್ತವವಾಗಿ ಕಳೆದ ಒಂದು ವರ್ಷದಲ್ಲಿ ಅಭಿವೃದ್ಧಿ ಯೋಜನೆಗಳಿಗೆ 56,274 ಕೋಟಿ ರೂ. ಖರ್ಚು ಮಾಡಿದ್ದೇವೆ. ಅಂದರೆ ಬಜೆಟ್ ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ ಎಂದು ಅಂಕಿ ಅಂಶಗಳಸಹಿತ ವಿವರಿಸಿದರು.

ನೀರಾವರಿ ಯೋಜನೆಗಳಿಗೆ 16,360 ಕೋಟಿ ರೂ. ಖರ್ಚು ಮಾಡುವುದಾಗಿ ಕಳೆದ ಬಜೆಟ್ ನಲ್ಲಿ ಹೇಳಿದ್ದೆವು. ಆದರೆ, ವಾಸ್ತವವಾಗಿ 18,198 ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ಅಂದರೆ, ನೀರಾವರಿ ಯೋಜನೆಗಳಿಗೆ ನಾವು ಬಜೆಟ್‌ನಲ್ಲಿ ಘೋಷಿಸಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ. ಹಾಗೇ ಲೋಕೋಪಯೋಗಿ ಇಲಾಖೆಗೂ 9,661 ಕೋಟಿ ಖರ್ಚು ಮಾಡಿದ್ದೇವೆ. ಬಿಜೆಪಿಯವರ ಹೇಳಿಕೆಯಂತೆ ಖಜಾನೆ ಖಾಲಿ ಆಗಿದ್ದರೆ ಇಷ್ಟೆಲ್ಲಾ ಖರ್ಚು ಮಾಡಲು ಸಾಧ್ಯವಿತ್ತೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. 

ಬೊಮ್ಮಾಯಿ ಬಜೆಟ್ ಗಾತ್ರಕ್ಕಿಂತ ನಮ್ಮ ಸರ್ಕಾರದ ಬಜೆಟ್ ಗಾತ್ರ ಹೆಚ್ಚಾಗಿದೆ. ನಮ್ಮ ಸರ್ಕಾರ ಪಾಪರ್ ಆಗಿದ್ದರೆ ಇದು ಸಾಧ್ಯವಿತ್ತಾ ಎಂದು ಬಿ.ಎಸ್.ಯಡಿಯೂರಪ್ಪ ಅವರ ಆರೋಪಗಳಿಗೆ ಸವಾಲು ಎಸೆದರು. ಮುಂದಿನ ವರ್ಷದ ಗ್ಯಾರಂಟಿ ಯೋಜನೆಗಳಿಗೆ 52,000 ಕೋಟಿ ಹಣ ಮೀಸಲಿಟ್ಟಿದ್ದೇವೆ. ಇದಕ್ಕಿಂತ ಹೆಚ್ಚು ಹಣ ಕೊಡ್ತೀವಿ ಎಂದರು.

ಸುಳ್ಳು ಹೇಳುವುದನ್ನು ಬಿಟ್ಟು ಉತ್ತರಿಸಲಿ

ಸಮಾಜ ಕಲ್ಯಾಣಕ್ಕಾಗಿ ಒಂದು ಕೋಟಿ ರೂ.ವರೆಗಿನ ಕಾಮಗಾರಿಯಲ್ಲಿ ಪರಿಶಿಷ್ಟ ಜಾತಿ/ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿ, ಹಿಂದುಳಿದವರಿಗೆ ಮೀಸಲಾತಿ ನೀಡಿದೆವು. SCSP/TSP ಕಾಯ್ದೆ ಮಾಡಿದ್ದು ನಮ್ಮ ಸರ್ಕಾರ. ಪ್ರಧಾನಿ ಮೋದಿ ಅವರು ಭಾಷಣದಲ್ಲಿ ತಮ್ಮ ಸುಳ್ಳು ಕೇವಲ ಹೇಳುವುದನ್ನು ಬಿಟ್ಟು ಈ ಕಾಯ್ದೆಯನ್ನು ಬಿಜೆಪಿ ಆಡಳಿತದ ಸರ್ಕಾರಗಳು ಏಕೆ ಜಾರಿ ಮಾಡಿಲ್ಲ ಎನ್ನುವುದಕ್ಕೆ ಉತ್ತರಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲೀಮರಿಗೆ ಕೊಡ್ತಾರೆ ಎಂದು ಮತ್ತೊಂದು ಮೋದಿ ಸುಳ್ಳು ಹೇಳುತ್ತಿದ್ದಾರೆ. ಇದು ಅಪ್ಪಟ ಸುಳ್ಳು. ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ 30 ವರ್ಷದಿಂದ ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಜಾರಿಯಲ್ಲಿದೆ. ಬೊಮ್ಮಾಯಿ ಸರ್ಕಾರ ಕೂಡ ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿ ಮುಸ್ಲೀಮರ ಮೀಸಲಾತಿ ರದ್ದು ಮಾಡುವುದಿಲ್ಲ ಎಂದು ಒಪ್ಪಿಕೊಂಡಿದೆ. ಆದರೂ ಮೋದಿ ಅವರು ಭಾಷಣಗಳಲ್ಲಿ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಂಡಿಲ್ಲ. ಹೀಗಾಗಿ ಮೋದಿ ಹೇಳುತ್ತಿರುವುದು ಅಪ್ಪಟ ಸುಳ್ಳು ಎಂದರು.

