ಬೆಟ್ಟಿಂಗ್ ರಾಜಧಾನಿಯಾದ ಹುಬ್ಬಳ್ಳಿ-ಧಾರವಾಡ: ಬೆಂಗಳೂರನ್ನೂ ಮೀರಿಸಿದ ವಾಣಿಜ್ಯ ನಗರಿ!
ಬೆಟ್ಟಿಂಗ್ ವ್ಯಸನವು ವಿದ್ಯಾರ್ಥಿಗಳು, ಪ್ರಜ್ಞಾವಂತರನ್ನೇ ಅಧಿಕವಾಗಿ ಅಂಟಿಕೊಂಡಿದೆ. ಬೆಂಗಳೂರು ನಗರ ಹಾಗೂ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲೇ ಆನ್‌ಲೈನ್ ಬೆಟ್ಟಿಂಗ್ ನಶೆ ಹೆಚ್ಚಿದೆ.;
ಬೆರಳ ತುದಿಯಲ್ಲೇ ಕುಬೇರನಾಗುವ ಕನಸು ತೋರಿಸಿ, ಬದುಕನ್ನೇ ಬರ್ಬಾದ್ ಮಾಡುತ್ತಿರುವ ಆನ್‌ಲೈನ್ ಬೆಟ್ಟಿಂಗ್ ಎಂಬ ಮಾಯಾಜಾಲ, ಕರ್ನಾಟಕದಲ್ಲಿ ಆಳವಾಗಿ ಬೇರೂರುತ್ತಿದೆ. ವಿದ್ಯಾರ್ಥಿಗಳಿಂದ ಹಿಡಿದು, ಪ್ರಜ್ಞಾವಂತರನ್ನೇ ತನ್ನ ಕೂಪಕ್ಕೆ ಎಳೆದುಕೊಳ್ಳುತ್ತಿರುವ ಈ ವ್ಯಸನ, ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ 1,193ಕ್ಕೂ ಹೆಚ್ಚು ಪ್ರಕರಣಗಳಿಗೆ ಕಾರಣವಾಗಿದೆ. ಈ ಪಿಡುಗಿಗೆ ಕಡಿವಾಣ ಹಾಕಲು ಸರ್ಕಾರ ಈಗ ನಿರ್ಧರಿಸಿದೆ. ಇಲ್ಲಿ ಆತಂಕಕಾರಿ ಸಂಗತಿ ಎಂದರೆ ಬೆಟ್ಟಿಂಗ್ ವಿಚಾರದಲ್ಲಿ ಮೆಟ್ರೊ ಸಿಟಿ ಬೆಂಗಳೂರನ್ನು ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ಮೀರಿಸಿದೆ.
ಪೊಲೀಸ್ ಇಲಾಖೆಯು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ, ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಆತಂಕವನ್ನುಂಟು ಮಾಡಿದೆ. 2023ರಲ್ಲಿ 415 ಇದ್ದ ಪ್ರಕರಣಗಳ ಸಂಖ್ಯೆಯು 2024ರಲ್ಲಿ 327ಕ್ಕೆ ಇಳಿಕೆ ಕಂಡುಬಂದಿತ್ತು. ಆದರೆ, ಆತಂಕಕಾರಿ ಸಂಗತಿಯೆಂದರೆ, ಈ ವರ್ಷದ ಜುಲೈ ಅಂತ್ಯದ ವೇಳೆಗೆ ದಾಖಲಾದ ಪ್ರಕರಣಗಳ ಸಂಖ್ಯೆ 451ಕ್ಕೆ ಏರಿಕೆಯಾಗಿದೆ. ಈ ಅಂಕಿ ಅಂಶವು ಯುವಜನರು ಬೆಟ್ಟಿಂಗ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಹುಬ್ಬಳ್ಳಿ-ಧಾರವಾಡದಲ್ಲಿಯೇ ಹೆಚ್ಚು ಪ್ರಕರಣ
