BPL Card Controversy | ರಾಜ್ಯದಲ್ಲಿ ಪತ್ತೆಯಾಗಿವೆ 13,87,652 ಅನರ್ಹ ಬಿಪಿಎಲ್‌ ಕಾರ್ಡ್‌!

ಒಟ್ಟು ಬಿಪಿಎಲ್‌ ಕಾರ್ಡ್‌ಗಳ ಪೈಕಿ 13,87,652 ಕಾರ್ಡ್‌ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ. ಅವುಗಳಲ್ಲಿ 98,473 ಆದಾಯ ತೆರಿಗೆ ಪಾವತಿದಾರರು ಹೊಂದಿರುವ ಕಾರ್ಡ್‌ಗಳಾಗಿವೆ. 4,036 ಸರ್ಕಾರಿ ನೌಕರರು ಹೊಂದಿರುವ ಕಾರ್ಡ್‌ಗಳಾಗಿವೆ.

Update: 2024-11-21 06:55 GMT
ಬಿಪಿಎಲ್‌ ಕಾರ್ಡ್‌
Click the Play button to listen to article

ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ರದ್ದತಿಯ ವಿಷಯ ದೊಡ್ಡ ರಾಜಕೀಯ ವಾಗ್ವಾದಕ್ಕೆ ಎಡೆ ಮಾಡಿದೆ.

ಒಂದು ಕಡೆ ಪ್ರತಿಪಕ್ಷಗಳು, ಗ್ಯಾರಂಟಿ ಯೋಜನೆಗಳಿಂದಾಗಿ ಬರಿದಾಗಿರುವ ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ. ಹಾಗಾಗಿ ಸರ್ಕಾರ ಹಣ ಉಳಿತಾಯಕ್ಕಾಗಿ ಲಕ್ಷಾಂತರ ಬಡವರ ಬಿಪಿಎಲ್‌ ಕಾರ್ಡುಗಳನ್ನೇ ಕಿತ್ತುಕೊಂಡಿದೆ ಎಂದು ಹುಯಿಲೆಬ್ಬಿಸಿದ್ದರೆ, ಮತ್ತೊಂದು ಕಡೆ ಹಿಂದಿನ ಬಿಜೆಪಿ ಅವಧಿಯಲ್ಲಿ ಸರ್ಕಾರ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರಿಗೂ ಬಿಪಿಎಲ್‌ ಕಾರ್ಡುಗಳನ್ನು ನೀಡಿ, ಬಡವರ ಅನ್ನ ಕಿತ್ತುಕೊಂಡಿದೆ ಎಂದು ಆಡಳಿತರೂಢ ಕಾಂಗ್ರೆಸ್‌ ಹೇಳುತ್ತಿದೆ. 

ಈ ನಡುವೆ, ರಾಜ್ಯ ಆಹಾರ ಇಲಾಖೆ ಅಕ್ರಮ ಪಡಿತರ ಚೀಟಿಗಳ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿದ್ದು, ಈ ಪೈಕಿ 10,68,042 ಅಂತ್ಯೋದಯ ಕಾರ್ಡ್‌ಗಳು, 1,14,60,137 ಬಿಪಿಎಲ್ ಕಾರ್ಡ್‌ಗಳು, ಉಳಿದಂತೆ, 25,62,355 ಎಪಿಲ್ ಕಾರ್ಡ್‌ಗಳು ಎಂದು ಹೇಳಿದೆ.

ಒಟ್ಟು ಬಿಪಿಎಲ್‌ ಕಾರ್ಡ್‌ಗಳ ಪೈಕಿ 13,87,652 ಕಾರ್ಡ್‌ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ. ಅವುಗಳಲ್ಲಿ 98,473 ಆದಾಯ ತೆರಿಗೆ ಪಾವತಿದಾರರು ಹೊಂದಿರುವ ಕಾರ್ಡ್‌ಗಳಾಗಿವೆ. 4,036 ಸರ್ಕಾರಿ ನೌಕರರು ಹೊಂದಿರುವ ಕಾರ್ಡ್‌ಗಳಾಗಿವೆ. ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚಿರುವವರು ಹೊಂದಿರುವ ಕಾರ್ಡ್‌ಗಳ ಸಂಖ್ಯೆ 10,09,476. ಕಳೆದ ಆರು ತಿಂಗಳುಗಳಿಂದ ಪಡಿತರವನ್ನೇ ಪಡೆಯದ ಕಾರಣಕ್ಕೆ ಅಮಾನತುಗೊಂಡ ಕಾರ್ಡ್‌ಗಳ ಸಂಖ್ಯೆ 2.75,667. ಅಲ್ಲದೆ, ಮೃತಪಟ್ಟ 1,59,319 ಸದಸ್ಯರ ಹೆಸರುಗಳನ್ನು ಕಾರ್ಡ್‌ನಿಂದ ತೆಗೆದುಹಾಕಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

ಅಮಾನತು, ರದ್ದು ಮತ್ತು ಎಪಿಲ್ ಕಾರ್ಡ್‌ಗಳಾಗಿ ಬದಲಾಯಿಸಿದ ಒಟ್ಟು ಕಾರ್ಡ್‌ಗಳ ಸಂಖ್ಯೆ 3,81,983. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ ಎಂದು ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಇತರ ರಾಜ್ಯಗಳೊಂದಿಗೆ ಕರ್ನಾಟಕದಲ್ಲಿರುವ ಬಿಪಿಎಲ್ ಕಾರ್ಡ್‌ದಾರರನ್ನು ಹೋಲಿಸಿದರೆ, ರಾಜ್ಯದಲ್ಲಿ ಪಡಿತರಚೀಟಿ ಹೊಂದಿರುವ ಒಟ್ಟು ಕುಟುಂಬಗಳಲ್ಲಿ ಶೇ. 69.69ರಷ್ಟು ಬಿಪಿಎಲ್‌ ಕಾರ್ಡ್‌ ಹೊಂದಿವೆ ಎಂದು ಇಲಾಖೆ ಇಳಿಸಿದೆ.

ಈ ನಡುವೆ ಬಿಪಿಎಲ್‌ ಕಾರ್ಡ್‌ ರದ್ದತಿಯನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸದ್ಯ ಯಾವುದೇ ಪಡಿತರ ಕಾರ್ಡುಗಳನ್ನು ರದ್ದು ಮಾಡದಂತೆ ಹೇಳಿದ್ದಾರೆ ಎನ್ನಲಾಗಿದೆ.

Tags:    

Similar News