ಕಾನೂನು ಸುವ್ಯವಸ್ಥೆ ಸರಿಯಾಗೇ ಇದೆ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದುಬಿದ್ದಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಸಿಎಂ ಸಿದ್ದರಾಮಯ್ಯ, ನೇಹಾ ಕೊಲೆ ಪ್ರಕರಣದ ಆರೋಪಿ ಬಂಧಿತನಾಗಿ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೊಲೆ ಗಳ ಪ್ರಮಾಣ ಕಡಿಮೆ ಆಗಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು. ಆದರೆ ಅಂಕಿ ಅಂಶಗಳಿಗಿಂತ ಸಮಾಜದ ಸ್ವಾಸ್ಥ್ಯ ಮುಖ್ಯ. ಹೀಗಾಗಿ ಅಧಿಕಾರಿಗಳಿಗೆ ಅಪರಾಧ ತಡೆಗಟ್ಟಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇವೆ. ಕರ್ತವ್ಯಲೋಪ ಮಾಡಿದ ಅಧಿಕಾರಿಗಳನ್ನು ಈಗಾಗಲೇ ಸಸ್ಪೆಂಡ್ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಜಾತಿ ಗಣತಿ ವರದಿ ಮಂಡಿಸುತ್ತೇವೆ

ಜಾತಿ ಗಣತಿ ಜಾರಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾವು ಜಾತಿಗಣತಿ ವರದಿ ಸ್ವೀಕರಿಸಿದ್ದೇವೆ. ನಾವಿನ್ನೂ ವರದಿ ನೋಡಿಲ್ಲ. ಕ್ಯಾಬಿನೆಟ್ ಮುಂದೆ ವರದಿಯನ್ನು ಮಂಡಿಸುತ್ತೇವೆ. ಆ ಬಳಿಕ ವರದಿಯ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರನ್ನು ಪತ್ತೆ ಹಚ್ಚಲು ಜಾತಿ ಗಣತಿ, ಸಾಮಾಜಿಕ ಆರ್ಥಿಕ ಸಮೀಕ್ಷೆ ಅತ್ಯಗತ್ಯ. ಹೀಗಾಗಿಯೇ ನಾವು ಜಾತಿಗಣತಿ ಮಾಡಿಸಿ ವರದಿ ಸ್ವೀಕರಿಸಿದೆವು. ಈ ವರದಿ ಯಾವುದೇ ಸಮುದಾಯಕ್ಕೂ ತೊಂದರೆ ಮಾಡುವುದಿಲ್ಲ. ಮೋದಿ ಆರ್ಥಿಕವಾಗಿ ಹಿಂದುಳಿದವರಿಗಾಗಿ EWS ಮೀಸಲಾತಿ ಜಾರಿಗೆ ತಂದರು. ಇಡೀ ದೇಶದಲ್ಲಿ ಮೀಸಲಾತಿಯ ಅನುಕೂಲ ಪಡೆಯದ ಯಾವುದೇ ಜಾತಿ, ವರ್ಗಗಳಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರ ಮಟ್ಟದಲ್ಲಿ ಜಾತಿ ಗಣತಿ ಮಾಡುತ್ತೇವೆ ಎಂದು ಘೋಷಿಸಿದ್ದು ಇದೇ ಕಾರಣಕ್ಕೆ. ಇದರಲ್ಲಿ ಏನು ತಪ್ಪಿದೆ ಎಂದು ಸಿಎಂ ಪ್ರಶ್ನಿಸಿದರು.

ಬರ ಪರಿಹಾರಕ್ಕಾಗಿ ಕಾನೂನು ಹೋರಾಟ ನಿಲ್ಲದು

ರಾಜ್ಯ ಭೀಕರ ಪರಿಹಾರಕ್ಕೆ ತುತ್ತಾದಾಗಲೂ ರಾಜ್ಯದ ಪಾಲಿನ ಬರ ಪರಿಹಾರವನ್ನು ಕೇಂದ್ರ ಕೊಡಲಿಲ್ಲ. ನಾವು ನಮ್ಮ ಪಾಲಿನ ಹಣ ಕೇಳಲು ಪದೇಪದೆ ಕೇಂದ್ರಕ್ಕೆ ಹೋಗಿ ಮನವಿ ಮಾಡಿದರೂ ಕೊಡಲಿಲ್ಲ. ನಾನೇ ಪ್ರಧಾನಿ ಮತ್ತು ಅಮಿತ್ ಶಾ ಅವರಿಗೆ ಮನವಿ ಕೊಟ್ಟೆ. ಆದರೂ ಪ್ರಯೋಜನ ಆಗಲಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು.