ಆನ್‌ಲೈನ್ ಬೆಟ್ಟಿಂಗ್ ವಿಚಾರದಲ್ಲಿ, ಹುಬ್ಬಳ್ಳಿ-ಧಾರವಾಡ ಅವಳಿನಗರಿಯು ರಾಜ್ಯ ರಾಜಧಾನಿ ಬೆಂಗಳೂರನ್ನೂ ಮೀರಿಸಿದೆ. ನೋಂದಣಿಯಾಗದ ಹಾಗೂ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಕೆಟ್, ಇಸ್ಪೀಟ್‌ನಂತಹ ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಮೂಲಕ ಸಾರ್ವಜನಿಕರನ್ನು ಬೆಟ್ಟಿಂಗ್‌ಗೆ ಪ್ರಚೋದಿಸುವವರ ವಿರುದ್ಧ ಈ ವರ್ಷ ರಾಜ್ಯದಲ್ಲಿ 451 ಪ್ರಕರಣಗಳು ದಾಖಲಾಗಿವೆ. ಗೃಹ ಇಲಾಖೆಯು ಸ್ಪಷ್ಟಪಡಿಸಿರುವಂತೆ, ಈ ಪ್ರಕರಣಗಳಲ್ಲಿ ಅವಳಿ ನಗರವಾದ ಹುಬ್ಬಳ್ಳಿ-ಧಾರವಾಡವೇ ಮುಂದಿದ್ದು, ಬೆಂಗಳೂರು, ಬಳ್ಳಾರಿ, ಗದಗ, ವಿಜಯನಗರ, ಬೀದರ್ ಹಾಗೂ ಕೋಲಾರ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ. 2023ರಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ 144 ಮತ್ತು 2024ರಲ್ಲಿ 73 ಪ್ರಕರಣಗಳು ದಾಖಲಾಗಿದ್ದು, ವಾಣಿಜ್ಯ ನಗರಿಯಲ್ಲಿ ಬೆಟ್ಟಿಂಗ್ ಚಟುವಟಿಕೆಗಳು ತೀವ್ರವಾಗಿ ಹೆಚ್ಚುತ್ತಿರುವುದನ್ನು ಇದು ದೃಢಪಡಿಸುತ್ತದೆ.
ಪ್ರಕರಣಗಳ ಜಿಲ್ಲಾವಾರು ವಿವರ
ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಕಳೆದ ಎರಡೂವರೆ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ 337 ಮತ್ತು ಬೆಂಗಳೂರು ನಗರದಲ್ಲಿ 240 ಪ್ರಕರಣಗಳು ದಾಖಲಾಗಿವೆ. ಇನ್ನುಳಿದಂತೆ, ವಿಜಯನಗರದಲ್ಲಿ 84, ಬಳ್ಳಾರಿಯಲ್ಲಿ 73, ಗದಗದಲ್ಲಿ 72, ಕೋಲಾರದಲ್ಲಿ 48, ಬೆಳಗಾವಿಯಲ್ಲಿ 33, ಹಾಗೂ ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ತಲಾ 29 ಪ್ರಕರಣಗಳು ದಾಖಲಾಗಿವೆ. ಚಿಕ್ಕಬಳ್ಳಾಪುರದಲ್ಲಿ 15 ಪ್ರಕರಣಗಳಿದ್ದರೆ, ಮೈಸೂರು, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ, ರಾಯಚೂರು, ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಎರಡಂಕಿಗಿಂತ ಕಡಿಮೆಯಿದೆ.
