CAG Report | 1,120 ಕೋಟಿ ರೂ. ತೆರಿಗೆ ವಂಚನೆ; ವಾಣಿಜ್ಯ ತೆರಿಗೆ ಇಲಾಖೆಯಲ್ಲೇ 9,382 ಪ್ರಕರಣ ಬಾಕಿ

2021 ರಿಂದ 2023 ರವರೆಗಿನ ಅವಧಿಯಲ್ಲಿ 15,479 ತೆರಿಗೆ ವಂಚನೆ ಪ್ರಕರಣಗಳಿಂದ ಒಟ್ಟು1,120.34 ಕೋಟಿಗೂ ಅಧಿಕ ತೆರಿಗೆ ವಂಚನೆ ನಡೆದಿದೆ ಎಂದು ಸಿಎಜಿ ಬಿಡುಗಡೆ ಮಾಡಿರುವ ರಾಜಸ್ವ ಲೆಕ್ಕಪರಿಶೋಧನೆ ಭಾಗ-2 ರಲ್ಲಿ ಉಲ್ಲೇಖಿಸಿದೆ.;

Update: 2025-01-01 14:09 GMT
ಮಹಾಲೇಖಪಾಲರ ಕಚೇರಿ

ವಾಣಿಜ್ಯ ತೆರಿಗೆ ಇಲಾಖೆ ರಾಜ್ಯಾದ್ಯಂತ 15,465 ತೆರಿಗೆ ವಂಚನೆ ಪ್ರಕರಣಗಳನ್ನು ಬೇಧಿಸಿದ್ದು, ತೆರಿಗೆ ವಂಚಿಸಿದವರ ವಿರುದ್ಧ ಪ್ರಕರಣ ದಾಖಲಿಸಿದೆ. ಆದರೆ, 9,882 ಪ್ರಕರಣಗಳನ್ನು ಈವರೆಗೂ ಇತ್ಯರ್ಥಪಡಿಸಿಲ್ಲ ಎಂದು ಮಹಾಲೇಖಪಾಲರ(ಸಿಎಜಿ) ವರದಿ ಹೇಳಿದೆ.

2021 ರಿಂದ 2023 ರವರೆಗಿನ ಅವಧಿಯ ಈ ಪ್ರಕರಣಗಳಿಂದ ಒಟ್ಟು1,120.34 ಕೋಟಿಗೂ ಅಧಿಕ ತೆರಿಗೆ ವಂಚನೆ ನಡೆದಿದೆ ಎಂದು ಸಿಎಜಿ ಬಿಡುಗಡೆ ಮಾಡಿರುವ ರಾಜಸ್ವ ಲೆಕ್ಕಪರಿಶೋಧನೆ ಭಾಗ-2 ರಲ್ಲಿ ಉಲ್ಲೇಖಿಸಿದೆ.

ವಾಣಿಜ್ಯ ತೆರಿಗೆ ಇಲಾಖೆ ಒಂದರಲ್ಲೇ 15,465 ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ 6,083 ಪ್ರಕರಣಗಳನ್ನು ವಿಚಾರಣೆ ಮತ್ತು ತನಿಖೆಗೆ ಒಳಪಡಿಸಿದ್ದು, 1,120.34 ಕೋಟಿ ನಷ್ಟವಾಗಿದೆ. ಈ ಪ್ರಕರಣಗಳಲ್ಲಿ ದಂಡ ವಸೂಲಿಗೂ ತೀರ್ಮಾನಿಸಿದೆ. ಉಳಿದ 9,382 ಪ್ರಕರಣಗಳನ್ನು ಈವರೆಗೂ ತನಿಖೆ ನಡೆಸಿ, ಇತ್ಯರ್ಥಪಡಿಸಿಲ್ಲ. ಈ ಪ್ರಕರಣಗಳಲ್ಲಿ ಆಗಿರುವ ನಷ್ಟದ ಮೊತ್ತವನ್ನೂ ಅಂದಾಜಿಸಿಲ್ಲ. ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಿಂತ ವಾಣಿಜ್ಯ ತೆರಿಗೆ ಇಲಾಖೆ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚು ಮುತುವರ್ಜಿ ವಹಿಸಿದ್ದರೂ ಗಮನಾರ್ಹ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿವೆ. ಇದರಿಂದ ಸರ್ಕಾರಕ್ಕಾಗಿರುವ ನಷ್ಟ ಹಾಗೆಯೇ ಉಳಿದಿದೆ ಎಂದು ವರದಿ ಹೇಳಿದೆ.

ಇನ್ನು ಅಬಕಾರಿ ಇಲಾಖೆಯಲ್ಲಿ ಕೇವಲ ಮೂರು ತೆರಿಗೆ ವಂಚನೆ ಪ್ರಕರಣಗಳು ದಾಖಲಾಗಿವೆ. ಇವುಗಳಿಂದ ಆಗಿರುವ ನಷ್ಟ ಸೇರಿದಂತೆ ಯಾವುದನ್ನೂ ಇತ್ಯರ್ಥ ಮಾಡಿಲ್ಲ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತೆರಿಗೆ ವಂಚನೆಯ 11 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ಒಂದನ್ನು ಹೊರತುಪಡಿಸಿ ಉಳಿದ ಪ್ರಕರಣಗಳನ್ನು ಇತ್ಯರ್ಥ ಮಾಡಿಲ್ಲ. ಪ್ರಕರಣ ಇತ್ಯರ್ಥ ಮಾಡದ ಹೊರತು ನಷ್ಟದ ಪ್ರಮಾಣ ಅಂದಾಜಿಗೆ ಸಿಕ್ಕಿಲ್ಲ ಎಂದು ಮಹಾಲೇಖಪಾಲರ ವರದಿ ಹೇಳಿದೆ.

ಇನ್ನೂ ಮರುಪಾವತಿ ವ್ಯವಸ್ಥೆಯಲ್ಲೂ ವಾಣಿಜ್ಯ ಇಲಾಖೆ ಅತ್ಯಲ್ಪ ಪ್ರಗತಿ ಸಾಧಿಸಿದೆ. ಇಲಾಖೆಯಲ್ಲಿ ಮರುಪಾವತಿ ಕೋರಿರುವ ಒಟ್ಟು 9,254 ಅರ್ಜಿಗಳ ಪೈಕಿ 8,094 ಪ್ರಕರಣಗಳಲ್ಲಿ 5,496.91 ಕೋಟಿ ರೂ.ಗಳನ್ನು ಮರುಪಾವತಿ ಮಾಡಿದೆ. ಉಳಿದವುಗಳಿಗೆ ಮರು ಪಾವತಿ ಮಾಡಿಲ್ಲ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಮರುಪಾವತಿಗಾಗಿ 6,863 ಅರ್ಜಿಗಳು ಬಂದಿದ್ದು, 4,844 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ₹79.99 ಕೋಟಿ ಮರುಪಾವತಿ ಮಾಡಿದ್ದು, ಇನ್ನೂ 5,851 ಅರ್ಜಿಗಳು ಬಾಕಿ ಉಳಿದಿವೆ. ಇದರ ಮೊತ್ತ ₹38.68 ಕೋಟಿ ಇದೆ. ಅಬಕಾರಿ ಇಲಾಖೆ ಮರುಪಾವತಿಯ ಯಾವುದೇ ಮಾಹಿತಿ ಒದಗಿಸಿಲ್ಲ ಎಂದು ಸಿಎಜಿ ವರದಿ ತಿಳಿಸಿದೆ.

Tags:    

Similar News