ಆಮೇಲೆ ಅಮಿತ್ ಶಾ, ಮೋದಿ, ನಿರ್ಮಲಾ ಸೀತಾರಾಮನ್ ಪದೇಪದೆ ರಾಜ್ಯಕ್ಕೆ ಬಂದು ಜನರಿಗೆ ಸುಳ್ಳು ಹೇಳಿದರು. ಆದರೆ, ಸುಪ್ರೀಂಕೋರ್ಟ್ ಎದುರು ಮಾತ್ರ ಎರಡು ವಾರ ಸಮಯ ಕೇಳಿದರು. ಸುಪ್ರೀಂಕೋರ್ಟ್ ಗಟ್ಟಿಯಾಗಿ ಹೇಳಿದ ಬಳಿಕ ನಾವು ಕೇಳಿದ್ದರಲ್ಲಿ19% ಮಾತ್ರ ಪರಿಹಾರ ಕೊಟ್ಟಿದ್ದಾರೆ. ನಾವು ಬಾಕಿ ಪರಿಹಾರಕ್ಕಾಗಿ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದರು.

ಕೇಂದ್ರದ ಅಸಹಕಾರದ ನಡುವೆಯೂ ನಾವು ರಾಜ್ಯದ ಜನತೆಯ ಕೈ ಬಿಡಲಿಲ್ಲ. ಪರಿಹಾರ ಕೊಟ್ಟೆವು ಎಂದ ಅವರು, ರೈತರ ಬರ ಪರಿಹಾರದ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಬ್ಯಾಂಕುಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ರೈತರಿಗೆ ಮಾತ್ರ ಪರಿಹಾರದ ಹಣ ಮೀಸಲಿಟ್ಟಿದ್ದೇವೆ ಎಂದೂ ಸ್ಪಷ್ಟಪಡಿಸಿದರು.

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ

ಬಿಜೆಪಿಯ ದೇವರಾಜೇಗೌಡ ಅವರೇ ಮೊದಲಿಗೆ ಪತ್ರಿಕಾಗೋಷ್ಠಿ ನಡೆಸಿದ್ದರು. ಅತ್ಯಾಚಾರಕ್ಕೆ ಒಳಗಾದವರು ದೂರು ಕೊಟ್ಟರು. ಆರು ತಿಂಗಳ ಮೊದಲೇ ಬಿಜೆಪಿಗೆ ವಿಷಯ ಗೊತ್ತಿತ್ತು. ಆದರೂ ಬಿಜೆಪಿ ಪ್ರಜ್ವಲ್ ಗೆ ಎನ್‌ಡಿಎ ಟಿಕೆಟ್ ನೀಡಿತು. ಮೋದಿ ಬಂದು ಪ್ರಜ್ವಲ್ ಪರ ಭಾರೀ ಪ್ರಚಾರ ಮಾಡಿ, ಗೆಲ್ಲಿಸಲು ಕೋರಿದ್ದರು.‌ ನಾವು ಮಹಿಳೆಯರ ದೂರಿನ ಮೇಲೆ ಕೈಗೊಳ್ಳಬಹುದಾದ ಕ್ರಮ ಕೈಗೊಂಡಿದ್ದೇವೆ. ಎಸ್‌ ಐಟಿ ತನಿಖೆ ನಡೆಯುತ್ತಿದೆ ಎಂದರು. 

ದೇವಾಲಯ ಅಭಿವೃದ್ಧಿಗೆ ಪ್ರಯತ್ನ

ದೇವಸ್ಥಾನಗಳ ಹಣ ಕಿತ್ತುಕೊಳ್ಳುತ್ತಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿದರು. ಆದರೆ ಗ್ರಾಮೀಣ ಭಾಗದ ದೇವಸ್ಥಾನಗಳ ಅಭಿವೃದ್ಧಿಗೆ ನಾವು ಮುಂದಾಗಿದ್ದೇವೆ ಎನ್ನುವ ಸತ್ಯ ಮರೆಮಾಚಿ ಅಪಪ್ರಚಾರ ಮಾಡಿದರು ಎಂದು ಬಿಜೆಪಿ ನಾಯಕರ ಆರೋಪಗಳ ವಿರುದ್ಧ ಕಿಡಿಕಾರಿದರು.

Tags:    

Similar News