ಬೆಟ್ಟಿಂಗ್ ಬಲೆಯಲ್ಲಿ ಯುವ ಸಮುದಾಯ
ಕ್ರಿಕೆಟ್, ರೂಲೆಟ್, ರಮ್ಮಿಯಂತಹ ಆನ್‌ಲೈನ್ ಗೇಮ್‌ಗಳು ಯುವ ಸಮುದಾಯವನ್ನು ಬೆಟ್ಟಿಂಗ್ ಬಲೆಗೆ ನಿರಂತರವಾಗಿ ಸಿಲುಕಿಸುತ್ತಿವೆ. ಸುಲಭವಾಗಿ ಹಣ ಗಳಿಸುವ ಆಸೆಗೆ ಬಿದ್ದು, ಲಕ್ಷಾಂತರ ರೂಪಾಯಿ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ಉದಾಹರಣೆಗಳಿವೆ. ತಮ್ಮ ಉಳಿತಾಯದ ಹಣ ಮತ್ತು ಪಿತ್ರಾರ್ಜಿತ ಆಸ್ತಿಗಳನ್ನು ಮಾರಿ ಬೀದಿಗೆ ಬಂದಿರುವ ಪ್ರಕರಣಗಳೂ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಂಧೆಯನ್ನು ಮಟ್ಟಹಾಕಲು ಪೊಲೀಸ್ ಇಲಾಖೆಯು ಕಠಿಣ ಕ್ರಮಗಳನ್ನು ಕೈಗೊಂಡಿದೆ. ವಿವಿಧ ಜಿಲ್ಲೆಗಳ ಹೋಟೆಲ್, ಮಾಲ್, ಮತ್ತು ಇತರ ಮನರಂಜನಾ ಸ್ಥಳಗಳಲ್ಲಿ ಕೆಲಸ ಮಾಡುವ ಯುವಕರು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವ ಬಗ್ಗೆ ನಿಗಾ ವಹಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ತೆರಳಿ ಬೆಟ್ಟಿಂಗ್‌ನ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದ್ದು, ದಂಧೆಯಲ್ಲಿ ತೊಡಗಿರುವವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಕ್ಕಿಂ, ನಾಗಾಲ್ಯಾಂಡ್‌ನಿಂದ ಮೊದಲ ಕಾನೂನು
ದೇಶಾದ್ಯಂತ ಆನ್‌ಲೈನ್ ಬೆಟ್ಟಿಂಗ್ ಸಂಬಂಧ ಆಯಾ ರಾಜ್ಯಗಳಿಗೆ ಸಂಬಂಧಿಸಿದ ಕಾನೂನುಗಳಿವೆ. 1867 ರ ಕೇಂದ್ರ ಸಾರ್ವಜನಿಕ ಜೂಜಾಟ ಕಾಯ್ದೆಗೆ ಮೊದಲು, ಜೂಜಾಟ ವಿಚಾರದಲ್ಲಿ ಎಲ್ಲಾ ರಾಜ್ಯಗಳು ತಮ್ಮದೇ ಆದ ಕಾನೂನು ಮತ್ತು ನಿಯಮಗಳನ್ನು ಹೊಂದಿದ್ದವು. ನಂತರ ಈ ಕಾಯ್ದೆಯು ಭಾರತದಲ್ಲಿ ಎಲ್ಲಾ ರೀತಿಯ ಜೂಜಾಟವನ್ನು ಕಾನೂನುಬಾಹಿರವೆಂದು ಘೋಷಿಸಿತು. ಆದರೆ, ಅವಕಾಶದ ಆಟಗಳು ಮತ್ತು ಕೌಶಲ್ಯದ ಆಟಗಳ ನಡುವೆ ವ್ಯತ್ಯಾಸವನ್ನು ಗುರುತಿಸಿತು. ಸಿಕ್ಕಿಂ ಮತ್ತು ನಾಗಾಲ್ಯಾಂಡ್ ತಮ್ಮ ಶಾಸನಗಳಲ್ಲಿ ಆನ್‌ಲೈನ್ ಜೂಜಾಟಕ್ಕೆ ಸಂಬಂಧಿಸಿದ ಕಾನೂನುಗಳನ್ನು ತಂದ ಮೊದಲ ರಾಜ್ಯಗಳಾಗಿವೆ ಎಂದು ವರದಿಗಳು ಹೇಳಿವೆ.
ಇಂಟರ್‌ನೆಟ್ ಪ್ರಭಾವದಿಂದ ಹೆಚ್ಚಾದ ಬೆಟ್ಟಿಂಗ್ ದಂಧೆ
ಇಂಟರ್‌ನೆಟ್ ಬರುವ ಮುನ್ನವು ಬೆಟ್ಟಿಂಗ್ ದಂಧೆ ಇತ್ತು. ಆದರೆ ಇಂಟರ್‌ನೆಟ್ ಸೇವೆ ಆರಂಭಗೊಂಡ ಬಳಿಕ ಇದು ಆನ್‌ಲೈನ್ ಮೂಲಕ ಬೆಟ್ಟಿಂಗ್ ಪ್ರಾರಂಭವಾಯಿತು. ಅದರಲ್ಲಿಯೂ ಮೊಬೈಲ್ ಸುಲಭವಾಗಿ ಕೈಗೆ ಸಿಕ್ಕ ಬಳಿಕ ಯುವಜನಾಂಗವು ಹೆಚ್ಚಾಗಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗುವಂತಾಗಿದೆ. ವರ್ಷದಿಂದ ವರ್ಷಕ್ಕೆ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆಯು ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಿದರೂ ಸಹ ಪ್ರಕರಣಗಳು ನಡೆಯುತ್ತಿವೆ. ಬೆಟ್ಟಿಂಗ್ ಚಾಳಿ ಹಿಡಿದವರ ಸಹವಾಸವೂ ಬೆಟ್ಟಿಂಗ್‌ನಲ್ಲಿ ಭಾಗಿಯಾಗಲು ಕಾರಣವಾಗುತ್ತಿದೆ. ಕೆಲವು ಸಹ ಸುಲಭವಾಗಿ ಹಣಗಳಿಕೆ ಆಮಿಷವೂ ಅನ್‌ಲೈನ್ ಬೆಟ್ಟಿಂಗ್ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ ಎಂಬುದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.
ಜೂಜಾಟ ಮತ್ತು ಬೆಟ್ಟಿಂಗ್ ಆಟಗಳು ಸೇರಿದಂತೆ ಆನ್‌ಲೈನ್ ಆಟಗಳನ್ನು ಆಡುವುದರಿಂದ ಪ್ರತಿ ವರ್ಷ ಅಂದಾಜು 45 ಕೋಟಿ ಜನರು ಸುಮಾರು 20 ಸಾವಿರ ಕೋಟಿ ರೂ.ಗಳನ್ನು ಕಳೆದುಕೊಳ್ಳುತ್ತಾರೆ. ಆನ್‌ಲೈನ್ ಗೇಮಿಂಗ್ ನಿರ್ದಿಷ್ಟವಾಗಿ ಹಣವನ್ನು ಒಳಗೊಂಡಿರುವ ಬೆಟ್ಟಿಂಗ್ ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿದೆ. ಆನ್‌ಲೈನ್ ಗೇಮಿಂಗ್ ವೆಬ್‌ಸೈಟ್‌ಗಳಿಂದ ಕೆಲವರು ಕೋಟ್ಯಂತರ ರೂ. ಗಳಿಸಿದರೆ, ಬಹಳಷ್ಟು ಮಂದಿ ಹಣ ಕಳೆದುಕೊಳ್ಳುತ್ತಾರೆ ಎಂದಿದ್ದಾರೆ.
ಹಿರಿಯ ವಕೀಲರಾದ ಎ. ನಾಗೇಶ್ ಅವರು 'ದ ಫೆಡರಲ್ ಕರ್ನಾಟಕ' ಪತ್ರಿಕೆಯ ಜೊತೆ ಈ ಕುರಿತು ಮಾತನಾಡಿ "ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ಲಭ್ಯವಿರುವ ಜಾಹೀರಾತುಗಳಿಂದ ಯುವಜನಾಂಗ ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ. ನಮ್ಮ ಬೆರಳ ತುದಿಯಲ್ಲೇ ಎಲ್ಲಾ ರೀತಿಯ ಮಾಹಿತಿಗಳು ಲಭ್ಯವಿದ್ದರೂ, ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವ ಅರಿವು ಇಲ್ಲದಿರುವುದು ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಇಂಟರ್‌ನೆಟ್ ಮೂಲಕ ಸುಲಭವಾಗಿ ಹಣ ಗಳಿಸಬಹುದು ಎಂಬ ಆಸೆ ಆನ್‌ಲೈನ್ ಬೆಟ್ಟಿಂಗ್ ಹೆಚ್ಚಾಗಲು ಮತ್ತೊಂದು ಕಾರಣ. ಇದರಿಂದ ಪ್ರಾರಂಭದಲ್ಲಿ ಕೇವಲ ಆಸಕ್ತಿಯಿಂದ ಶುರುವಾದ ಆನ್‌ಲೈನ್ ಗೇಮಿಂಗ್ ನಂತರ ಚಟವಾಗಿ ಪರಿವರ್ತನೆಗೊಂಡು ಸಾಲ ಮಾಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಈ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸುವುದು ಕೇವಲ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿ ಮಾತ್ರವಲ್ಲದೆ, ಪೋಷಕರ ಜವಾಬ್ದಾರಿಯೂ ಆಗಿದೆ. ತಮ್ಮ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಗಮನಹರಿಸುವುದು ಮತ್ತು ಸರಿಯಾದ ಮಾರ್ಗದರ್ಶನ ನೀಡುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ.